SSLC ರಿಸಲ್ಟ್: ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್, ಸುರೇಶ್ ಕುಮಾರ್ ಫುಲ್ ಖುಷ್
* ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ
* ಪರೀಕ್ಷೆ ಬರೆಯಲು ಅವಕಾಶ ಸಿಗದೇ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಈಗ ರಾಜ್ಯಕ್ಕೆ ಫಸ್ಟ್
* ಶುಲ್ಕ ಕಟ್ಟಲಾಗದೇ SSLC ಮುಖ್ಯ ಪರೀಕ್ಷೆಯಿಂದ ವಂಚಿತಳಾಗಿದ್ದ ವಿದ್ಯಾರ್ಥಿನಿ
* ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಸ್ಥಾನ ಪಡೆದ ಅದೇ ವಿದ್ಯಾರ್ಥಿನಿ
ಬೆಂಗಳೂರು, (ಅ.11): ಇತ್ತೀಚಿಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ಬರೆಯಲು ಅವಕಾಶ ಸಿಗದೇ ಆತ್ಮಹತ್ಯೆಗೆ ಯತ್ನಿಸಿದ್ದ ಕೊರಟಗೆರೆಯ ವಿದ್ಯಾರ್ಥಿನಿ ಗ್ರೀಷ್ಮಾ ಇದೀಗ ಪೂರಕ ಪರೀಕ್ಷೆಯಲ್ಲಿ (Supplementary Exams) ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ತುಮಕೂರಿನ (Tumakuru) ಕೊರಟಗೆರೆಯ ನರಸಿಂಹಮೂರ್ತಿ ಮತ್ತು ಪದ್ಮಾವತಿ ದಂಪತಿಯ ಮಗಳು ಗ್ರೀಷ್ಮಾ 625ಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ (First Rank) ಪಡೆದಿದ್ದಾಳೆ.
ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ SSLC ಪೂರಕ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್
ಮೂಡಬಿದಿರೆಯ ಆಳ್ವಾಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗ್ರೀಷ್ಮಾ 9ನೇ ತರಗತಿಯಲ್ಲಿ ಶೇ.96ರಷ್ಟು ಅಂಕ ಪಡೆದಿದ್ದರು. ಬಳಿಕ ಲಾಕ್ಡೌನ್ ಹಿನ್ನೆಲೆ ಮನೆಗೆ ವಾಪಸ್ ಆಗಿದ್ದರು. 9ನೇ ತರಗತಿಯಲ್ಲಿ ಬಾಕಿಯಿದ್ದ ಶುಲ್ಕ ಪಾವತಿಸದಿದ್ದಕ್ಕೆ 10ನೇ ತರಗತಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಇದರಿಂದ ನೊಂದು ಗ್ರೀಷ್ಮಾಆತ್ಮಹತ್ಯೆಗೆ ಯತ್ನಿಸಿದ್ದಳು (suicide Attempt). ಬಳಿಕ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ನೀಡಿದ್ದ ಭರವಸೆಯಿಂದ ಆತ್ಮಹತ್ಯೆ ಯೋಚನೆ ಬಿಟ್ಟು ಇದೀಗ ರಾಜ್ಯಕ್ಕೆ ಮಾದರಿಯಾಗಿದ್ದಾಳೆ.
ಪಾಲಕರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಂದಣಿ ಬಗ್ಗೆ ಸಂಸ್ಥೆಯಲ್ಲಿ ವಿಚಾರಿಸಿದಾಗ ಈ ಬಗ್ಗೆ ವಿಷಯ ಬೆಳಕಿಗೆ ಬಂದಿತ್ತು. ಇದರಿಂದ ನೊಂದ ವಿದ್ಯಾರ್ಥಿನಿ (Student) ಮಕ್ಕಳ ಹಕ್ಕುಗಳ ಆಯೋಗ ಡಿಡಿಪಿಐ ಶಿಕ್ಷಣ ಸಚಿವರಿಗೆ ಇ - ಮೇಲ್ ಕಳುಹಿಸಿದರು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ಆಕೆ ಜುಲೈ 17ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷಯ ತಿಳಿದ ಕೂಡಲೇ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ (Suresh Kumar) ಅವರು ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ರು.
ಅಲ್ಲದೇ ಯಾವುದೇ ಕಾರಣಕ್ಕೂ ಮನಸ್ಸಿಗೆ ಬೇಸರ ಮಾಡಿಕೊಳ್ಳದೇ ಉತ್ತಮ ಅಂಕಗಳನ್ನು ಪಡೆಯುವೆ, ಅಭ್ಯಾಸದ ಕಡೆ ಗಮನಹರಿಸುವಂತೆ ವಿದ್ಯಾರ್ಥಿನಿಗೆ ಧೈರ್ಯ ತುಂಬಿದ್ದರು. ಇದೀಗ ಸುರೇಶ್ ಕುಮಾರ್ (Suresh Kumar) ಹೇಳಿದಂತೆ ಗ್ರೀಷ್ಮಾ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ 625ಕ್ಕೆ 599 ಅಂಕ ಪಡೆದು ಸೈ ಎನಿಸಕೊಂಡಿದ್ದಾಳೆ. ಇದರಿಂದ ಸುರೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಸುರೇಶ್ ಕುಮಾರ್ ಫುಲ್ ಖುಷ್
ಗ್ರೀಷ್ಮಾ ಪ್ರಥಮ ಸ್ಥಾನ ಬಂದಿರುವುದಕ್ಕೆ ಸಾಮಾಜಿಕ ಜಾಲತಾಣಗಳ ಸಂತಸ ವ್ಯಕ್ತಪಡಿಸಿರುವ ಸುರೇಶ್ ಕುಮಾರ್, ಅತ್ಯಂತ ಸಮಾಧಾನ ತಂದ ಸುದ್ದಿ ಇದು. ಸಂತಸವೂ ಆಗುತ್ತಿದೆ. ಅಂದು ಏನೋ ತಪ್ಪಿಂದ ಗ್ರೀಷ್ಮಾ ಗೆ ಎಸೆಸೆಲ್ಸಿ ಪರೀಕ್ಷೆಯ ಹಾಲ್ ಟಿಕೆಟ್ ದೊರಕಿರಲಿಲ್ಲ. (ಹತ್ತನೆಯ ತರಗತಿಗೆ ವಿದ್ಯಾರ್ಥಿನಿಯ ದಾಖಲಾತಿಯೇ ಆಗಿರಲಿಲ್ಲ) ತೀವ್ರವಾಗಿ ನೊಂದ ಗ್ರೀಷ್ಮಾ ಪರೀಕ್ಷೆಯ ಒಂದು ಅನಾಹುತಕ್ಕೆ ಕೈ ಹಾಕಿದ್ದಳು. ಸುದ್ದಿ ತಿಳಿದ ತಕ್ಷಣ 17.7.2021, ಶನಿವಾರ ಮುಂಜಾನೆಯೇ ನಾನು ಕೊರಟಗೆರೆಯ ಗ್ರೀಷ್ಮಾಳ ಮನೆಗೆ ಧಾವಿಸಿದೆ. (19 ರಿಂದ ಪರೀಕ್ಷೆ) ಅವಳನ್ನು ಪಕ್ಕದಲ್ಲಿ ಕೂಡಿಸಿಕೊಂಡು ಧೈರ್ಯ ಹೇಳಿದೆ. ನಿನ್ನನ್ನು ಎಸೆಸೆಲ್ಸಿ ಪೂರಕ ಪರೀಕ್ಷೆಗೆ ಕೂಡಿಸುವ ಜವಾಬ್ದಾರಿ ನನ್ನದು ಚಿಂತೆ ಇಲ್ಲದೆ ಸಿದ್ಧಳಾಗು, ಎಂದಿದ್ದೆ.
ನಂತರ ನನ್ನ ಶಿಕ್ಷಣ ಸಚಿವ ಸ್ಥಾನ ಹೋದ ನಂತರವೂ ಆಯುಕ್ತರು, ಎಸ್‌ಎಸ್‌ಎಲ್‌ಸಿ ಮಂಡಳಿ ನಿರ್ದೇಶಕರು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರು ಹಾಗೂ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಗ್ರೀಷ್ಮಾಳನ್ನು SSLC ಪೂರಕ ಪರೀಕ್ಷೆಯಲ್ಲಿ ಅವಕಾಶ ಕೊಡಿಸುವುದರಲ್ಲಿ ಯಶಸ್ವಿಯಾದೆ. ಇಂದು ಫಲಿತಾಂಶ ತಿಳಿದಾಗ ನಿರಾಳವಾಯಿತು ನನ್ನ ಮನ.
ಇಂದು ಮೊದಲನೇ Rank ಪಡೆದಿರುವ ಕು. ಗ್ರೀಷ್ಮಳಿಗೆ ಹಾರ್ದಿಕ ಅಭಿನಂದನೆಗಳು. (625 ಕ್ಕೆ 599 ಅಂಕಗಳು) ಗ್ರೀಷ್ಮಾ ನೀನು ಹಿಡಿದ ಛಲ ಬಿಡಲಿಲ್ಲ. ಸಾಧಿಸಿ ತೋರಿಸಿದೆ. ನೀನೊಂದು ಉತ್ತಮ ಉದಾಹರಣೆ ರಾಜ್ಯದ ಮಕ್ಕಳಿಗೆ. ನಿನ್ನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ.