ಕೊಡಗು: ಕಾಮಗಾರಿ ಮುಗಿಯುವ ಮೊದಲೇ ಹಣ ಬಿಡುಗಡೆ, ಕಾಂಗ್ರೆಸ್ ಮುಖಂಡನಿಗಾಗಿ ಸರ್ಕಾರಿ ಜಾಗ ಬಿಟ್ರಾ ಅಧಿಕಾರಿಗಳು?
ಕಾಂಪೌಂಡ್ ನಿರ್ಮಾಣ ಕಾರ್ಯ ಇಂದಿಗೂ ಪೂರ್ಣವೇ ಆಗಿಲ್ಲ. ಆದರೆ 2023 ರ ಮಾರ್ಚಿ ತಿಂಗಳಲ್ಲೇ ಪೂರ್ಣ ಪ್ರಮಾಣದಲ್ಲಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದು ನಾವು ಹೇಳುತ್ತಿರುವುದಲ್ಲ ತಾಲ್ಲೂಕು ಪಂಚಾಯಿತಿ ಇಒ ಜಯಣ್ಣ ಅವರು ಹೇಳುತ್ತಿರುವುದು.
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಡಿ.10): ಸರ್ಕಾರಿ ಶಾಲಾ, ಕಾಲೇಜುಗಳಿಗಾಗಿ ದಾನಿಗಳು ತಮ್ಮ ಲಕ್ಷಾಂತರ ರೂಪಾಯಿ ಬೆಲೆಬಾಳುವ ಜಾಗವನ್ನು ದಾನ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಇಲ್ಲಿ ರಾಜಕೀಯ ಮುಖಂಡನಿಗಾಗಿ ಸರ್ಕಾರಿ ಜಾಗವನ್ನು ಬಿಟ್ಟು ಯೋಜನೆಯಂತೆ ನಡೆಯಬೇಕಾಗಿದ್ದ ಕಾಮಗಾರಿಯನ್ನೇ ಬದಲಾಯಿಸಿರುವ ಹೇಯ ಕೃತ್ಯ ನಡೆದಿದೆ.
ಅಷ್ಟೇ ಅಲ್ಲ ಕಾಮಗಾರಿ ಮುಗಿಯುವ ಎಂಟು ತಿಂಗಳು ಮೊದಲೇ ಪೂರ್ತಿ ಬಿಲ್ಲು ಬಿಡುಗಡೆ ಮಾಡಲಾಗಿದೆ. ಇದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಗ್ರಾಮ. ಇಲ್ಲಿನ ಗುಂಡೂರಾವ್ ಬಡಾವಣೆಯಲ್ಲಿ ನೂತನವಾಗಿ 10 ಲಕ್ಷ ರೂಪಾಯಿ ಅನುದಾನದಲ್ಲಿ 6 ವರ್ಷಗಳ ಹಿಂದೆಯೇ ಅಂಗನವಾಡಿಯನ್ನು ನಿರ್ಮಿಸಲಾಗಿದೆ. ಸಂತೆಯ ಸಮೀಪವೇ ಅಂಗನವಾಡಿ ಇದ್ದು ನೂರಾರು ವಾಹನಗಳು ಓಡಾಡುವುದರಿಂದ ಅಂಗನವಾಡಿ ಸುತ್ತ ಕೌಂಪೌಂಡ್ ನಿರ್ಮಿಸುವಂತೆ ಪಂಚಾಯಿತಿ ಜನಪ್ರತಿನಿಧಿಗಳು ಸಾಕಷ್ಟು ಪ್ರಯತ್ನಿಸಿದ್ದಾರೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ವರ್ಷದ ಹಿಂದೆ ಜಿಲ್ಲಾ ಪಂಚಾಯಿತಿ ಅನುದಾನ ಬಳಸಿ ಇದರ ಸುತ್ತ 2.49 ಲಕ್ಷ ವೆಚ್ಚದಲ್ಲಿ ಒಟ್ಟು 46 ಮೀಟರ್ ಕಾಂಪೌಂಡ್ ಗೋಡೆಯನ್ನು ನಿರ್ಮಿಸಲು ಜಗನ್ನಾಥ ಎಂಬುವರಿಗೆ 2022 ರ ಅಕ್ಟೋಬರ್ ತಿಂಗಳಲ್ಲೇ ಕಾರ್ಯಾದೇಶ ನೀಡಲಾಗಿದೆ.
ನಿವೃತ್ತ ಸೇನಾಧಿಕಾರಿಗೆ ಮದುವೆ ಮಾಡಿಸುವುದಾಗಿ ವಂಚನೆ, ಹೋಂ ಸ್ಟೇಗೆ ಕರೆದೊಯ್ದು ಖದೀಮರು ಮಾಡಿದ್ದೇನು?
ವಿಪರ್ಯಾಸವೆಂದರೆ ಕಾಂಪೌಂಡ್ ನಿರ್ಮಾಣ ಕಾರ್ಯ ಇಂದಿಗೂ ಪೂರ್ಣವೇ ಆಗಿಲ್ಲ. ಆದರೆ 2023 ರ ಮಾರ್ಚಿ ತಿಂಗಳಲ್ಲೇ ಪೂರ್ಣ ಪ್ರಮಾಣದಲ್ಲಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದು ನಾವು ಹೇಳುತ್ತಿರುವುದಲ್ಲ ತಾಲ್ಲೂಕು ಪಂಚಾಯಿತಿ ಇಒ ಜಯಣ್ಣ ಅವರು ಹೇಳುತ್ತಿರುವುದು. ಈ ಕುರಿತು ಇಒ ಜಯಣ್ಣ ಅವರನ್ನು ಕೇಳಿದರೆ ಮಾರ್ಚಿ ತಿಂಗಳು ಆರ್ಥಿಕ ವರ್ಷದ ಕೊನೆಯ ತಿಂಗಳಾಗಿದ್ದರಿಂದ ಬಿಲ್ಲು ಮಾಡಲೇಬೇಕಾಗಿತ್ತು, ಇಲ್ಲದಿದ್ದರೆ ಹಣ ವಾಪಸ್ ಹೋಗುತ್ತಿದ್ದರಿಂದ ಬಿಲ್ಲು ಮಾಡಿದ್ದೇವೆ. ಈಗ ಆ ಕೆಲಸ ಮಾಡುತ್ತಿದ್ದೇವೆ ಸುದ್ದಿ ಬಿತ್ತರಿಸಬೇಡಿ ಎಂದಿದ್ದು, ಅವರ ಆ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಇನ್ನು ನಾಚಿಕೆಗೇಡಿನ ಸಂಗತಿಯೆಂದರೆ ಬಿಲ್ಲು ಬಿಡುಗಡೆ ಮಾಡಿಸಿಕೊಳ್ಳುವುದಕ್ಕಾಗಿ ಎಲ್ಲಾ ಕೆಲಸ ಪೂರ್ಣಗೊಂಡಿದೆ ಎಂದು ಎಂಜಿನಿಯರ್ ಸಲೀಂ ಎಂಬುವರು ಸುಳ್ಳುಫೋಟೋ ಸೃಷ್ಟಿಸಿ ಅದನ್ನು ದಾಖಲೆಯಾಗಿ ಸಲ್ಲಿಸಿರುವುದನ್ನು ಶನಿವಾರಸಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ದಾಖಲೆ ಸಹಿತ ಬಿಚ್ಚಿಟ್ಟಿದ್ದಾರೆ.
ಇನ್ನು ಮಾಧ್ಯಮದವರು ಸುದ್ದಿ ಮಾಡುವುದಕ್ಕೆ ಬರುತ್ತಿದ್ದಾರೆ ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆ ಕಾಮಗಾರಿಯ ತುಂಡುಗುತ್ತಿಗೆ ಪಡೆದ ವ್ಯಕ್ತಿಯೊಬ್ಬರು ಓಡೋಡಿ ಬಂದು 8 ತಿಂಗಳಿನಿಂದ ಅರ್ಧಕ್ಕೆ ನಿಂತಿದ್ದ ಕಾಂಪೌಂಡ್ ಕಾಮಗಾರಿಯನ್ನು ಈಗ ಶುರು ಮಾಡಿಸಿದ್ದಾರೆ. ಅಂಗನವಾಡಿ ಸುತ್ತ ಒಟ್ಟು 46 ಮೀಟರ್ ಕಾಂಪೌಂಡ್ ನಿರ್ಮಿಸಬೇಕಾಗಿತ್ತು. ಆದರೆ ಕಾಂಗ್ರೆಸ್ ಮುಖಂಡರೊಬ್ಬರಿಗೆ ಅನುಕೂಲವಾಗಲೆಂದು ಅಂಗನವಾಡಿಗೆ ಸೇರಿದ ಜಾಗದಲ್ಲಿ 5 ಅಡಿಯನ್ನು ಬಿಟ್ಟು ಕಾಂಪೌಂಡ್ ನಿರ್ಮಿಸುತ್ತಿದ್ದಾರೆ ಎಂದು ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಪುಟಾಣಿಗಳ ಶಿಕ್ಷಣಕ್ಕಾಗಿ ಅನುಕೂಲ ಮಾಡಬೇಕಾಗಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ರಾಜಕೀಯ ಮುಖಂಡರ ಮುಲಾಜಿಗೆ ಒಳಗಾಗಿ, ಅವರ ಅನುಕೂಲಕ್ಕಾಗಿ ಸರ್ಕಾರಿ ಜಾಗವನ್ನು ಬಿಟ್ಟುಕೊಟ್ಟಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಅಲ್ಲದೆ ಅಂಗನವಾಡಿಯ ಕಾಂಪೌಂಡಿನಲ್ಲೂ ಹಣವನ್ನು ನುಂಗಿ ನೀರು ಕುಡಿಯುತ್ತಿರುವುದು ನಾಚಿಗೇಡಿನ ಸಂಗತಿಯೇ ಸರಿ. ಇಷ್ಟೆಲ್ಲಾ ಅವ್ಯವಹಾರ ನಡೆದಿದ್ದರೂ ಸಂಬಂಧಿಸಿದ ಇಲಾಖೆಯ ಮೇಲಿನ ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲದಂತೆ ಇರುವುದು ಸಾಕಷ್ಟು ಅನುಮಾನ ಮೂಡುವಂತೆ ಮಾಡಿದೆ.