ಬೆಂಗಳೂರು(ನ.29): ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2021ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾ ಪಟ್ಟಿಯನ್ನು ಡಿಸೆಂಬರ್‌ ಅಂತ್ಯಕ್ಕೆ ಪ್ರಕಟಿಸುವ ಸಾಧ್ಯತೆ ಇದೆ.

ಇದರ ಜತೆಗೆ, ಶಾಲೆ ಆರಂಭ ಇನ್ನಷ್ಟು ತಡವಾದರೆ ಇನ್ನಷ್ಟು ಪಠ್ಯ (ಸಿಲಬಸ್‌) ಕಡಿತ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಶಿಕ್ಷಣ ಇಲಾಖೆ, ಪ್ರಸಕ್ತ ಸಾಲಿಗೆ ಶೇ.30ರಷ್ಟು ಪಠ್ಯಗಳನ್ನು ಕಡಿತ ಮಾಡಿದೆ.
ಪರೀಕ್ಷಾ ವೇಳಾಪಟ್ಟಿಗೆ ಸಿದ್ಧತೆ:

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರದ ಸೂಚನೆಯಂತೆ ಮಂಡಳಿ ಅವಧಿಗೂ ಮೊದಲೇ 2021ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಸಿದ್ಧತೆ ಆರಂಭಿಸಿದ್ದು, ಡಿಸೆಂಬರ್‌ ಅಂತ್ಯದಲ್ಲಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸುವ ಸಂಭವವಿದೆ.

ಕೊರೋನಾ ಇದ್ರೂ ರಾಜ್ಯದಲ್ಲಿ SSLC, PUC ಪರೀಕ್ಷೆ ನಡೆಯೋದು ಪಕ್ಕಾ!

ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದೇ ಆನ್‌ಲೈನ್‌, ಆಫ್‌ ಲೈನ್‌ ಶಿಕ್ಷಣ ಪಡೆಯುತ್ತಿರುವುದರಿಂದ ಮಕ್ಕಳಿಗೆ ಪರಿಣಾಮಕಾರಿಯಾಗಿ ಪಾಠಗಳು ಅರ್ಥವಾಗುತ್ತಿಲ್ಲ, ಬಹಳಷ್ಟು ಮಕ್ಕಳು ಹೆಚ್ಚಿನ ಗಮನ ಕೊಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಈಗಲೇ ವೇಳಾಪಟ್ಟಿ ಪ್ರಕಟಿಸಿದರೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಆರಂಭಿಸುತ್ತಾರೆ ಎಂಬ ಕಾರಣಕ್ಕೆ ವೇಳಾಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿ ಇಲಾಖೆ ನಿರತವಾಗಿದೆ.

ಕೊರೋನಾ ಸೋಂಕು ಕಡಿಮೆಯಾಗಿದ್ದರೂ ಸಹ ಶಾಲೆಗಳ ಆರಂಭಿಸಲು ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದ ಮುಂದೆ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳು ಸಹ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಪ್ರಸ್ತುತ ನಡೆಯುತ್ತಿರುವ ಆನ್‌ಲೈನ್‌ ಕ್ಲಾಸ್‌ ಹಾಗೂ ಆಫ್‌ಲೈನ್‌ ಶಿಕ್ಷಣದ ಮೂಲಕವೇ ವಿದ್ಯಾರ್ಥಿಗಳನ್ನು ಸಾಧ್ಯವಾದಷ್ಟೂಮಟ್ಟಕ್ಕೆ ಪರೀಕ್ಷೆಗೆ ಸಿದ್ಧಪಡಿಸುವುದು ಹಾಗೂ ಸೋಂಕು ಇನ್ನಷ್ಟು ಇಳಿದು ಜನವರಿಯಿಂದ ಶಾಲೆಗಳು ಆರಂಭವಾದರೆ ಕೆಲ ತಿಂಗಳು ಭೌತಿಕ ತರಗತಿಗಳನ್ನೂ ನಡೆಸಲು ಸರ್ಕಾರ ಚಿಂತನೆ ನಡೆಸಿದೆ.