ಪಠ್ಯ ವಿವಾದದಲ್ಲಿ ರಾಜಕೀಯಕ್ಕೆ ಯತ್ನ: ಸಿದ್ದು
ಪಠ್ಯ ಪರಿಷ್ಕರಣೆಯಲ್ಲಾಗಿರುವ ಪ್ರಮಾದಗಳ ಬಗ್ಗೆ ಸಮರ್ಪಕ ಮಾಹಿತಿ ಇದ್ದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಲ್ಲವೇ ಶಿಕ್ಷಣ ಸಚಿವರು ಸತ್ಯ ಸಂಗತಿಗಳನ್ನು ವಿವರಿಸಬೇಕಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರು (ಜೂ.25): ಪಠ್ಯ ಪರಿಷ್ಕರಣೆಯಲ್ಲಾಗಿರುವ ಪ್ರಮಾದಗಳ ಬಗ್ಗೆ ಸಮರ್ಪಕ ಮಾಹಿತಿ ಇದ್ದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಲ್ಲವೇ ಶಿಕ್ಷಣ ಸಚಿವರು ಸತ್ಯ ಸಂಗತಿಗಳನ್ನು ವಿವರಿಸಬೇಕಿತ್ತು. ಅದನ್ನು ಬಿಟ್ಟು ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿಯೇ ಇಲ್ಲದ ಕಂದಾಯ ಸಚಿವ ಆರ್.ಅಶೋಕ್ ಇತರೆ ಮೂವರು ಸಚಿವರಿಂದ ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ರಾಜಕೀಕರಣಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಎಳೆಯ ಮಕ್ಕಳ ಮನಸ್ಸುಗಳಿಗೆ ಸರ್ಕಾರ ಮತ್ತು ಸರ್ಕಾರದ ಹಿಂದೆ ಗುಪ್ತವಾಗಿ ಕೆಲಸ ಮಾಡುತ್ತಿರುವ ಸಂಘ ಪರಿವಾರ ವಿಷ ಹಾಕಲು ಹೊರಟಿವೆ. ವಿವಾದ ಪ್ರಾರಂಭವಾಗಿ ತಿಂಗಳುಗಳು ಕಳೆಯುತ್ತಿದ್ದರೂ ತಜ್ಞರ ಸಮಿತಿ ಮಾಡಿ ಸಮಸ್ಯೆಗಳೇನು ಎಂದು ಪರಿಶೀಲಿಸುವ ಬದಲಿಗೆ ರೋಹಿತ್ ಚಕ್ರತೀರ್ಥ ಮಾಡಿರುವ ಪ್ರಮಾದಗಳನ್ನು ಸಮರ್ಥಿಸಿಕೊಳ್ಳುವ ಬೇಜವಾಬ್ದಾರಿತನವನ್ನು ಸರ್ಕಾರ ತೋರಿಸುತ್ತಿದೆ. ಈ ವಿಚಾರದಲ್ಲಿ ದುಷ್ಟರಾಜಕಾರಣಕ್ಕೆ ಇಳಿದು ಸಂಘಿ ಫಿಲಾಸಫಿಯನ್ನು ಹೇರಲು ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷಾಂತರಿಗಳು 10 ವರ್ಷ ಚುನಾವಣೆಗೆ ನಿಲ್ಲಬಾರದು: ಸಿದ್ದು
ಪಠ್ಯ ಪರಿಷ್ಕರಣೆ ವಿವಾದ ಪ್ರಾರಂಭವಾಗಿ ಇಷ್ಟುದಿನವಾದ ಮೇಲೆ ಸಚಿವ ಆರ್. ಅಶೋಕ್ ಈಗ ತಮ್ಮ ಪಕ್ಕದಲ್ಲಿ ಸಿ.ಸಿ. ಪಾಟೀಲ್, ಬೈರತಿ ಬಸವರಾಜು ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಕೂರಿಸಿಕೊಂಡು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಈ ನಾಲ್ಕೂ ಜನರು ಕೂಡ ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿಯೇ ಇಲ್ಲದವರು ಮತ್ತು ಅದರಲ್ಲಿ 3 ಜನ ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರು. ಹಾಗೊಂದು ವೇಳೆ ಸಮರ್ಪಕ ಮಾಹಿತಿ ಇದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಧ್ಯಮಗೋಷ್ಠಿ ನಡೆಸಬೇಕಾಗಿತ್ತು. ವಾಸ್ತವವಾಗಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಸತ್ಯ ಸಂಗತಿಗಳನ್ನು ವಿವರಿಸಬೇಕಾಗಿದ್ದುದು ಸಂಬಂಧಿತ ಶಿಕ್ಷಣ ಸಚಿವರು. ಕಂದಾಯ ಸಚಿವ ಆರ್. ಅಶೋಕ್ ಅವರು ಮಾತನಾಡಿ ಬರೀ ಸುಳ್ಳುಗಳನ್ನು ಹೇಳುವ ಮೂಲಕ ಈ ವಿಚಾರವನ್ನು ರಾಜಕೀಕರಣಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿದ್ದಾರೆ.
ಪಠ್ಯ ಪರಿಷ್ಕರಣೆಯಲ್ಲಿ 21 ಜನ ಶೂದ್ರ ಕವಿ, ಲೇಖಕರ ಬರಹಗಳನ್ನು ಕೈ ಬಿಡಲಾಗಿದೆ. ಹೊಸದಾಗಿ ಸೇರಿಸಿರುವ 28 ಲೇಖಕರು ಬ್ರಾಹ್ಮಣರಾಗಿದ್ದಾರೆ. ಆದರಲ್ಲೂ ಸಂವಿಧಾನ ವಿರೋಧಿ ಆರೆಸ್ಸೆಸ್ ಸಿದ್ಧಾಂತ ಬೆಂಬಲಿಸುವ ಬ್ರಾಹ್ಮಣ ಲೇಖಕರ ಗದ್ಯ-ಪದ್ಯಗಳನ್ನು ಕಲಿಸಬಾರದೆನ್ನುವ ವಿಕೃತಿ ನಮ್ಮದಲ್ಲ. ಇಡೀ ಸಮಾಜದಲ್ಲಿ ಕೇವಲ ಅತ್ಯಲ್ಪ ಗುಂಪುಗಳನ್ನು ಪ್ರತಿನಿಧಿಸುವ ಇಂತಹ ವ್ಯಕ್ತಿಗಳ ರಾಜಕೀಯ ಪ್ರೇರಿತ ಪಾಠಗಳನ್ನು ಸಮಾಜದ ಶೇಕಡ 98ರಷ್ಟುಸಮುದಾಯಗಳು ಒಪ್ಪಿಕೊಳ್ಳಬೇಕು ಎಂದು ಹೇಳುವುದು ಸರ್ವಾಧಿಕಾರಿ ವರ್ತನೆ. ಇದನ್ನು ನೇರವಾಗಿ ಆರೆಸ್ಸೆಸ್ ವ್ಯಕ್ತಿಗಳಾದ ಸುರೇಶ್ ಕುಮಾರ್, ನಾಗೇಶ್ ಅವರ ಬಾಯಿಂದ ಹೇಳಿಸದೆ ಆರ್. ಅಶೋಕ್, ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ, ನಾರಾಯಣ ಸ್ವಾಮಿ ಮೊದಲಾದ ಹಿಂದುಳಿದ, ಶೂದ್ರ ಮತ್ತು ದಲಿತ ರಾಜಕಾರಣಿಗಳ ಮೂಲಕ ಹೇಳಿಸುವುದು ಆರೆಸ್ಸೆಸ್‌ನ ಪಿತೂರಿ ಪಾಂಡಿತ್ಯ ಎಂಬುದು ಕನ್ನಡಿಗರಿಗೆ ಅರ್ಥವಾಗಿದೆ ಎಂದಿದ್ದಾರೆ.
ಬರಗೂರು ಸಮಿತಿ ಪಠ್ಯ ಪರಿಷ್ಕರಣೆಗೆ ವಿರೋಧವಿರಲಿಲ್ಲ: ಹಿಂದಿನ ಮುಡಂಬಡಿತ್ತಾಯ ಸಮಿತಿ ಸಂವಿಧಾನದ ಆಶಯ, ಶಿಕ್ಷಣ ಆಯೋಗಗಳ ಸಲಹೆಗಳನ್ನು ಗಾಳಿಗೆ ತೂರಿದೆ ಎಂಬ ಕಾರಣದಿಂದಲೇ ನಮ್ಮ ಸರ್ಕಾರ ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಪಠ್ಯ ಪರಿಷ್ಕರಿಸಿದ್ದರಿಂದ ಅಂದು ವಿರೋಧ ಪಕ್ಷದಲ್ಲಿದ್ದ ಬಿಜೆಪಿಯಿಂದಾಗಲಿ ಬೇರೆ ಯಾರಿಂದಲೂ ವಿರೋಧ ಬಂದಿರಲಿಲ್ಲ. ಆದರೆ, ಈಗ ರೋಹಿತ್ ಚಕ್ರತೀರ್ಥ ಸಮಿತಿಯು ಪರಿಷ್ಕರಿಸಿರುವ ಪಠ್ಯವನ್ನು ಕರ್ನಾಟಕದ ಜನರಷ್ಟೆಅಲ್ಲ, ತಜ್ಞರುಗಳೂ ವಿರೋಧಿಸಿದ್ದಾರೆ. ಜೊತೆಗೆ ಆಡಳಿತಾರೂಢ ಬಿಜೆಪಿಯ ಶಾಸಕರು, ಸಂಸದರೇ ವಿರೋಧಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಬರಗೂರು ಸಮಿತಿಯ ನೇತೃತ್ವದಲ್ಲಿ ಇತಿಹಾಸ ತಜ್ಞರು ಬರೆದಿದ್ದ ಇತಿಹಾಸದ ಪಾಠಗಳಿಗೆ ವೈಜ್ಞಾನಿಕ ತಳಹದಿ ಇರುವುದರಿಂದ ಅವುಗಳನ್ನೇ ಮುಂದುವರಿಸಬೇಕು. ಜೊತೆಗೆ ಕನ್ನಡಿಗರಿಂದ ಬಂದಿರುವ ಪ್ರತಿರೋಧಗಳಿಂದಾಗಿ ಈಗಾಗಲೆ ಮುದ್ರಿಸಲಾಗಿದ್ದ ಪುಸ್ತಕಗಳನ್ನು ಹಿಂಪಡೆದು ಕೆಲವು ಸಂಗತಿಗಳನ್ನು ಮರು ಮುದ್ರಿಸಲಾಗಿದೆ ಎಂಬ ಮಾಹಿತಿ ಇದೆ. ಹಾಗಾಗಿ ಇಷ್ಟೂಹಣವನ್ನು ಸಂಬಂಧಿಸಿದವರಿಂದ ವಸೂಲು ಮಾಡಬೇಕು. ಪಠ್ಯ ಪುಸ್ತಕಗಳ ಬಗ್ಗೆ ಉದ್ಭವಿಸಿರುವ ಎಲ್ಲ ಅಂಶಗಳ ಕುರಿತು ಸರ್ಕಾರ ನಿಖರ ಮಾಹಿತಿಯನ್ನು ಜನರ ಮುಂದೆ ಮಂಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುಳ್ಳು, ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ: ಸಿ.ಟಿ.ರವಿ
ರಾಷ್ಟ್ರಕವಿ ಕುವೆಂಪು ಅವರಿಗೆ ಮೊದಲಿಗಿಂತ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಸೂಕ್ಷ್ಮವಾಗಿ ನೋಡಿದಲ್ಲಿ ಕುವೆಂಪು ಅವರನ್ನು ಮತ್ತೂ ಅವಮಾನಿಸಲಾಗಿದೆ. ಕುವೆಂಪು ಅವರನ್ನು ಪರಿಚಯಿಸುವಾಗ ರಾಷ್ಟ್ರಕವಿ ಕುವೆಂಪು ಎಂದು ಹೇಳುವ ಬದಲಿಗೆ ಅನಗತ್ಯವಾಗಿ ಎರಡನೆಯ ರಾಷ್ಟ್ರಕವಿ ಕುವೆಂಪು (ಮೊದಲನೆಯವರು ಗೋವಿಂದ ಪೈ) ಎಂದು ಬರೆದಿರುವುದು ಎಂತಹ ಮನಸ್ಥಿತಿ? 7ನೇ ತರಗತಿ ಕನ್ನಡ ಪಠ್ಯದಲ್ಲಿ ಕುವೆಂಪು ಅವರ ಭಾವಚಿತ್ರ ತೆಗೆದುಹಾಕಲಾಗಿದೆ. ಇದು ಕುವೆಂಪು ಅವರಿಗೆ ಮಾಡಿರುವ ಅಪಮಾನ.
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ