ಕಾಲೇಜು ಅರಂಭವಾದ್ರೂ ಪಾಠ ಮಾಡಲು ಅತಿಥಿ ಉಪನ್ಯಾಸಕರಿಲ್ಲ

ಕೋವಿಡ್‌ ಮಾರ್ಗಸೂಚಿ ಪ್ರಕಾರ ಪ್ರತಿ ತರಗತಿಯಲ್ಲಿ 40-50 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ| ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದಿರುವ ಪರಿಣಾಮ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ| 

Students Faces Probelms in Lack of Guest lecturers in Colleges grg

ಹಾವೇರಿ(ಜ.20): ರಾಜ್ಯದಲ್ಲಿ ಪದವಿ ಕಾಲೇಜು ಆರಂಭವಾದರೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದ್ದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಸರ್ಕಾರ ಈ ಹಿಂದೆ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನೇ ಮುಂದುವರೆಸಿ ಆದೇಶ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಸಿ.ಕೆ. ಪಾಟೀಲ ಒತ್ತಾಯಿಸಿದ್ದಾರೆ. 

ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,447 ಅತಿಥಿ ಉಪನ್ಯಾಸಕರು ಎಂ.ಫಿಲ್‌, ಪಿಎಚ್‌ಡಿ, ನೆಟ್‌ ಮತ್ತು ಸ್ಲೆಟ್‌ನಂತಹ ಉನ್ನತ ಪದವಿಗಳೊಂದಿಗೆ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ಕೆಲವು ಯಾವುದೇ ಸೌಲಭ್ಯಗಳಿಲ್ಲದೇ ನಿವೃತ್ತಿ ಅಂಚಿಗೆ ತಲುಪಿರುವುದು ತೀವ್ರ ಬೇಸರದ ಸಂಗತಿಯಾಗಿದೆ. ಕಾಲೇಜು ಶಿಕ್ಷಣ ಇಲಾಖೆಯವರು ಮಾನವೀಯ ಆಧಾರದ ಮೇಲೆ ಕನಿಷ್ಠ ಸೇವೆ ಸೌಲಭ್ಯಗಳಾದ ಇಎಸ್‌ಐ, ಪಿಎಫ್‌, ರಜಾ ಸೌಲಭ್ಯ, ಮಹಿಳೆಯರಿಗೆ ವೇತನ ಸಹಿತ ಹೆರಿಗೆ, ಯುಜಿಸಿ ನಿರ್ದೇಶಿತ ನಿರ್ಧಿಷ್ಟ ಮತ್ತು ಸಕಾಲಿಕ ಗೌರವಧನ ಪಾವತಿ ಸೇರಿದಂತೆ ಯಾವುದೇ ಸೌಲಭ್ಯ ನೀಡದೇ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಕೇವಲ ಗೌರವಧನ ಅವಲಂಬಿಸಿರುವ ಅತಿಥಿ ಉಪನ್ಯಾಸಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ನೂಕಲ್ಪಟ್ಟಿವೆ. ಕಳೆದೊಂದು ವರ್ಷದ ಅವಧಿಯಲ್ಲಿ 24 ಅತಿಥಿ ಉಪನ್ಯಾಸಕರು ಬಡತನದ ಒತ್ತಡದಿಂದ ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ಯಾವುದೇ ಕನಿಷ್ಠ ಪರಿಹಾರವೂ ಸಿಕ್ಕಿಲ್ಲ. ನೂರಾರು ಉಪನ್ಯಾಸಕರು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದರೂ ಸರಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದಿರುವುದು ನೋವಿನ ಸಂಗತಿ ಎಂದರು.

ರಾಜ್ಯದಲ್ಲಿ ಪದವಿ, ಪೀಜಿ, ಎಂಜಿನಿಯರಿಂಗ್‌ ಪರೀಕ್ಷೆಗೆ ಸಮಯ ನಿಗದಿ

ಶಿಕ್ಷಣ ಇಲಾಖೆ ನಮ್ಮನ್ನು ಅಧಿಕೃತವಾಗಿ 10 ತಿಂಗಳಿಗೆಂದು ನೇಮಿಸಿಕೊಂಡು 12 ತಿಂಗಳು ಕಾಲ ಅನಧಿಕೃತವಾಗಿ ವಿವಿಧ ರೂಪದಲ್ಲಿ ಉಚಿತವಾಗಿ ಸೇವೆ ಪಡೆಯುವ ಮೂಲಕ ಶೋಷಣೆ ಮಾಡುತ್ತಿದೆ ಎಂದು ದೂರಿದರು.
ಪ್ರತಿ ಶೈಕ್ಷಣಿಕ ವರ್ಷದಲ್ಲಿ ಶೇ. 70ರಷ್ಟು ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಪ್ರಸಕ್ತ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ಕರ್ತವ್ಯಕ್ಕೆ ಹಾಜರಾಗಲು ಆದೇಶ ಮಾಡದ ಪರಿಣಾಮ ಲಕ್ಷಾಂತರ ಬಡ ಪದವಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ, ಕೂಡಲೇ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಶಾಂತ್‌ಕುಮಾರ ಬೆನ್ನೂರು ಮಾತನಾಡಿ, ಹಾವೇರಿಯ ಸರ್ಕಾರಿ ಮಹಿಳಾ ಪದವಿ ಕಾಲೇಜು ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಕೇವಲ ಪ್ರಾಂಶುಪಾಲರಿದ್ದಾರೆ. ಈಗ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದಿರುವ ಪರಿಣಾಮ ವಿದ್ಯಾರ್ಥಿಗಳಿಗೆ ಸಾಕಷ್ಟುತೊಂದರೆಯಾಗುತ್ತಿದೆ. ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎಚ್‌. ಅಶ್ವತ್‌ನಾರಾಯಣ ಅವರು 2019-20ನೇ ಶೈಕ್ಷಣಿಕ ಸಾಲಿನಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನೇ 17-11-2020ರಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯಥಾಸ್ಥಿತಿಯಲ್ಲಿ ಮುಂದುವರೆಸಿ ನೇಮಕಾತಿ ಮಾಡುವಂತೆ ಆದೇಶಿಸಿದ್ದರೂ ಇಲಾಖೆ ಜಾರಿಗೊಳಿಸಿಲ್ಲ, ಕೂಡಲೇ ಸಚಿವರ ಆದೇಶ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಹೊಸ ರಾಷ್ಟ್ರೀಯ ಉನ್ನತ ಶಿಕ್ಷಣ ನೀತಿ ಅನ್ವಯ ಹಾಗೂ ಕೋವಿಡ್‌ ಮಾರ್ಗಸೂಚಿ ಪ್ರಕಾರ ಪ್ರತಿ ತರಗತಿಯಲ್ಲಿ 40-50 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವುದು. ಈ ಕ್ರಮದಿಂದ ಉದ್ಭವಿಸುವ ಹೆಚ್ಚುವರಿ ಕಾರ್ಯಭಾರಕ್ಕೆ ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳದೇ ಹಾಲಿ ಕಾರ್ಯನಿರತರಿಗೆ ಆ ಕಾರ್ಯಭಾರವನ್ನು ಹಂಚಿಕೆ ಮಾಡಬೇಕು. ಹಿಂದೆ ಜೆಒಸಿ ಉಪನ್ಯಾಸಕರ ಸೇವೆಯನ್ನು ಸಕ್ರಮಗೊಳಿಸಿದಂತೆಯೇ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಪ್ರಮುಖರಾದ ಬಸವನಗೌಡ ಪಾಟೀಲ, ವಸಂತಗೌಡ ಪಾಟೀಲ, ಹನುಮಂತಪ್ಪ ಸಿ.ಬಿ, ಡಾ. ಸುರೇಶ ವಾಲ್ಮೀಕಿ, ಮಂಜುನಾಥಗೌಡ ನಿಂಗನಗೌಡ್ರ, ವಿರೇಶ ಕಾರಗಿ ಇತರರು ಇದ್ದರು.
 

Latest Videos
Follow Us:
Download App:
  • android
  • ios