Asianet Suvarna News Asianet Suvarna News

ಕೊಡಗು: ಎರಡು ವಿವಿಗಳ ಗೊಂದಲಕ್ಕೆ ಸಿಬ್ಬಂದಿ, ವಿದ್ಯಾರ್ಥಿಗಳ ಪರದಾಟ..!

ಒಂದೆಡೆ ನಮ್ಮನ್ನು ಕರ್ತವ್ಯದಿಂದ ಕೈಬಿಡಲಾಗಿದೆ ಎಂದು ವಿಶ್ವವಿದ್ಯಾನಿಲಯದ ಮುಂದೆಯೇ ಧರಣಿ ಕುಣಿತು ತಮ್ಮ ಅಳಲು ತೋಡಿಕೊಳ್ಳುತ್ತಿರುವ ಉಪನ್ಯಾಸಕರು, ಸಿಬ್ಬಂದಿ. ಮತ್ತೊಂದೆಡೆ ಪರೀಕ್ಷೆಗಳು ಹತ್ತಿರ ಬರುತ್ತಿವೆ, ಪಾಠ ಪ್ರವಚನಗಳು ಆಗುತ್ತಿಲ್ಲ. ನಾವು ಪರೀಕ್ಷೆ ಬರೆಯುವುದಾದರೂ ಹೇಗೆ. ನಮಗೆ ಉಪನ್ಯಾಸಕರ ನೇಮಕ ಮಾಡಿ ಎಂದು ತರಗತಿಗಳನ್ನು ಬಹಿಷ್ಕರಿಸಿ ಕಾಲೇಜು ಮುಂಭಾಗವೇ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿಗಳು. ಇದು ಸದ್ಯ ಕೊಡಗು ಜಿಲ್ಲೆಯ ಪದವಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯದಲ್ಲಿ ಕಾಣುತ್ತಿರುವ ಪರಿಸ್ಥಿತಿ. 

Staff and Students Faces Problems For Two Universities Confusion in Kodagu grg
Author
First Published Dec 12, 2023, 9:42 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಡಿ.12):  ಗಂಡ, ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆ ಮಾತನ್ನು ನೀವೆಲ್ಲರೂ ಕೇಳಿಯೇ ಇರುತ್ತೀರಾ ಅಲ್ವಾ.? ಹಾಗೆಯೇ ಇಲ್ಲಿ ಎರಡು ವಿಶ್ವವಿದ್ಯಾನಿಲಯಗಳ ನಡುವಿನ ತಿಕ್ಕಾಟದಲ್ಲಿ ಈ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಪರದಾಡುತ್ತಿದ್ದಾರೆ. 

ಒಂದೆಡೆ ನಮ್ಮನ್ನು ಕರ್ತವ್ಯದಿಂದ ಕೈಬಿಡಲಾಗಿದೆ ಎಂದು ವಿಶ್ವವಿದ್ಯಾನಿಲಯದ ಮುಂದೆಯೇ ಧರಣಿ ಕುಣಿತು ತಮ್ಮ ಅಳಲು ತೋಡಿಕೊಳ್ಳುತ್ತಿರುವ ಉಪನ್ಯಾಸಕರು, ಸಿಬ್ಬಂದಿ. ಮತ್ತೊಂದೆಡೆ ಪರೀಕ್ಷೆಗಳು ಹತ್ತಿರ ಬರುತ್ತಿವೆ, ಪಾಠ ಪ್ರವಚನಗಳು ಆಗುತ್ತಿಲ್ಲ. ನಾವು ಪರೀಕ್ಷೆ ಬರೆಯುವುದಾದರೂ ಹೇಗೆ. ನಮಗೆ ಉಪನ್ಯಾಸಕರ ನೇಮಕ ಮಾಡಿ ಎಂದು ತರಗತಿಗಳನ್ನು ಬಹಿಷ್ಕರಿಸಿ ಕಾಲೇಜು ಮುಂಭಾಗವೇ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿಗಳು. ಇದು ಸದ್ಯ ಕೊಡಗು ಜಿಲ್ಲೆಯ ಪದವಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯದಲ್ಲಿ ಕಾಣುತ್ತಿರುವ ಪರಿಸ್ಥಿತಿ. 

ಕರ್ನಾಟಕದ ಸ್ವರ್ಗ ಕೂರ್ಗ್‌ನಲ್ಲಿ ಹೆಚ್ಚಾಗುತ್ತಿದೆ ಹೃದಯ ಸಂಬಂಧಿ ಕಾಯಿಲೆ: 5 ವರ್ಷದ ದತ್ತಾಂಶ ಇಲ್ಲಿದೆ ನೋಡಿ..

ಹೌದು, ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಚಿಕ್ಕಅಳುವಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕೇಂದ್ರವನ್ನು ತೆರೆಯಲಾಗಿತ್ತು. ಆದರೆ ಕಳೆದ ಒಂದು ವರ್ಷದ ಹಿಂದೆ ಅದನ್ನು ಪ್ರತ್ಯೇಕಗೊಳಿಸಿ ಕೊಡಗು ವಿಶ್ವ ವಿದ್ಯಾನಿಲಯವನ್ನಾಗಿ ಸರ್ಕಾರ ಘೋಷಿಸಿತ್ತು. ಇದರಿಂದ ಕೊಡಗು ಜಿಲ್ಲೆಯ ಜನತೆ, ವಿದ್ಯಾರ್ಥಿಗಳು ಸಾಕಷ್ಟು ಸಂತೋಷಪಟ್ಟಿದ್ದರು. ಆದರೀಗ ಆರ್ಥಿಕ ಸಂಕಷ್ಟದಿಂದಾಗಿ ಕೊಡಗು ವಿಶ್ವವಿದ್ಯಾನಿಲಯ ಉಪನ್ಯಾಸಕರು ಮತ್ತು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. 

ಕೊಡಗು ವಿಶ್ವ ವಿದ್ಯಾನಿಲಯದ ವ್ಯಾಪ್ತಿಗೆ ಬರುವ ಜಿಲ್ಲೆಯ ಹತ್ತಾರು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಹಲವು ತಿಂಗಳಿನಿಂದ ಅಗತ್ಯ ಉಪನ್ಯಾಸಕರನ್ನು ಭರ್ತಿ ಮಾಡಿ ಎಂದು ಪ್ರತಿಭಟಿಸುತ್ತಿದ್ದಾರೆ. ಆದರೆ ಕೊಡಗು ವಿಶ್ವವಿದ್ಯಾನಿಲಯವಾದ ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದಿಂದ ನೇಮಕವಾಗಿದ್ದ 40 ಕ್ಕೂ ಹೆಚ್ಚು ಉಪನ್ಯಾಸಕರು, ಸಿಬ್ಬಂದಿಯನ್ನು ಕೈಬಿಡಲಾಗಿದೆ. ಹೀಗಾಗಿ ಉಪನ್ಯಾಸಕರು ಕೊಡಗು ವಿಶ್ವವಿದ್ಯಾನಿಲಯದ ಬಳಿ ಅವಿರತ ಧರಣಿ ನಡೆಸುತ್ತಿದ್ದಾರೆ. 

ಈ ಕುರಿತು ಮಾತನಾಡಿರುವ ಪ್ರತಿಭಟನಾ ನಿರತ ಉಪನ್ಯಾಸಕರು, ಸಿಬ್ಬಂದಿ ಕೊಡಗು ವಿಶ್ವ ವಿದ್ಯಾನಿಲಯದಿಂದ ನಮಗೆ ಅನ್ಯಾಯವಾಗುತ್ತಿದೆ. 9 ವರ್ಷಗಳಿಂದ ಕೆಲಸ ಮಾಡುತ್ತಿದ್ದ ನಮ್ಮನ್ನು ಕೈಬಿಟ್ಟು ಹೊರ ಜಿಲ್ಲೆಗಳ ಜನರನ್ನು ಉಪನ್ಯಾಸಕರು, ಸಿಬ್ಬಂದಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ನೇಮಕದ ಸಂದರ್ಭ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಉದ್ಯೋಗ ಕಳೆದುಕೊಂಡಿರುವ ಸಿಬ್ಬಂದಿ, ಸವಿತಾ, ಹರೀಶ್, ಗಣೇಶ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

ಕೊಡಗು: ಕಾಮಗಾರಿ ಮುಗಿಯುವ ಮೊದಲೇ ಹಣ ಬಿಡುಗಡೆ, ಕಾಂಗ್ರೆಸ್ ಮುಖಂಡನಿಗಾಗಿ ಸರ್ಕಾರಿ ಜಾಗ ಬಿಟ್ರಾ ಅಧಿಕಾರಿಗಳು?

ಈ ಕುರಿತು ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಅಶೋಕ ಸಂ. ಆಲೂರ ಅವರನ್ನು ಕೇಳಿದರೆ ಕೊಡಗು ವಿಶ್ವ ವಿದ್ಯಾನಿಲಯಕ್ಕೆ ಅನುದಾನದ ಕೊರತೆ ಇದೆ. ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪ್ರತ್ಯೇಕಗೊಂಡು ಕೊಡಗು ವಿಶ್ವ ವಿದ್ಯಾನಿಲಯ ಆದ ಬಳಿಕ ನೇಮಕವಾದ ಸಿಬ್ಬಂದಿಗೆ ಅರ್ಧ ಸಂಬಳ ನಮ್ಮ ವಿಶ್ವsವಿದ್ಯಾನಿಲಯ ಬರಿಸಿದರೆ, ಇನ್ನರ್ಧ ಸಂಬಳವನ್ನು ಮಂಗಳೂರು ವಿಶ್ವವಿದ್ಯಾನಿಲಯ ಭರಿಸಬೇಕಾಗಿದೆ. ಹೀಗಾಗಿ ನಾವು ನೂತನವಾಗಿ ಯಾವುದೇ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿಲ್ಲ. ಹಿಂದೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಇವರನ್ನೆಲ್ಲಾ ನೇಮಕ ಮಾಡಿಕೊಳ್ಳಲಾಗಿತ್ತು. ಈಗಲೂ ಅಗತ್ಯವಿರುವ 18 ಸಿಬ್ಬಂದಿಯನ್ನು ಮಂಗಳೂರು ವಿಶ್ವ ವಿದ್ಯಾನಿಲಯವೇ ಭರ್ತಿ ಮಾಡಿದ್ದು ಉಳಿದವರನ್ನು ಕೈಬಿಟ್ಟಿರುವುದು ಮಂಗಳೂರು ವಿಶ್ವವಿದ್ಯಾನಿಲಯವೇ. ಹೀಗಾಗಿ ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ಕಾಲೇಜುಗಳಿಗೆ ಬೇಕಾಗಿರುವ ಸಿಬ್ಬಂದಿ ಮತ್ತು ಉಪನ್ಯಾಸಕರನ್ನು ಸದ್ಯದಲ್ಲೇ ಸರ್ಕಾರದ ಆದೇಶದಂತೆ ನೇಮಕ ಮಾಡಿಕೊಳ್ಳಲಾಗುವುದು ಎಂದಿದ್ದಾರೆ. 

ಒಟ್ಟಿನಲ್ಲಿ ಗುತ್ತಿಗೆ ಅವಧಿ ಮುಗಿದ ಪದವಿ, ಸ್ನಾತಕೋತ್ತರ ಪದವಿಯ ಮೊದಲ ವರ್ಷದ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಮುಂದುವರಿಸುವ ಜವಾಬ್ದಾರಿ ಕೊಡಗು ವಿಶ್ವವಿದ್ಯಾಲಯದ್ದು ಎಂದು ಮಂಗಳೂರು ವಿಶ್ವವಿದ್ಯಾಲಯ ಹೇಳಿದರೆ, ಕೊಡಗು ವಿಶ್ವವಿದ್ಯಾಲಯ ಮಾತ್ರ ಹಿಂದೆ ಇವರನ್ನೆಲ್ಲಾ ಮಂಗಳೂರು ವಿಶ್ವ ವಿದ್ಯಾನಿಲಯವೇ ತೆಗೆದುಕೊಂಡಿತ್ತು. ಈಗಲೂ ಅವರೇ ನೇಮಕ ಮಾಡಿಕೊಳ್ಳಬೇಕು ಎನ್ನುತ್ತಿದೆ. ಇವೆರಡರ ಗೊಂದಲಕ್ಕೆ ಕೊಡಗಿನ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿ, ಬೋಧಕ, ಬೋಧಕೇತರ ಸಿಬ್ಬಂದಿ ಸಂಕಷ್ಟ ಎದುರಿಸುವಂತಾಗಿದೆ.

Follow Us:
Download App:
  • android
  • ios