ಡಿಗ್ರಿ, ಪೀಜಿ: ಕನ್ನಡ, ಇಂಗ್ಲಿಷ್ ಬೆರೆಸಿ ಪರೀಕ್ಷೆ ಬರೆಯಲು ಅಸ್ತು!
ಈಗಾಗಲೇ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಜಾರಿ ಮಾಡಿರುವಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳು ಯಾವುದೇ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲು ಅವಕಾಶ ಕಲ್ಪಿಸಲು ಬುಧವಾರ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರು (ಡಿ.15): ಈಗಾಗಲೇ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಜಾರಿ ಮಾಡಿರುವಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳು ಯಾವುದೇ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲು ಅವಕಾಶ ಕಲ್ಪಿಸಲು ಬುಧವಾರ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬುಧವಾರ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಕಳೆದ ವರ್ಷದಿಂದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಎರಡೂ ಭಾಷೆಗಳಲ್ಲೂ ಒಂದೇ ವೇಳೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುತ್ತಿದ್ದವರಿಗೆ ಕೆಲವು ಪದಗಳ ಕನ್ನಡ ಪದ ಪ್ರಯೋಗ ತಿಳಿದಿರುವುದಿಲ್ಲ. ಅಂತಹವರು ಇಂಗ್ಲಿಷ್ ಭಾಷೆಯಲ್ಲೇ ಆ ಪದಗಳನ್ನು ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಪರಿಗಣಿಸಿ ಈ ಆಯ್ಕೆಯನ್ನು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು ಎಂದು ತಿಳಿದು ಬಂದಿದೆ.
ಉನ್ನತ ಶಿಕ್ಷಣ ಇಲಾಖೆ ಸಿಬ್ಬಂದಿ ಸಮಸ್ಯೆ ಪರಿಹರಿಸಲು ಸಮಗ್ರ ಪೋರ್ಟಲ್, ಡಿ.25ರಂದು ಲೋಕಾರ್ಪಣೆ
ಈ ಬಗ್ಗೆ ಮಾತನಾಡಿದ ಅಶ್ವತ್ಥನಾರಾಯಣ್, ಇದುವರೆಗೂ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಯಾವುದೇ ಒಂದು ವಿಷಯದ ಪರೀಕ್ಷೆಯನ್ನು ಒಂದೋ ಕನ್ನಡದಲ್ಲಿ ಇಲ್ಲವೇ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶವಿತ್ತು. ಆದರೆ ಇನ್ನು ಮುಂದೆ ಒಂದೇ ವಿಷಯವನ್ನು ಎರಡೂ ಭಾಷೆಗಳಲ್ಲಿಯೂ ಬರೆಯಬಹುದು. ವಿದ್ಯಾರ್ಥಿಗಳಿಗೆ ಆಯಾ ಪ್ರಶ್ನೆಗೆ ಉತ್ತರಿಸಲು ಯಾವ ಭಾಷೆ ಸೂಕ್ತವೆನಿಸುತ್ತದೋ ಅದರಲ್ಲೇ ಉತ್ತರ ಬರೆಯುವ ಅವಕಾಶ ಕೊಡಲಾಗುವುದು. ಒಂದು ಪ್ರಶ್ನೆಗೆ ಕನ್ನಡದಲ್ಲಿ ಉತ್ತರ ಬರೆದು, ಇನ್ನೊಂದು ಪ್ರಶ್ನೆಗೆ ಇಂಗ್ಲಿಷ್‌ನಲ್ಲಿ ಬೇಕಾದರೂ ಉತ್ತರಿಸಬಹುದು. ಪಾಲಿಟೆಕ್ನಿಕ್ ಶಿಕ್ಷಣದಲ್ಲಿ ಈಗಾಗಲೇ ಈ ಸೌಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.
ಗುಣಮಟ್ಟದ ಪುಸ್ತಕಗಳ ಅನುವಾದಕ್ಕೆ ನಿರ್ಧಾರ: ಜತೆಗೆ ಪ್ರಾದೇಶಿಕ ಭಾಷೆಗಳಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಲು ಯುಜಿಸಿ ಸೂಚನೆಯಂತೆ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಗುಣಮಟ್ಟದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಬೇಕು. ಇದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ರೂಪರೇಷೆಯನ್ನು ತೀರ್ಮಾನಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ. ಇನ್ನು ಹೊಸದಾಗಿ ಬುಡಕಟ್ಟು ವಿಶ್ವವಿದ್ಯಾಲಯದ ಸ್ಥಾಪನೆಯ ಬದಲಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕರ್ನಾಟಕ ರಾಜ್ಯ ಜಾನಪದ ವಿಶ್ವವಿದ್ಯಾಲಯದಲ್ಲೇ ಬುಡಕಟ್ಟು ಅಧ್ಯಯನಕ್ಕೂ ಸಮರ್ಪಕ ವ್ಯವಸ್ಥೆ ಮಾಡಲು ಸಲಹೆ ನೀಡಲಾಗಿದೆ ಎಂದರು.
ಕಾಲೇಜುಗಳಿಗೆ ಭೇಟಿ ಕಡ್ಡಾಯ: ಸುಶಾಸನ ಮಾಸಾಚರಣೆ ಅಂಗವಾಗಿ ಕುಲಪತಿಗಳು ಮತ್ತು ಇತರ ಉನ್ನತಾಧಿಕಾರಿಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಿಗೆ ಭೇಟಿ ಕೊಟ್ಟು ಪ್ರಗತಿ ಪರಿಶೀಲಿಸಬೇಕು. ಉನ್ನತ ಶಿಕ್ಷಣ ವಲಯವು ಉದ್ಯಮಗಳ ಜತೆ ಸಕ್ರಿಯ ಸಂಬಂಧ ಹೊಂದಬೇಕು. ಕಾಲೇಜುಗಳು ಈ ನಿಟ್ಟಿನಲ್ಲಿ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿರುವುದಾಗಿ ಅಶ್ವತ್ಥನಾರಾಯಣ್ ಹೇಳಿದರು. ಸಭೆಯಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಸೇರಿದಂತೆ ಹಲವರು ಹಾಜರಿದ್ದರು.
ಸರ್ಕಾರಿ ಬಿಇ ಕಾಲೇಜುಗಳಿಗೆ ಐಐಟಿ ರೀತಿ ಆಡಳಿತ ಮಂಡಳಿ: ಸಚಿವ ಅಶ್ವತ್ಥ್
ವಿದ್ಯಾರ್ಥಿ ಸ್ನೇಹಿ ಕ್ರಮ
- ಕಳೆದ ವರ್ಷ ಡಿಪ್ಲೊಮಾ ಪರೀಕ್ಷೆ ಎರಡೂ ಭಾಷೆಯಲ್ಲೂ ಬರೆಯಲು ಅವಕಾಶ
- ಈ ವರ್ಷ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೂ ಅವಕಾಶ ವಿಸ್ತರಣೆ
- ಉತ್ತರ ಗೊತ್ತಿದ್ದರೂ ಭಾಷೆಯ ಸಮಸ್ಯೆ ಅನುಭವಿಸುವ ವಿದ್ಯಾರ್ಥಿಗಳಿಗೆ ಸುಲಭ
- ಒಂದು ಪ್ರಶ್ನೆಗೆ ಕನ್ನಡ, ಇನ್ನೊಂದು ಪ್ರಶ್ನೆಗೆ ಇಂಗ್ಲಿಷ್ ಉತ್ತರ ಬರೆದರೂ ಓಕೆ