ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಕ್ಕಳೇ ಆಲ್ ದ ಬೆಸ್ಟ್!
* ಸೋಮವಾರದಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ
* ಸಮವಸ್ತ್ರ ಧರಿಸಿ ಬನ್ನಿ, ಹಿಜಾಬ್ ಧರಿಸಿ ಬಂದರೆ ಪ್ರವೇಶ ಇಲ್ಲ
* ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ
ಬೆಂಗಳೂರು(ಮಾ.28): ನಿಗದಿಯಂತೆ ಸೋಮವಾರದಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷಾ ಕೊಠಡಿಗೆ ಹಾಜರಾಗಬೇಕಾಗಿದೆ. ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ಇರುವುದಿಲ್ಲ. ಕನಿಷ್ಠ ಒಂದು ಗಂಟೆಗೂ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪತ್ರದ ಜತೆ ತೆರಳಿ ಪರೀಕ್ಷಾ ಕೊಠಡಿಯನ್ನು ಹುಡುಕಿಕೊಳ್ಳಬೇಕಾಗುತ್ತದೆ.
ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆಗಳು ನಿತ್ಯ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ನಡೆಯಲಿವೆ. ಸಂಗೀತ ವಿಷಯ ಹಾಗೂ ಕೆಲ ಕೋರ್ ವಿಷಯಗಳು ಮಧ್ಯಾಹ್ನ 2ರಿಂದ ಸಂಜೆ 5.15ರ ವರೆಗೆ ನಡೆಯಲಿವೆ. ಹಾಗಾಗಿ ಪರೀಕ್ಷೆ ಕೇಂದ್ರದಲ್ಲಿ ಒಂದು ಗಂಟೆ ಮೊದಲೇ ಇರುವುದು ಒಳ್ಳೆಯದು. ಸಾರ್ವಜನಿಕ ವಾಹನಗಳಲ್ಲಿ ತೆರಳಬೇಕಾದವರು ಸಂಚಾರ ದಟ್ಟಣೆ ಮತ್ತಿತರೆ ಸಮಸ್ಯೆಯಿಂದ ತಡವಾಗುವುದನ್ನು ತಪ್ಪಿಸಲು ಆದಷ್ಟೂಬೇಗ ಮನೆ ಬಿಡುವುದು ಒಳ್ಳೆಯದು.
ಈ ಬಾರಿಯೂ ಕೋವಿಡ್ ಕಾರಣದಿಂದ ಶೇ.100ರಷ್ಟುಭೌತಿಕ ತರಗತಿಗಳು ನಡೆಯದ ಕಾರಣ ಕೋವಿಡ್ ಪೂರ್ವ ಮಾದರಿಯಷ್ಟುಕಠಿಣವಾಗಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿಲ್ಲ. ಹಾಗಾಗಿ ನಿರಾತಂಕವಾಗಿ ಪರೀಕ್ಷೆ ಎದುರಿಸಿ.
ಸಮವಸ್ತ್ರ ಕಡ್ಡಾಯ:
ಶಾಲೆಯಲ್ಲಿ ನಿಗದಿಪಡಿಸಿರುವ ಸಮವಸ್ತ್ರ ಧರಿಸಿ ಹೊರಡಿ. ಬೇರೆ ಯಾವುದೇ ಉಡುಪು ಧರಿಸಿ ಹೋದರೆ ಸಮಸ್ಯೆಯಾಗಬಹುದು. ಯಾವುದೇ ಧರ್ಮಾಧಾರಿತ ಉಡುಪು ತೊಟ್ಟು ಪರೀಕ್ಷಾ ಕೇಂದ್ರಕ್ಕೆ ಹೋಗುವ ಕೆಲಸ ಮಾಡಬೇಡಿ. ಇದರಿಂದ ಪ್ರವೇಶ ಸಿಗದೆ ಮುಂದಿನ ಶಿಕ್ಷಣದ ಮೇಲೆ ಗಂಭೀರ ಪರಿಣಾಮವಾಗಬಹುದು.
ನಕಲು ಚೀಟಿ ಸೇರಿದಂತೆ ಮತ್ತಿತರೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಬೇಡಿ. ಸಿಕ್ಕಿಬಿದ್ದು ಡಿಬಾರ್ ಆದರೆ ಭವಿಷ್ಯವೇ ಹಾಳಾಗುತ್ತದೆ. ಪ್ರಶ್ನೆ ಪತ್ರಿಕೆ ಕೈಗೆ ಬಂದ ಕೂಡಲೇ ಒಮ್ಮೆ ಪ್ರಶ್ನೆಗಳನ್ನು ನಿಧಾನವಾಗಿ ಓದಿಕೊಳ್ಳಿ. ಇದಕ್ಕಾಗಿ 15 ನಿಮಿಷ ಕಾಲಾವಕಾಶವಿರುತ್ತದೆ. ನಂತರ ಉತ್ತರ ಪತ್ರಿಕೆಗಳನ್ನು ಕೊಠಡಿ ಮೇಲ್ವಿಚಾರಕರು ನೀಡುತ್ತಾರೆ. ಸ್ಪಷ್ಟವಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ. ಸಾಧ್ಯವಾದಷ್ಟುಯಾವುದೇ ಪ್ರಶ್ನೆಗಳಿಗೆ ಉತ್ತರ ಬರೆಯದೆ ಬರಬೇಡಿ. ಎಷ್ಟುಉತ್ತರ ಗೊತ್ತಿರುತ್ತದೋ ಅಷ್ಟನ್ನೇ ಬರೆದು ಬನ್ನಿ.
ಮಾಸ್ಕ್ ಕಡ್ಡಾಯವಿಲ್ಲ:
ಕೋವಿಡ್ ತಹಬಂದಿಗೆ ಬಂದಿರುವುದರಿಂದ ಈ ಬಾರಿ ಪರೀಕ್ಷೆಗೆ ಮಾಸ್ಕ್ ಧರಿಸಿ ಹೋಗುವುದು ಕಡ್ಡಾಯವಲ್ಲ. ಧರಿಸುವುದು ಬಿಡುವುದು ವಿದ್ಯಾರ್ಥಿಗಳ ಇಚ್ಛೆಗೆ ಬಿಟ್ಟದ್ದು. ಆದರೆ, ಸ್ಯಾನಿಟೈಸರ್ ವ್ಯವಸ್ಥೆ ಇರುತ್ತದೆ. ಕೊಠಡಿಗಳನ್ನೂ ಪ್ರತಿ ನಿತ್ಯ ಸ್ಯಾನಿಟೈಸ್ ಮಾಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳು ಕೋವಿಡ್ ಬಗ್ಗೆಯೂ ಭಯ ಮರೆತು ಪರೀಕ್ಷೆ ಬರೆದು, ತಮ್ಮ ಭವಿಷ್ಯ ರೂಪಿಸಿಕೊಳ್ಳಿ.
-ಬಸವರಾಜಬೊಮ್ಮಾಯಿ, ಸಿಎಂ
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳ ವಿಷಯದಲ್ಲಿ ಹೆತ್ತವರು ಗಮನಹರಿಸಬೇಕು, ಹಿಜಾಬ್‌ನಂತಹ ಸೂಕ್ಷ್ಮ ವಿಷಯಗಳ ಬಗ್ಗೆ ದೀರ್ಘ ದೃಷ್ಟಿಯಿಂದ ನೋಡಬೇಕು. ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು.
ಜಮಾಅತ್ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್