ಅತಿಥಿ ಉಪನ್ಯಾಸಕರ ಹೋರಾಟ: ವಿದ್ಯಾರ್ಥಿಗಳ ಪರದಾಟ

ಕಾಂಗ್ರೆಸ್‌ ಪಕ್ಷ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಭರವಸೆ ನೀಡಿದಂತೆ ಸರ್ಕಾರ ನುಡಿದಂತೆ ನಡೆದುʼ ನಮ್ಮ ಸೇವೆ ಪರಿಗಣಿಸಿ ಎಲ್ಲಾ ಬೇಡಿಕೆಗಳು ಈಡೇರಿಸಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಲಿಖಿತ ಭರವಸೆ ನೀಡುವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ಅತಿಥಿ ಉಪನ್ಯಾಸಕರು.

Students Faces Problems For Guest Lecturers Strike in Ramanagara grg

ಎಂ.ಅಫ್ರೋಜ್ ಖಾನ್

ರಾಮನಗರ(ಡಿ.23):  ಸೇವಾ ಕಾಯಮಾತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಒಂದು ತಿಂಗಳಿಂದ ಅತಿಥಿ ಉಪನ್ಯಾಸಕರು ಮುಷ್ಕರದಲ್ಲಿ ತೊಡಗಿರುವುದರಿಂದ ರಾಮನಗರ ಟೌನ್ ಸೇರಿದಂತೆ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ರಾಮನಗರ - 2,ಬಿಡದಿ -1, ಮಾಗಡಿ - 1, ಕುದೂರು - 1 , ಚನ್ನಪಟ್ಟಣ - 1, ಹಾರೋಹಳ್ಳಿ - 1 ಹಾಗೂ ಕನಕಪುರ - 1, ಕೋಡಿಹಳ್ಳಿ - 1 ಸೇರಿದಂತೆ ಒಟ್ಟು 09 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇಲ್ಲಿ ಕಾಯಂ ಉಪನ್ಯಾಸಕರ ಕೊರತೆಯೂ ಕಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಪಾಠ ಮಾಡಲು ತೊಂದರೆ ಉಂಟಾಗಿದೆ. ಜನವರಿ ಅಂತ್ಯದಲ್ಲಿ ಪರೀಕ್ಷೆಗಳು ನಡೆಯಲಿದ್ದು, ಕೆಲ ಕಾಲೇಜುಗಳಲ್ಲಿ ಇಲ್ಲಿವರೆಗೆ ಶೇ.50ರಷ್ಟು ಪಾಠ ಪೂರ್ತಿಯಾಗಿಲ್ಲ.

ಗ್ರಾಪಂ ತೆರಿಗೆ ಸಂಗ್ರಹ: ರಾಮನಗರ ರಾಜ್ಯಕ್ಕೆ ಪ್ರಥಮ..!

ಬಹುತೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸಂಖ್ಯೆಯೇ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 220 ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರ ಮೇಲೆಯೇ ತರಗತಿಗಳು ಅವಲಂಬಿತವಾಗಿವೆ. ಕೆಲವು ಕಾಲೇಜಿನಲ್ಲಿ ಶೇ. 60 - 75 ಅತಿಥಿ ಉಪನ್ಯಾಸಕರೇ ಇರುವ ಕಾರಣ ಕಾಯಂ ಉಪನ್ಯಾಸಕರು ಇದ್ದರೂ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ.

ತರಗತಿಗಳು ನಡೆಯದ ಕಾರಣ ವಿದ್ಯಾರ್ಥಿಗಳು ವಿಧಿ ಇಲ್ಲದೆ ಅಲೆದಾಡುವ ಪರಿಸ್ಥಿತಿ ಒದಗಿದೆ. ಈ ವೇಳೆಗಾಗಲೇ ಶೇ. 75ರಷ್ಟು ಪಾಠ ಪೂರ್ಣಗೊಂಡಿರಬೇಕಿತ್ತು. ಹೆಚ್ಚುವರಿ ತರಗತಿ ನಡೆಸುವಂತೆ ಕಾಯಂ ಉಪನ್ಯಾಸಕರಿಗೆ ಸೂಚನೆ ನೀಡಲಾಗಿದೆ. ಗ್ರಂಥಾಲಯಕ್ಕೆ ಹೋಗಿ ಓದುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಿದ್ದೇವೆ. ಆದರೆ, ಕೆಲವರು ಅಡ್ಡಾಡುವುದು ಕಂಡು ಬರುತ್ತಿದೆ.

ಕೆಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇಂಗ್ಲಿಷ್, ಕೆಮಿಸ್ಟ್ರಿ ಹಾಗೂ ಕಂಪ್ಯೂಟರ್ ಸೈನ್ಸ್, ಬಾಟನಿ ವಿಷಯಗಳಿಗೆ ಒಬ್ಬರೂ ಕಾಯಂ ಇಲ್ಲ. ಅತಿಥಿ ಉಪನ್ಯಾಸಕರೇ ನಿಭಾಯಿಸಬೇಕಾಗಿದೆ. ಅವರೆಲ್ಲಾ ತರಗತಿ ಬಹಿಷ್ಕರಿಸಿರುವುದರಿಂದ ಈ ವಿಷಯಗಳ ಪಾಠ ನಿಂತು ಹೋಗಿದೆ. ದಿನಕ್ಕೆ ಸರಾಸರಿ 49 ಗಂಟೆ ಪಾಠ ನಷ್ಟವಾಗುತ್ತಿದೆ.

ಅತಿಥಿ ಉಪನ್ಯಾಸಕರ ಮುಷ್ಕರಿಂದ ತರಗತಿಗಳು ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಕಾಯಂ ಶಿಕ್ಷಕರೇ ಹೆಚ್ಚುವರಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಕೆಲ ವಿಷಯಗಳಿಗೆ ಕಾಯಂ ಶಿಕ್ಷಕರೂ ಇಲ್ಲ. ಇದರಿಂದ ತರಗತಿ ನಡೆಸಲು ತೊಂದರೆ ಆಗುತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.

ಪರೀಕ್ಷೆ ಇಲ್ಲದೇ ಪಾಸು ಮಾಡಿ:

ನಾವು ತರಗತಿಗೆ ಬರುತ್ತೇವೆ. ಪಾಠ ಮಾಡಲು ಉಪನ್ಯಾಸಕರೇ ಇಲ್ಲವಲ್ಲ. ಹೀಗಾಗಿ, ದೂರದ ಹಳ್ಳಿಗಳಿಂದ ನಿತ್ಯ ಕಾಲೇಜಿಗೆ ಬಂದು ವಾಪಸ್ ತೆರಳುತ್ತಿದ್ದೇವೆ. ಕೆಲವೊಂದು ತರಗತಿ ಮಾತ್ರ ನಡೆಯುತ್ತಿದೆ. ಮುಂದೇನು ಎಂಬುದು ನಮಗೂ ಗೊತ್ತಿಲ್ಲ ಎಂದು ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಬೇಸರ ಹೊರ ಹಾಕುತ್ತಿದ್ದಾರೆ.

ಅತಿಥಿ ಉಪನ್ಯಾಸಕರು ತರಗತಿಗಳ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಕಾರಣ ನಮಗೆ ಪಾಠ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪರೀಕ್ಷೆಗಳು ಸಮೀಪಿಸುತ್ತಿವೆ ಹೀಗಾಗಿ ಪಾಠವಿಲ್ಲದೆ ವಿದ್ಯಾರ್ಥಿಗಳಿಗೆ ಆತಂಕ ಕಾಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆ ಈಡೆರಿಸಬೇಕು. ಇಲ್ಲವಾದಲ್ಲಿ ಪರೀಕ್ಷೆ ನಡೆಸದೇ ಪಾಸು ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆಯಲಿ:

ನಮಗೆ ಯುಜಿಸಿ ನಿಯಮಾನುಸಾರ ಅರ್ಹತೆ ಇದ್ದರೂ ಕಾಯಂ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈಗಾಗಲೇ 15-20 ವರ್ಷ ಸೇವೆ ಸಲ್ಲಿಸಿರುವ ನಮ್ಮನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಜೀವನ ನಿರ್ವಹಣೆ ಸಾಧ್ಯವಾಗದ ಕೆಲವರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಕೆಲವು ಜನರಿಗೆ ನಿವೃತ್ತಿ ಹತ್ತಿರವಾಗಿದೆ.

ಚನ್ನಪಟ್ಟಣ: ವರ್ಷ ತುಂಬಿದ ಮಗುವನ್ನು ನದಿಗೆ ಎಸೆದು ಕೊಂದ ನಿರ್ದಯಿ ತಾಯಿ..!

ಯಾವುದೇ ಸೌಲಭ್ಯಗಳನ್ನು ನೀಡಿಲ್ಲದಿರುವುದರಿಂದ ನಮ್ಮೆಲ್ಲರ ಜೀವನವು ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ ಎಂದು ಚಳವಳಿ ನಿರತ ಅತಿಥಿ ಉಪನ್ಯಾಸಕರು ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್‌ ಪಕ್ಷ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಭರವಸೆ ನೀಡಿದಂತೆ ಸರ್ಕಾರ ನುಡಿದಂತೆ ನಡೆದುʼ ನಮ್ಮ ಸೇವೆ ಪರಿಗಣಿಸಿ ಎಲ್ಲಾ ಬೇಡಿಕೆಗಳು ಈಡೇರಿಸಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಲಿಖಿತ ಭರವಸೆ ನೀಡುವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಅತಿಥಿ ಉಪನ್ಯಾಸಕರು.

ನಮ್ಮ ಮುಷ್ಕರದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವುದು ನಿಜ. ಆದರೆ, ನಮಗೆ ಆಗುತ್ತಿರುವ ತೊಂದರೆಯನ್ನು ಅಲಿಸುವವರು ಯಾರು? ನಮ್ಮ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ, ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಡಾ.ಎ.ಸಿ.ಪಾರ್ಥ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios