ಚೆನ್ನೈ, (ಫೆ.25): 9, 10 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಎಲ್ಲರನ್ನೂ ಉತ್ತೀರ್ಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಡಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ನಡುವೆ ಎಸ್‌ಎಸ್‌ಎಲ್​ಸಿ ಮತ್ತು ಪ್ಲಸ್ ಒನ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಳನಿಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಇಂಟರ್​ನಲ್ ಪರೀಕ್ಷೆಯಲ್ಲಿ ಲಭಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನ ಮಾಡಲಾಗುವುದು. ಬಾಕಿ ಇರುವ ಪರೀಕ್ಷೆಗಳ ಅಂಕವನ್ನು ಎರಡು ಮಾನದಂಡಗಳಿಂದ ನಿರ್ಣಯಿಸಲಾಗುವುದು ಎಂದರು.

ಸಿಇಟಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ

ಕಾಲುವಾರ್ಷಿಕ ಮತ್ತು ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಶೇಕಡಾ 80 ಅಂಕ ಮತ್ತು ಹಾಜರಾತಿಯನ್ನು ಪರಿಗಣಿಸಿ ಶೇಕಡಾ 20 ಅಂಕಗಳನ್ನು ನೀಡಲಾಗುವುದು. ಈ ಬಗ್ಗೆ ತಮಿಳುನಾಡು ಶಿಕ್ಷಣ ಇಲಾಖೆ ಶಾಲೆಗಳಿಗೆ ಇನ್ನೂ ಸುತ್ತೋಲೆ ಕಳುಹಿಸಿಲ್ಲ. ಆದಾಗ್ಯೂ, ತಮಿಳುನಾಡು ಸರ್ಕಾರದ ಪರೀಕ್ಷಾ ನಿರ್ದೇಶನಾಲಯ ಬಿಡುಗಡೆ ಮಾಡಿದ ವೇಳಾಪಟ್ಟಿ ಪ್ರಕಾರ 12ನೇ ತರಗತಿಗೆ ಪರೀಕ್ಷೆ ನಡೆಯಲಿದೆ.

12ನೇ ತರಗತಿಗೆ ಮೇ 3ರಿಂದ ಮೇ 21ರವರೆಗೆ ನಡೆಯಲಿದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ನಡೆಯುತ್ತಿದ್ದ ಪರೀಕ್ಷೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಮುಂದೂಡಿಕೆಯಾಗಿತ್ತು. 2020 ಮಾರ್ಚ್ ತಿಂಗಳಲ್ಲಿ ಕೋವಿಡ್​ನಿಂದಾಗಿ ತಮಿಳುನಾಡಿನಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಆನಂತರ ಜನವರಿ 19ರಂದು 10 ಮತ್ತು 12ನೇ ತರಗತಿ ಮಕ್ಕಳಿಗೆ ಮಾತ್ರ ತರಗತಿ ಆರಂಭ ಮಾಡಲಾಗಿತ್ತು.