ಇಂದು ಭಾರತ್ ಬಂದ್: SSLC ಪೂರಕ ಪರೀಕ್ಷೆ ನಡೆಯುತ್ತಾ?
* ಪರೀಕ್ಷೆ ಹೆಸರು ನೋಂದಾಯಿಸಿಕೊಂಡಿರುವ 53,041 ವಿದ್ಯಾರ್ಥಿಗಳು
* ರಾಜ್ಯಾದ್ಯಂತ 352 ಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆ
* ಕೃಷಿ ಕಾಯ್ದೆ ವಿರೋಧಿಸಿ ಇಂದು ಭಾರತ್ ಬಂದ್
ಬೆಂಗಳೂರು(ಸೆ.27): ಭಾರತ್ ಬಂದ್ ನಡುವೆಯೇ ರಾಜ್ಯಾದ್ಯಂತ ಇಂದು(ಸೋಮವಾರ) ಮತ್ತು ಬುಧವಾರ 2021ನೇ ಸಾಲಿನ ಎಸ್ಸೆಸ್ಸೆಲ್ಸಿ(SSLC) ಪೂರಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಒಟ್ಟು 53,041 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ರಾಜ್ಯಾದ್ಯಂತ 352 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಮುಖ್ಯ ಪರೀಕ್ಷೆ ಮಾದರಿಯಲ್ಲೇ ಪೂರಕ ಪರೀಕ್ಷೆಯನ್ನೂ(Exam) ಎರಡೇ ದಿನದಲ್ಲಿ ಸರಳವಾಗಿ ನಡೆಸಲಾಗುತ್ತಿದೆ. ಮೊದಲ ದಿನ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯ ಹಾಗೂ ಎರಡನೇ ದಿನ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಎರಡೂ ದಿನ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ಜರುಗಲಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಭದ್ರತೆ ಹಾಗೂ ಸುರಕ್ಷತೆ ವಿಚಾರದಲ್ಲಿ ಲೋಪಗಳಾಗದಂತೆ ಆಯಾ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸಂಪೂರ್ಣ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲಾ ತಿಳಿಸಿದ್ದಾರೆ.
ಕೋರ್ ವಿಷಯಗಳಿಗೆ ಪ್ರತಿ ವಿಷಯಕ್ಕೆ 40 ಅಂಕದಂತೆ ಒಟ್ಟು ಮೂರು ವಿಷಯದಿಂದ 120 ಅಂಕಗಳ ಪ್ರಶ್ನೆಗಳಿರುವ ಒಂದು ಪ್ರಶ್ನೆ ಪತ್ರಿಕೆ ಮತ್ತು ಅದೇ ಮಾದರಿಯಲ್ಲಿ ಭಾಷಾ ವಿಷಯಗಳಿಗೆ 120 ಅಂಕಗಳ ಮತ್ತೊಂದು ಪ್ರಶ್ನೆ ಪತ್ರಿಕೆ ಇರಲಿದೆ. ವಿದ್ಯಾರ್ಥಿಗಳು ಒಎಂಆರ್ ಮಾದರಿಯಲ್ಲಿ ಬಹು ಆಯ್ಕೆಯ ಉತ್ತರಗಳಲ್ಲಿ ಸರಿಯಾದುದನ್ನು ಗುರುತಿಸಬೇಕಾಗುತ್ತದೆ. ಕೋವಿಡ್ ಮಾರ್ಗಸೂಚಿ ಅನುಸಾರ ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳು(Students) ಮಾತ್ರ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಬಹುತೇಕ ಎಲ್ಲ ಅಧಿಕಾರಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿರುವುದನ್ನು ಕಡ್ಡಾಯಗೊಳಿಸಲಾಗಿದೆ.
ಬೆಂಗಳೂರು ಉತ್ತರ ವಿವಿ ಪರೀಕ್ಷೆ ರದ್ದಿಲ್ಲ: ಧಾರವಾಡ ವಿವಿ ಪರೀಕ್ಷೆ ಮುಂದೂಡಿಕೆ
ಭಾರತ್ ಬಂದ್ (Bharath Bandh) ಇದ್ದರೂ ಇಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಪರೀಕ್ಷೆಗಳು ನಿಗದಿಯಾದಂತೆಯೇ ನಡೆಯಲಿವೆ. ಈ ಬಗ್ಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜನಾರ್ಧನ್ ಸುವರ್ಣ ನ್ಯೂಸ್ ಜತೆ ಮಾತನಾಡಿ ಸ್ಪಷ್ಟಪಡಿಸಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ಇಂದು ಭಾರತ್ ಬಂದ್ ಘೋಷಿಸಿರುವ ಬೆನ್ನಲ್ಲೇ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನ ಮುಂದೂಡಲಾಗಿದೆ. ಪರೀಕ್ಷೆಗಳನ್ನ ಮುಂದೂಡಿ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್. ನಾಗರಾಜ್ ಆದೇಶಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿವೆ. ಕರ್ನಾಟಕದಲ್ಲೂ ಇದಕ್ಕೆ ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.