ಪಿಯು ಪರೀಕ್ಷಾ ಶುಲ್ಕ ವಾಪಸ್‌ಗೆ ವಿದ್ಯಾರ್ಥಿಗಳು, ಪೋಷಕರ ಆಗ್ರಹ

* ಪರೀಕ್ಷೆಗಾಗಿ 11 ಕೋಟಿ ಸಂಗ್ರಹಿಸಿರುವ ಇಲಾಖೆ
* ಶುಲ್ಕ ವಾಪಸ್‌ ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು
* ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

Students and Parents Demand for Return of PUC Exam Fee grg

ಬೆಂಗಳೂರು(ಜೂ.07): ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಶುಲ್ಕ ಮರು ಪಾವತಿಸುವಂತೆ ಪೋಷಕರು ಆಗ್ರಹಿಸುತ್ತಿದ್ದಾರೆ. 

ಕೆಲ ಪೋಷಕರು, ವಿದ್ಯಾರ್ಥಿ ಸಂಘಟನೆಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಹಿನ್ನೆಲೆಯಲ್ಲಿ ಮಕ್ಕಳಿಂದ ಪಡೆದಿರುವ ಪರೀಕ್ಷಾ ಶುಲ್ಕ ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. 

ಮಾಹಿತಿ ಪ್ರಕಾರ, ವಿದ್ಯಾರ್ಥಿಗಳಿಂದ ತಲಾ 190 ರು. ಪರೀಕ್ಷಾ ಶುಲ್ಕವನ್ನು ಪಿಯು ಇಲಾಖೆ ಪಡೆದಿದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ತಲಾ 50 ರು. ಪಡೆಯಲಾಗಿದೆ. ವಿದ್ಯಾರ್ಥಿನಿಯರಿಗೆ ಪರೀಕ್ಷಾ ಶುಲ್ಕ ವಿನಾಯಿತಿ ನೀಡಲಾಗಿದೆ.

SSLC, PUC ರಿಪೀಟರ್ಸ್‌ಗೆ ನಡೆಯಲಿದೆ ಪರೀಕ್ಷೆ : ಮುಹೂರ್ತ ಫಿಕ್ಸ್?

ಪ್ರತಿ ವಿದ್ಯಾರ್ಥಿಯಿಂದ ಪಡೆದಿರುವ ಶುಲ್ಕ ದೊಡ್ಡ ಮೊತ್ತವಲ್ಲದಿದ್ದರೂ ಇದನ್ನು ಪರೀಕ್ಷೆ ರದ್ದಾಗಿರುವ ದ್ವಿತೀಯ ಪಿಯುಸಿಯ 6 ಲಕ್ಷಕ್ಕೂ ಹೆಚ್ಚು ಮಕ್ಕಳ ಲೆಕ್ಕದ ಜತೆ ತಾಳೆ ಹಾಕಿದಾಗ ದೊಡ್ಡ ಮೊತ್ತವಾಗುತ್ತದೆ. ಸುಮಾರು 11 ಕೋಟಿ ರು. ಪರೀಕ್ಷಾ ಶುಲ್ಕ ಸಂಗ್ರಹವಾಗಿದೆ.

ಸರ್ಕಾರ ನಿರ್ಧರಿಸಬೇಕು: 

ಈ ಸಂಬಂಧ ಪಿಯು ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ವಿದ್ಯಾರ್ಥಿಗಳು ಪಾವತಿಸಿದ ಶುಲ್ಕದ ಮೊತ್ತ ನೇರವಾಗಿ ಸರ್ಕಾರಕ್ಕೆ ಸಂದಾಯವಾಗಿರುತ್ತದೆ. ಪಿಯು ಪರೀಕ್ಷೆ ರದ್ದುಪಡಿಸಿದ್ದರೂ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯು ಫಲಿತಾಂಶ ಆಧರಿಸಿ ನೀಡುವ ದ್ವಿತೀಯ ಪಿಯು ಫಲಿತಾಂಶವನ್ನು ಯಾವುದೇ ವಿದ್ಯಾರ್ಥಿ ತಿರಸ್ಕರಿಸಿ ಪರೀಕ್ಷೆ ಬರೆಯಲೂ ಅವಕಾಶ ನೀಡಲಾಗಿದೆ. ಹಾಗಾಗಿ ಎಷ್ಟು ವಿದ್ಯಾರ್ಥಿಗಳು ಮುಂದೆ ಪರೀಕ್ಷೆ ಪಡೆಯುತ್ತಾರೆ ಎಂಬುದನ್ನು ನೋಡಬೇಕಾಗುತ್ತದೆ. ನಂತರ ಉಳಿದ ಮಕ್ಕಳಿಗೆ ಶುಲ್ಕ ಮರುಪಾವತಿಸುವ ಕುರಿತು ಸರ್ಕಾರದೊಂದಿಗೆ ಚರ್ಚಸಬೇಕಾಗಿದೆ ಎಂದು ಹೇಳಿದರು.

ಈ ಶುಲ್ಕ ವಾಪಸ್‌ ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು. ಈ ಬಗ್ಗೆ ಪಿಯು ಇಲಾಖೆ ನಿರ್ದೇಶಕರನ್ನು ಸಂಪರ್ಕಿಸಿ ಮನವಿ ಮಾಡಿದ್ದೇವೆ. ಶುಲ್ಕ ಮರುಪಾವತಿಗೆ ಅವರು ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ವಹಿಸಬೇಕು ಎಂದು ಕರ್ನಾಟಕ ಖಾಸಗಿ ಶಾಲೆಗಳ ಪೋಷಕರ ಸಂಘದ ಸಮನ್ವಯ ಸಮಿತಿಯ ಸದಸ್ಯ ಬಿ.ಎನ್‌.ಯೋಗಾನಂದ ಒತ್ತಾಯಿಸಿದ್ದಾರೆ.
 

Latest Videos
Follow Us:
Download App:
  • android
  • ios