ಶಿಕ್ಷಣದ ಅಂತಾರಾಷ್ಟ್ರೀಕರಣದತ್ತ ಸರಕಾರದ ಕ್ರಾಂತಿಕಾರಿ ಹೆಜ್ಜೆ

* ಶಿಕ್ಷಣದ ಅಂತಾರಾಷ್ಟ್ರೀಕರಣದತ್ತ ಸರಕಾರದ ಕ್ರಾಂತಿಕಾರಿ ಹೆಜ್ಜೆ 
* ಅಮೆರಿಕದ ಕಾಲೇಜಿನೊಂದಿಗೆ ಒಡಂಬಡಿಕೆ
* ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ 2 ವಿನೂತನ ಡಿಪ್ಲೊಮಾ ಕೋರ್ಸ್ ಆರಂಭ 

twinning program in partnership between  Karnataka Govt and USA Montgomery County Community College  rbj

ಬೆಂಗಳೂರು, (ಅ.25): ಎನ್ಇಪಿ ಆಶಯದಂತೆ ಶಿಕ್ಷಣವನ್ನು ಅಂತಾರಾಷ್ಟ್ರೀಕರಣ ಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಮಾಂಟ್ಗೊಮೆರಿ ಕೌಂಟಿ ಕಮ್ಯುನಿಟಿ ಕಾಲೇಜಿನೊಂದಿಗೆ ರಾಜ್ಯದ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ (ಟ್ವಿನ್ನಿಂಗ್) ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಚಾಲನೆ ನೀಡಿದರು. 

ಇದರ ಅಂಗವಾಗಿ ಇಂದು (ಅ.25) ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಒಡಂಬಡಿಕೆಯಿಂದಾಗಿ, ರಾಜ್ಯದ ವಿದ್ಯಾರ್ಥಿಗಳು ಜಾಗತಿಕ ಗುಣಮಟ್ಟದ ಶಿಕ್ಷಣ ಪಡೆಯುವುದು ಸಾಧ್ಯವಾಗಲಿದೆ. ಈ ಟ್ವಿನ್ನಿಂಗ್ ಕಾರ್ಯಕ್ರಮವು ಇಡೀ ದೇಶದಲ್ಲೇ ಪ್ರಪ್ರಥಮವಾಗಿದ್ದು, ಕ್ರಾಂತಿಕಾರಿ ಕಾರ್ಯಕ್ರಮವಾಗಿದೆ ಎಂದರು. 

4,600 ಕೋಟಿ ವೆಚ್ಚದಲ್ಲಿ 150 ITI ಮೇಲ್ದರ್ಜೆಗೆ: ಅಶ್ವತ್ಥನಾರಾಯಣ

ಈ ಒಡಂಬಡಿಕೆಯನ್ವಯ ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ನಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ 3 ವರ್ಷಗಳ ಪ್ರವಾಸೋದ್ಯಮ ಮತ್ತು ಆತಿಥ್ಯೋದ್ಯಮ, ಹಾಗೂ ಸೈಬರ್ ಸೆಕ್ಯುರಿಟಿ ಡಿಪ್ಲೊಮಾ ಆರಂಭವಾಗಲಿದ್ದು, ತಲಾ 24 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಪ್ರತೀ ವಿದ್ಯಾರ್ಥಿಗೂ ತಗುಲುವ 20 ಲಕ್ಷ ರೂ.ವೆಚ್ಚವನ್ನು ಸರಕಾರವೇ ಸಂಪೂರ್ಣ ಭರಿಸುತ್ತಿದೆ. ಇದು ಬೋಧನಾ ಶುಲ್ಕ, ವಸತಿ ಶುಲ್ಕ, ಸ್ಥಳೀಯ ಸಾರಿಗೆ ಮತ್ತು ವೈದ್ಯಕೀಯ ವಿಮೆಗಳನ್ನು ಒಳಗೊಂಡಿದೆ ಎಂದು ಅವರು ನುಡಿದರು. 

ಈ ಕೋರ್ಸುಗಳಲ್ಲಿ ವಿದ್ಯಾರ್ಥಿಗಳು ಮೊದಲ ವರ್ಷ ಸ್ಥಳೀಯವಾಗಿ ಕಲಿಯಲಿದ್ದು, ಎರಡನೇ ವರ್ಷದಲ್ಲಿ ಮಾಟ್ಗೊಮೆರಿ ಕೌಂಟಿ ಕಾಲೇಜಿನ ನುರಿತ ಬೋಧಕರು ಆನ್‌ಲೈನ್ ಮೂಲಕ ಬೋಧಿಸಲಿದ್ದಾರೆ. ಮೂರನೇ ವರ್ಷದಲ್ಲಿ ರಾಜ್ಯದ ವಿದ್ಯಾರ್ಥಿಗಳು ಅಮೆರಿಕಕ್ಕೇ ಹೋಗಿ 12 ಕೋರ್ಸುಗಳನ್ನು ಕಲಿಯಲಿದ್ದಾರೆ. ಈ ಮೂಲಕ ನಮ್ಮ ಶಿಕ್ಷಣ ಕ್ರಮದಲ್ಲಿ ಆಮೂಲಾಗ್ರ ಸುಧಾರಣೆಗೆ ನಾಂದಿ ಹಾಡಲಾಗುತ್ತಿದೆ ಎಂದು ಸಚಿವರು ಹೇಳಿದರು. 

ಮೂರನೇ ವರ್ಷ ಅಮೆರಿಕಕ್ಕೆ ಹೋಗುವ ವಿದ್ಯಾರ್ಥಿಗಳು ಅಲ್ಲಿ ಉದ್ಯೋಗವನ್ನೂ ಮಾಡಲಿದ್ದು, 25-30 ಲಕ್ಷ ರೂ.ಗಳನ್ನು ಸಂಪಾದಿಸಲಿದ್ದಾರೆ. ಇದಕ್ಕಾಗಿ ಒಡಂಬಡಿಕೆಯಲ್ಲಿ ಅಮೆರಿಕದ 30 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ ಡಿಪ್ಲೊಮಾ ಅಧ್ಯಯನದ ನಂತರ ಮಾಂಟ್ಗೊಮೆರಿ ಕಮ್ಯುನಿಟಿ ಕಾಲೇಜಿನ ವತಿಯಿಂದ ಅಸೋಸಿಯೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದರು. 

ಟ್ವಿನ್ನಿಂಗ್ ಕಾರ್ಯಕ್ರಮದಡಿ ಅಮೆರಿಕಕ್ಕೆ ಹೋಗುವ ರಾಜ್ಯದ ವಿದ್ಯಾರ್ಥಿಗಳು ಅಲ್ಲಿ 24/7 ಆನ್ ಲೈನ್ ಬೋಧನೆ, ಗ್ರಂಥಾಲಯ, ಶೈಕ್ಷಣಿಕ ಸಲಹೆ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ, ಅಥ್ಲೆಟಿಕ್ ಕ್ಲಬ್ ಗಳ ಸೇವೆಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು. 

ರಾಜ್ಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಮಾಂಟ್ಗೊಮೆರಿ ಕೌಂಟಿ ಕಾಲೇಜು 56 ವರ್ಷಗಳ ಇತಿಹಾಸ ಹೊಂದಿದ್ದು, ರಾಜ್ಯದಲ್ಲಿ ತಮ್ಮದೇ ಆದ ಕ್ಯಾಂಪಸ್ ತೆರೆಯುವಂತೆ ಅಶ್ವತ್ಥನಾರಾಯಣ ಆಹ್ವಾನ ನೀಡದರು. ಈ ಕಾಲೇಜು 100ಕ್ಕೂ ಹೆಚ್ಚು ಅಸೋಸಿಯೇಟ್ ಪದವಿ ಮತ್ತು ಸರ್ಟಿಫಿಕೇಟ್ ಪ್ರೋಗ್ರಾಂಗಳನ್ನು ಹೊಂದಿದೆ. 

ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ., ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಆರ್. ಮಂಜುನಾಥ್ ಇದ್ದರು. 

ಹಾಗೆಯೇ ಮೌಂಟ್ಗೊಮೆರಿ ಕಾಲೇಜಿನ ಅಧ್ಯಕ್ಷೆ ಡಾ.ವಿಕ್ಟೋರಿಯಾ ಬಾಸ್ಟೆಕಿ ಪೆರೇರಾ, ಖಜಾಂಚಿ ಮಾರ್ಸೆಲ್ ಗ್ರೋಯೆನ್, ಪ್ರತಿನಿಧಿ ಮ್ಯಾಡಲಿನ್ ಡೀನ್, ಪೆನ್ಸಿಲ್ವೇನಿಯಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ನೋ ಒರ್ಟೆಗಾ ಅವರು ವರ್ಚುಯಲ್ ಆಗಿ ಪಾಲ್ಗೊಂಡರು.

ಕೂಲಿಯವರ ಮಕ್ಕಳಿಗೂ ಖುಲಾಯಿಸಿದ ಅದೃಷ್ಟ 
ಅಮೆರಿಕದಲ್ಲಿ ಓದಲು ಅವಕಾಶ ಮಾಡಿಕೊಡುವ ಈ ವಿಶಿಷ್ಟ ಡಿಪ್ಲೊಮಾ ಕೋರ್ಸುಗಳಲ್ಲಿ‌ ಕೂಲಿ ಕಾರ್ಮಿಕರ ಮಕ್ಕಳು ಸೇರಿದಂತೆ ಎಲ್ಲರಿಗೂ ಅವಕಾಶ ಸಿಕ್ಕಿರುವುದು ಹರ್ಷ ತಂದಿದೆ ಎಂದು ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು. 

ರಾಜ್ಯದ ಡಿಪ್ಲೊಮೊ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದ ಅತ ಹೆಚ್ವು ಅಂಕ ಪಡೆದಿದ್ದ ಒಟ್ಟು 48 ಮಂದಿಯನ್ನು ಎರಡೂ ಕೋರ್ಸ್ ಗಳ ಪ್ರವೇಶಕ್ಕೆ ಆಯ್ಕೆ ಮಾಡಲಾಗಿದೆ. ಈ ಕೋರ್ಸ್ ಗಳ ಸಲುವಾಗಿ ಐದು ಸಾವಿರಕ್ಕೂ ಹೆಚ್ವು ಮಂದಿ ಇದ್ದರು. ಆಯ್ಕೆ ವಿಷಯದಲ್ಲಿ ಮೀಸಲಾತಿ‌ ನಿಯಮಗಳನ್ನು ಪಾಲಿಸಲಾಗಿದೆ. 

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ನವೀನ್, ಹೊಸದುರ್ಗದ ಟಿ.ಎ.ತರುಣ್ ಮತ್ತು ಮಂಡ್ಯದ ಎಸ್.ಎನ್.ಧನುಷ್ ಅವರನ್ನು ಸಚಿವರು ಅಭಿನಂದಿಸಿದರು. 

ಈ ಪೈಕಿ ನವೀನ್ ಗೆ ತಂದೆ ಇಲ್ಲ. ಈತನ ತಾಯಿ ಕೂಲಿ ಮಾಡುತ್ತಿದ್ದು, ಈತ ಎಸ್ಸೆಸ್ಸೆಲ್ಸಿಯಲ್ಲಿ ಶೇ.91ರಷ್ಟು ಅಂಕ ಗಳಿಸಿ, ಹೊಸದುರ್ಗದ ಸರಕಾರಿ ಪಾಲಿಟೆಕ್ನಿಕ್ಕಿನಲ್ಲಿ ಈಗಾಗಲೇ ಓದುತ್ತಿದ್ದ. ಮಿಕ್ಕಂತೆ ತರುಣ್ ಹೊಸದುರ್ಗದ ಹುಡುಗನಾಗಿದ್ದು, ಈತ 10ನೇ ತರಗತಿಯಲ್ಲಿ ಶೇ.90.24ರಷ್ಟು ಅಂಕ ಗಳಿಕೆ ಸಾಧನೆ ಮಾಡಿದ್ದ. ಈತನ ತಂದೆ ಅಕ್ಕಿ ವ್ಯಾಪಾರಿಯಾಗಿದ್ದಾರೆ. ಮತ್ತೊಬ್ಬನಾದ ಧನುಷ್ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಶಿಕ್ಷಕಿಯಾಗಿದ್ದಾರೆ. ಎಲ್ಲ‌ ಮಕ್ಕಳು ಬೆಂಗಳೂರಿನ ಎಸ್.ಜೆ.ಪಿ.ಯಲ್ಲಿ ವ್ಯಾಸಂಗ ಮಾಡಲಿದ್ದು ಅವರಿಗೆ ಹಾಸ್ಟೆಲ್ ಸೇರಿದಂತೆ ಸಕಲ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು. 

ಈ ಸಂದರ್ಭದಲ್ಲಿ ಮಾತನಾಡಿದ ಈ ವಿದ್ಯಾರ್ಥಿಗಳು, `ನಾವು ಜೀವನದಲ್ಲಿ ಬೆಂಗಳೂರನ್ನು ನೋಡುವುದು ಕಷ್ಟವಾಗಿತ್ತು. ರಾಜ್ಯ ಸರಕಾರ ಅದರಲ್ಲೂ ವಿಶೇಷವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರ ಆಸಕ್ತಿಯಿಂದಾಗಿ ನಮಗೀಗ ದೂರದ ಅಮೆರಿಕಕ್ಕೆ ಹೋಗಿ ಓದುವ ಅವಕಾಶ ನಮ್ಮದಾಗಿದೆ’ ಎಂದು ಸಂತಸ ಹಂಚಿಕೊಂಡರು. 

ಈ ವಿದ್ಯಾರ್ಥಿಗಳನ್ನು ವರ್ಚುಯಲ್ ವೇದಿಕೆಯಲ್ಲಿ ಅಮೆರಿಕದ ಕಾಲೇಜಿನ ಮುಖ್ಯಸ್ಥರು ಮತ್ತಿತರರಿಗೆ ಪರಿಚಯಿಸಿ ಕೊಡಲಾಯಿತು. ಈ ಪ್ರತಿಭಾವಂತರನ್ನು ನೋಡಿ ಅತ್ತಲಿಂದ ಅವರೂ ಸಂತಸಪಟ್ಟರು.

Latest Videos
Follow Us:
Download App:
  • android
  • ios