Asianet Suvarna News Asianet Suvarna News

ಯಾರಿಗುಂಟು ಯಾರಿಗಿಲ್ಲ ಇಂಥ ಚಾನ್ಸ್‌: ವಿಟಿಯು ಎಡವಟ್ಟಿಗೆ 100 ಅಂಕದ ಪರೀಕ್ಷೆ ಬರೆದವನಿಗೆ 106 ಮಾರ್ಕ್ಸ್..!

*  ಲೋಪ ಗಮನಕ್ಕೆ ತಂದ ಬಳಿಕ ಫಲಿತಾಂಶ ತಿದ್ದುಪಡಿ
*  ಮೊದಲ ಫಲಿತಾಂಶದಲ್ಲಿ ಪಾಸಾಗಿದ್ದವರು 2ನೇ ಫಲಿತಾಂಶದಲ್ಲಿ ಅನುತ್ತೀರ್ಣ 
*  ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕಾರ್ಯವೈಖರಿಗೆ ವಿದ್ಯಾರ್ಥಿಗಳ ಆಕ್ರೋಶ
 

Student Got 106 Marks out of 100 in Visvesvaraya Technological University grg
Author
Bengaluru, First Published Jun 24, 2022, 8:31 AM IST

ಬೆಂಗಳೂರು(ಜೂ.24):  ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಮೌಲ್ಯಮಾಪನ ಕಾರ್ಯದಲ್ಲಿ ಆಗಿರುವ ಎಡವಟ್ಟಿನಿಂದ ಇತ್ತೀಚೆಗೆ ಪ್ರಕಟವಾದ ಮೂರನೇ ಸೆಮಿಸ್ಟರ್‌ನ ಕಲೆ ವಿಷಯಗಳ ಎಂಜಿನಿಯರಿಂಗ್‌ ಫಲಿತಾಂಶದಲ್ಲಿ ಹಲವು ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕಗಳಿಗಿಂತ ಹೆಚ್ಚು (100ಕ್ಕೂ ಹೆಚ್ಚು) ಅಂಕಗಳು ಬಂದಿವೆ.

ವಿದ್ಯಾರ್ಥಿಗಳು ಈ ಎಡವಟ್ಟನ್ನು ವಿವಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಲೋಪ ಸರಿಪಡಿಸಿ ತಿದ್ದುಪಡಿ ಫಲಿತಾಂಶ ಪ್ರಕಟಿಸಿದಾಗ ಏಕಾಏಕಿ ಸಾಕಷ್ಟುವಿದ್ಯಾರ್ಥಿಗಳ ಅಂಕಗಳು ಕಡಿಮೆಯಾಗಿವೆ. ಪರಿಣಾಮ- ಫಲಿತಾಂಶ ಪ್ರಕಟಿಸಿದ ದಿನ ಪಾಸಾಗಿದ್ದ ಅನೇಕ ವಿದ್ಯಾರ್ಥಿಗಳು ಮರುದಿನ ಅನುತ್ತೀರ್ಣರಾಗಿದ್ದಾರೆ! ಇದರಿಂದ ವಿದ್ಯಾರ್ಥಿಗಳು ಆತಂಕಗೊಂಡು ವಿವಿ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಿರುವ ತಪ್ಪು ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Belagavi: ವಿಟಿಯು ಇತಿಹಾಸದಲ್ಲೇ ಬುಷ್ರಾಗೆ ದಾಖ​ಲೆಯ 16 ಚಿನ್ನದ ಪದಕ

ಮಂಗಳವಾರ 3ನೇ ಸೆಮಿಸ್ಟರ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ವಿಟಿಯು ಪ್ರಕಟಿಸಿತ್ತು. ಭಾರತೀಯ ಸಂವಿಧಾನ, ಪ್ರೊಫೆಷನಲ್‌ ಎಥಿಕ್ಸ್‌ ಮತ್ತು ಸೈಬರ್‌ ಲಾ (ಸಿಬಿಸಿ) ವಿಷಯದಲ್ಲಿ ಗರಿಷ್ಠ ಅಂಕಗಳಿಗೂ ಹೆಚ್ಚು ಅಂಕ ನೀಡಲಾಗಿತ್ತು. ಪ್ರತಿ ವಿಷಯಕ್ಕೆ 60 ಅಂಕಗಳಿಗೆ ಲಿಖಿತ ಪರೀಕ್ಷೆ, ಉಳಿದ 40 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಇರುತ್ತದೆ. ಹಾಗಾಗಿ ಗರಿಷ್ಠ 100 ಅಂಕಗಳಿಗೆ ಫಲಿತಾಂಶ ನೀಡಬೇಕು. ಆದರೆ, ಹಲವು ವಿದ್ಯಾರ್ಥಿಗಳಿಗೆ ಒಂದೆರಡು ವಿಷಯಗಳಲ್ಲಿ ತಲಾ 103, 106 ಹೀಗೆ ಗರಿಷ್ಠ ಅಂಕಗಳಿಗೂ ಹೆಚ್ಚಿನ ಅಂಕಗಳು ಬಂದಿದ್ದವು. ಇದನ್ನು ಅಧಿಕಾರಿಗಳ ಗಮನಕ್ಕೆ ತಂದಾಗ ತಕ್ಷಣ ತಪ್ಪು ಸರಿಪಡಿಸುವ ಕೆಲಸ ಮಾಡಿದ್ದಾರೆ. ವಿಪರ್ಯಾಸವೆಂದರೆ ಫಲಿತಾಂಶ ನೀಡಿದ ದಿನ ಉತ್ತಿರ್ಣವಾಗಿದ್ದ ಒಂದಷ್ಟು ವಿದ್ಯಾರ್ಥಿಗಳು ಲೋಪ ಸರಿಪಡಿಸಿದಾಗ ಕಡಿಮೆ ಅಂಕ ಬಂದು ಅನುತ್ತೀರ್ಣರಾಗಿದ್ದಾರೆ. ಇದರಿಂದ ಆತಂಕಗೊಂಡ ವಿದ್ಯಾರ್ಥಿಗಳು ಮತ್ತೆ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಕಾರಣ ಏನು?:

ಈ ಲೋಪಕ್ಕೆ ಅಧಿಕಾರಿಗಳು ನೀಡುವ ವಿವರಣೆ ಏನೆಂದರೆ, 60 ಅಂಕಗಳ ಥಿಯರಿ ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ತರಿಸಿರುವ ಒಎಂಆರ್‌ (ಉತ್ತರ ಗುರುತಿಸುವ ಪತ್ರಿಕೆ) ಪ್ರತಿಗಳನ್ನು ಸ್ಕ್ಯಾನ್‌ ಮಾಡಿ ಫಲಿತಾಂಶ ಪ್ರಕಟಿಸುವಾಗ ಥಿಯರಿ ಪರೀಕ್ಷೆ ಗರಿಷ್ಠ 60 ಆದರೂ ಕೆಲವರಿಗೆ ಹೆಚ್ಚಿನ ಅಂಕಗಳನ್ನು ನೀಡಲಾಗಿದೆ. ಇದರಿಂದ ಕೆಲ ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕಕ್ಕಿಂತ ಹೆಚ್ಚು ಅಂಕಗಳು ಬಂದಿದ್ದವು. ಈ ತಪ್ಪನ್ನು ಸರಿಪಡಿಸಲಾಗಿದೆ.

ವಿಟಿಯುನಲ್ಲಿ ವೆಂಚರ್ ಕ್ಯಾಪಿಟಲ್, ಪಾಲುದಾರಿಕೆ, ಸಂಶೋಧನೆಯ ಸಂಗಮ: ಅಶ್ವತ್ಥನಾರಾಯಣ

ಈ ನ್ಯೂನತೆ ಸರಿಪಡಿಸಿದಾಗ ಕೆಲ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದಕ್ಕೆ ಆ ಮಕ್ಕಳ ಥಿಯರಿ ಅಂಕಗಳು ಕಡಿಮೆಯಿರುವುದು ಕಾರಣವಾಗಿದೆ. ಇದರಿಂದ ಅನುತ್ತಿರ್ಣರಾಗಿರಬಹುದು. ಅಂಕ ಮರು ಎಣಿಕೆ ಮಾಡಿದಾಗ ಯಾವುದಾದರೂ ವಿಷಯದಲ್ಲಿ ವಿದ್ಯಾರ್ಥಿ ಫೇಲಾಗಿದ್ದರೆ ಆತನಿಗೆ ಇತರೆ ವಿಷಯಗಳಲ್ಲಿ ನೀಡಿದ್ದ ಗ್ರೇಸ್‌ ಅಂಕಗಳೂ ನಷ್ಟವಾಗಿರುತ್ತವೆ. ಹಾಗಾಗಿ ಅನುತ್ತೀರ್ಣರಾಗಿರುತ್ತಾರೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ಒಎಂಆರ್‌ ಆಧಾರಿತ ಫಲಿತಾಂಶ ನೀಡುವಾಗ ತಾಂತ್ರಿಕ ಸಮಸ್ಯೆಯಿಂದ ಒಂದು ವಿಷಯದ ಫಲಿತಾಂಶದಲ್ಲಿ ಸಮಸ್ಯೆಯಾಗಿತ್ತು. ಅದನ್ನು ಸರಿಪಡಿಸಿ ಪರಿಷ್ಕೃತ ಫಲಿತಾಂಶ ನೀಡಲಾಗಿದೆ. ಸಮಸ್ಯೆ ಬಗೆಹರಿದಿದೆ. ಏನಾದರೂ ಸಮಸ್ಯೆ ಇದ್ದರೆ ವಿದ್ಯಾರ್ಥಿಗಳು ವಿವಿಧ ಅಧಿಕಾರಿಗಳ ಗಮನಕ್ಕೆ ತರಬಹುದು ಅಂತ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದ್ದಾರೆ. 
 

Follow Us:
Download App:
  • android
  • ios