ಶಿಕ್ಷಕರ ನೇಮಕಾತಿ ಹಗರಣ; ಮತ್ತೆ 8 ಶಿಕ್ಷಕರು ಸೆರೆ
2012-13 ಹಾಗೂ 2014-15ನೇ ಸಾಲಿನ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಮತ್ತೆ ಇಬ್ಬರು ಶಿಕ್ಷಕಿಯರು ಸೇರಿದಂತೆ ಎಂಟು ಮಂದಿ ಶಿಕ್ಷಕರನ್ನು ಅಪರಾಧ ತನಿಖಾ ದಳ (ಸಿಐಡಿ) ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಫೆ.11) : 2012-13 ಹಾಗೂ 2014-15ನೇ ಸಾಲಿನ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಮತ್ತೆ ಇಬ್ಬರು ಶಿಕ್ಷಕಿಯರು ಸೇರಿದಂತೆ ಎಂಟು ಮಂದಿ ಶಿಕ್ಷಕರನ್ನು ಅಪರಾಧ ತನಿಖಾ ದಳ (ಸಿಐಡಿ) ಪೊಲೀಸರು ಬಂಧಿಸಿದ್ದಾರೆ.
ಈ ಎರಡೂ ಪ್ರಕರಣ ಸಂಬಂಧ ಈಗಾಗಲೇ ಶಿಕ್ಷಣ ಇಲಾಖೆ(Department of Education)ಯ ಇಬ್ಬರು ನಿರ್ದೇಶಕರು, ಮೂವರು ನಿವೃತ್ತ ಸಹ ನಿರ್ದೇಶಕರು, ಪ್ರಥಮ ದರ್ಜೆ ಸಹಾಯಕ, ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ 61 ಸಹ ಶಿಕ್ಷಕರು ಸೇರಿದಂತೆ 68 ಆರೋಪಿಗಳ ಬಂಧನವಾಗಿದೆ. ಈ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಚಾಜ್‌ರ್‍ಶೀಟ್(Chargesheet) ಅನ್ನು ಸಲ್ಲಿಸಿ ತನಿಖೆ ಮುಂದುವರೆಸಿರುವ ಸಿಐಡಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ತುಮಕೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮತ್ತೆ ಗುರುವಾರ ದಾಳಿ ನಡೆಸಿತು. ಈ ವೇಳೆ ಎಂಟು ಮಂದಿ ಶಿಕ್ಷಕರು ಬಂಧಿತರಾಗಿದ್ದಾರೆ. ಬಳಿಕ ವಿಚಾರಣೆ ನಡೆಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು: ಹೈಕೋರ್ಟ್ ಮಹತ್ವದ ಆದೇಶ
ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಅಕ್ರಮ(Recruitment of secondary school co-teachers is illegal) ಸಂಬಂಧ ಕಳೆದ ವರ್ಷ ವಿಧಾನಸೌಧ ಠಾಣೆ(Vidhanasoudha police station)ಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ದೂರು ನೀಡಿದ್ದರು. ಈ ಹಗರಣದ ತನಿಖೆಯನ್ನು ಸರ್ಕಾರವು ಸಿಐಡಿ ತನಿಖೆಗೆ ವಹಿಸಿತ್ತು.
ಬಂಧಿತರ ವಿವರ:
2012-13ನೇ ಸಾಲಿನ ಪ್ರಕರಣ: ಬಾಗಲಕೋಟೆ ಜಿಲ್ಲೆ ಮದವಿಬಾವಿ ಸರ್ಕಾರಿ ಪ್ರೌಢ ಶಾಲೆಯ ಶ್ರೀಕಾಂತ ನಾಯಿಕ, ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕೊಲ್ಹಾರ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ನಾಯಕ್ ಪ್ರಕಾಶ್ ರತ್ನು, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಕಮರೂರು ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಬಿ.ಆರ್. ಮಹಬೂಬ್ ಬಾಷಾ, ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಮಳಗಿಯ ಕರ್ನಾಟಕ ಪಬ್ಲಿಕ್ ಶಾಲೆ ಸಹ ಶಿಕ್ಷಕಿ ಸುಜಾತಾ ಭಂಡಾರಿ.
ಅಕ್ರಮ ನೇಮಕಾತಿ: ಮತ್ತೆ 4 ಶಿಕ್ಷಕರ ಬಂಧನ
2014-15ನೇ ಸಾಲಿನ ಪ್ರಕರಣ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣ ಸರ್ಕಾರಿ ಶಾಲೆ ಸಹ ಶಿಕ್ಷಕಿ ಜಿ.ಎನ್.ದೀಪಾರಾಣಿ, ಪಾವಗಡ ತಾಲೂಕಿನ ನಾಗಲಮಡಿಕೆ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಜಿ.ಕೆ.ಮೋಹನ್ ಕುಮಾರ್, ವಲ್ಲೂರು ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಎಸ್.ಮಂಜುನಾಥ್, ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಶಾಂತಿಲಾಲ್ ಚೌಹ್ಹಾಣ್.