ಬೆಂಗಳೂರು(ನ.16): ಕೊರೋನಾ ಕಾರಣ ಕಳೆದ 9 ತಿಂಗಳಿಂದ ಸ್ಥಗಿತಗೊಂಡಿದ್ದ ರಾಜ್ಯದ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು, ಸರ್ಕಾರದ ಆದೇಶದಂತೆ ನ.17ರ ಮಂಗಳವಾರದಿಂದ ಶೈಕ್ಷಣಿಕ ಚಟುವಟಿಕೆಗಳ ಪುನಾರಂಭಕ್ಕೆ ಸರ್ವಸಿದ್ಧತೆ ಮಾಡಿಕೊಂಡಿವೆ.

"

ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ತರಗತಿ ಕೊಠಡಿಗಳು, ಹಾಸ್ಟೆಲ್‌ ಕೊಠಡಿಗಳು, ಶೌಚಾಲಯ, ಪ್ರಯೋಗಾಲಯಗಳ ಸ್ವಚ್ಛತೆ ಹಾಗೂ ಸ್ಯಾನಿಟೈಸ್‌ ಮಾಡಲಾಗಿದೆ. ಮೊದಲ ಹಂತದಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಖುದ್ದು ತರಗತಿ ಹಾಜರಾತಿಗೆ ಅವಕಾಶವಿರುತ್ತದೆ. ಉಳಿದ ವರ್ಷಗಳ ವ್ಯಾಸಂಗದ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಆನ್‌ಲೈನ್‌ ಶಿಕ್ಷಣ ನೀಡಲು ವಿವಿಗಳು ಮತ್ತು ಕಾಲೇಜುಗಳು ತೀರ್ಮಾನಿಸಿವೆ. ಹಂತ ಹಂತವಾಗಿ ಎಲ್ಲ ವಿದ್ಯಾರ್ಥಿಗಳಿಗೂ ಭೌತಿಕ ತರಗತಿ ಆರಂಭಿಸುವುದಾಗಿ ಹೇಳಿವೆ.

ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಪೋಷಕರಿಂದ ಲಿಖಿತ ಒಪ್ಪಿಗೆ ಪತ್ರ ನೀಡಬೇಕು. ಬೋಧಕ ವರ್ಗ ಸೇರಿದಂತೆ ಎಲ್ಲ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು 72 ಗಂಟೆ ಮುಂಚಿತವಾಗಿ ಕೋವಿಡ್‌-19 ಆರ್‌ಟಿಪಿಸಿಆರ್‌ ಪರೀಕ್ಷೆಗೊಳಗಾಗಿ ನೆಗೆಟಿವ್‌ ವರದಿ ನೀಡಬೇಕು ಎಂದು ಸೂಚಿಸಿವೆ. ತರಗತಿಗೆ ಹಾಜರಾಗುವಾಗ ಕಡ್ಡಾಯವಾಗಿ ಮಾಸ್ಕ್‌ ಹಾಕಿರಬೇಕು, ಕಾಲೇಜು ಆವರಣ, ತರಗತಿಗಳಲ್ಲಿ ವಿದ್ಯಾರ್ಥಿಗಳು ಗುಂಪುಗೂಡದೆ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪೋಷಕರ ಒಪ್ಪಿಗೆ ಪತ್ರ ಹಾಗೂ ಕೋವಿಡ್‌ ಪರೀಕ್ಷೆ ಮಾಡಿಸದ ವಿದ್ಯಾರ್ಥಿಗಳಿಗೆ ಹಾಜರಾತಿ ನೀಡಲಾಗುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿವೆ.

ವಿವಿಗಳಲ್ಲಿ ಸರ್ವ ಸಿದ್ಧತೆ:

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಸಂಯೋಜಿತ ಕಾಲೇಜುಗಳು ತರಗತಿ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿವೆ.

‘ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ತನ್ನೆಲ್ಲ ಸಂಯೋಜಿತ ಕಾಲೇಜುಗಳ ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ತರಗತಿಗೆ ಬರುವ ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿ ಎಲ್ಲರಿಗೂ ಕೋವಿಡ್‌ ಪರೀಕ್ಷೆ ಕಡ್ಡಾಯ’ ಎಂದು ವಿವಿಯ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ತಿಳಿಸಿದ್ದಾರೆ.

‘ನ.17ರಿಂದ ತಮ್ಮ ವಿಭಾಗ, ಕಾಲೇಜುಗಳನ್ನು ಆರಂಭಿಸುವಂತೆ ವಿವಿಯ ಎಲ್ಲಾ ನಿಖಾಯಗಳು, ವಿಷಯ ವಿಭಾಗಗಳ ಮುಖ್ಯಸ್ಥರಿಗೆ ಹಾಗೂ ಕಾಲೇಜುಗಳ ಪ್ರಾಂಶುಪಾಲರ ಸಭೆ ನಡೆಸಿ ಸೂಚಿಸಲಾಗಿದೆ. ಯುಜಿಸಿ ಮಾರ್ಗಸೂಚಿಗಳ ಅನುಸಾರ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಿಳಿಸಲಾಗಿದೆ. ಅಂತಿಮ ವರ್ಷದ ವ್ಯಾಸಂಗದ ವಿದ್ಯಾರ್ಥಿಗಳಿಗೆ ಮಾತ್ರ ಭೌತಿಕ ತರಗತಿಗಳನ್ನು ನಡೆಸಲಾಗುವುದು, ಉಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಆರಂಭಿಸಲಾಗುವುದು’ ಎಂದು ಹೇಳಿದ್ದಾರೆ.

‘ವಿವಿಯಲ್ಲಿ ಅಗತ್ಯ ಸಿದ್ದತೆ ಹಾಗೂ ಕೋವಿಡ್‌ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆ ಮಾಡಲಿವೆ. ವಿವಿ, ಕಾಲೇಜು ಕಟ್ಟಡಗಳು, ಶೌಚಾಲಯ, ತರಗತಿ ಕೊಠಡಿಗಳು, ಪ್ರಯೋಗಾಲಯಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಲಭ್ಯ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಸುರಕ್ಷಾ ಕ್ರಮಗಳೊಂದಿಗೆ ಬೋಧನೆಗೆ ಕ್ರಮ ವಹಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತಿಮ ವರ್ಷಕ್ಕೆ ಮಾತ್ರ ತರಗತಿ

1. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಭೌತಿಕ ತರಗತಿ ಪುನಾರಂಭ

2. ಉಳಿದ ವರ್ಷಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಮುಂದುವರಿಕೆ

3. ತರಗತಿ, ಶೌಚಾಲಯ, ಪ್ರಯೋಗಾಲಯಗಳ ಸ್ಯಾನಿಟೈಸೇಷನ್‌ ಕಡ್ಡಾಯ

4. ಪೋಷಕರ ಒಪ್ಪಿಗೆ ಪತ್ರ ಇರಬೇಕು, ಕೊರೋನಾ ನೆಗೆಟಿವ್‌ ಆಗಿರಬೇಕು

5. ಮಾಸ್ಕ್‌ ಧರಿಸಿರಬೇಕು, ಕಾಲೇಜಲ್ಲಿ ಸಾಮಾಜಿಕ ಅಂತರ ಪಾಲಿಸಬೇಕು