ನವದೆಹಲಿ (ನ. 06):  ಮಾರ್ಚ್ ಕೊನೇ ವಾರದಿಂದ ಕೊರೋನಾ ಕಾರಣ ಬಂದ್‌ ಆಗಿದ್ದ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು ನವೆಂಬರ್‌ 17ರಿಂದ ಆರಂಭ ಆಗುತ್ತಿವೆ. ಈ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮಾರ್ಗಸೂಚಿ ಹೊರಡಿಸಿದೆ.

ಇದೇ ವೇಳೆ ಕೇಂದ್ರೀಯ ವಿಶ್ವವಿದ್ಯಾಲಯಗಳು ಹಾಗೂ ಕೇಂದ್ರ ಸರ್ಕಾರಿ ಅನುದಾನಿಕ ಶೈಕ್ಷಣಿಕ ಸಂಸ್ಥೆಗಳ ಆರಂಭದ ವಿವೇಚನೆಯನ್ನು ಆಯಾ ಕುಲಪತಿಗಳು ಹಾಗೂ ಮುಖ್ಯಸ್ಥರ ವಿವೇಚನೆಗೆ ಬಿಡಲಾಗಿದೆ. ಅಂತೆಯೇ ರಾಜ್ಯ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಆರಂಭದ ವಿವೇಚನೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ.

ಆಂಧ್ರ ಆಯ್ತು.. ಕಾಲೇಜು ಆರಂಭಕ್ಕೆ ಡೇಟ್ ಫಿಕ್ಸ್, ಕೆಲ ಕಂಡೀಶನ್!

ಮಾರ್ಗಸೂಚಿಗಳು:

- ಕಂಟೇನ್ಮೆಂಟ್‌ ವಲಯದ ಹೊರಗಿದ್ದರೆ ಮಾತ್ರ ವಿವಿ ಹಾಗೂ ಕಾಲೇಜು ಆರಂಭ. ಕಂಟೇನ್ಮೆಂಟ್‌ ವಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯು ಕಾಲೇಜಿಗೆ ಬರಕೂಡದು.

- ಕಂಟೇನ್ಮೆಂಟ್‌ ವಲಯಗಳಿಗೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಬಾರದು.

- ಹಂತ ಹಂತವಾಗಿ ಕ್ಯಾಂಪಸ್‌ಗಳನ್ನು ತೆರೆಯಬೇಕು. ತರಗತಿ ಕೊಠಡಿಗಳಲ್ಲಿ ಸಾಮಾಜಿಕ ಅಂತರ, ಫೇಸ್‌ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಕಡ್ಡಾಯ.

- ಆವರಣದ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನ್‌ ಮಾಡಿ ಸಿಬ್ಬಂದಿ/ವಿದ್ಯಾರ್ಥಿಗಳನ್ನು ಒಳಗೆ ಬಿಡಬೇಕು.

- ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

- ಕಾಲೇಜು ಬಸ್‌ಗಳನ್ನು ಸ್ಯಾನಿಟೈಸ್‌ ಮಾಡಬೇಕು. ಸಿಬ್ಬಂದಿಗಳು/ವಿದ್ಯಾರ್ಥಿಗಳು ಶುಚಿತ್ವ ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಸೋಪಿನಿಂದ 1 ನಿಮಿಷ ಕಾಲ ಕೈತೊಳೆಯಬೇಕು.

- ವಿವಿ/ಕಾಲೇಜಿನಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ, ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ಪೂರ್ಣ ಸಂಖ್ಯೆಯಲ್ಲಿ ತರಗತಿಗೆ ಹಾಜರಾಗಬಹುದು.

- ಕಾಲೇಜು ಆವರಣದಲ್ಲಿ ಶುಚಿತ್ವ ಪಾಲನೆ ಕಡ್ಡಾಯ. ಶುದ್ಧ ಕುಡಿವ ನೀರಿನ ವ್ಯವಸ್ಥೆ ಇರಬೇಕು. ಉಗುಳುವಿಕೆ ನಿಷೇಧ.

- ವಿದೇಶೀ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿಗೆ ಬರಲು ಆಗದವರಿಗೆ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಮಾಡಬೇಕು. ಹೊರರಾಜ್ಯದಿಂದ ಬರುವವರು 14 ದಿನಗಳ ಕ್ವಾರಂಟೈನ್‌ ಮುಗಿಸಿ ಕಾಲೇಜಿಗೆ ಬರಬೇಕು.

- ಕೋವಿಡ್‌ ನೆಗೆಟಿವ್‌ ಇದ್ದರೂ 14 ದಿನಗಳ ಕ್ವಾರಂಟೈನ್‌ ಅವಧಿ ಕಡ್ಡಾಯ. ಹವಾನಿಯಂತ್ರಿತ ವ್ಯವಸ್ಥೆಯು ಮಾನದಂಡಕ್ಕೆ ಅನುಗುಣವಾಗಿ 24ರಿಂದ 30 ಡಿಗ್ರಿವರೆಗೆ ಇರಬೇಕು.

- ಕಾಲೇಜು ಆವರಣದಲ್ಲಿ ಸ್ವಿಮ್ಮಿಂಗ್‌ ಪೂಲ್‌ ಇದ್ದರೆ ತೆರೆಯಲು ಬಿಡಬಾರದು. ತೀರ ಅನಿವಾರ್ಯವಿದ್ದರೆ ಮಾತ್ರ ಹಾಸ್ಟೆಲ್‌ ತೆರೆಯಬೇಕು. ರೋಗಲಕ್ಷಣ ಇರುವವರಿಗೆ ಹಾಸ್ಟೆಲ್‌ ಪ್ರವೇಶಕ್ಕೆ ಅವಕಾಶವಿಲ್ಲ.

- ಕೋಣೆಯಲ್ಲಿ ಶೇರಿಂಗ್‌ ಬದಲು ಒಬ್ಬನೇ ವಿದ್ಯಾರ್ಥಿಗೆ ಅವಕಾಶ ನೀಡಬೇಕು. ಹಾಸ್ಟೆಲ್‌ನ ಊಟದ ಮನೆ, ಆಟದ ಮೈದಾನ, ಕೊಠಡಿಯಲ್ಲಿ ಸಾಮಾಜಿಕ ಅಂತರ ಕಡ್ಡಾಯ. ಹಾಸ್ಟೆಲ್‌ ಸಿಬ್ಬಂದಿ ಮಾಸ್ಕ್‌ ಧರಿಸಿರಬೇಕು. ಕಾಲಕಾಲಕ್ಕೆ ಸ್ಯಾನಿಟೈಸ್‌ ಮಾಡಬೇಕು. ಕಾಲೇಜಿನಲ್ಲಿ 50 ವರ್ಷ ದಾಟಿದವರು, ಗರ್ಭಿಣಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು