Asianet Suvarna News Asianet Suvarna News

New Education Policy: ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷಾ ಮಂಡಳಿ ವಿಲೀನ

ಕರ್ನಾಟಕ ಶಾಲಾ ಪರೀಕ್ಷಾ ಮೌಲ್ಯನಿರ್ಣಯ ಮಂಡಳಿ ಎಂದು ಹೆಸರು, ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಧ್ವನಿಮತದ ಅಸ್ತು

SSLC and PUC Exam Board Merger in Karnataka grg
Author
First Published Sep 23, 2022, 6:48 AM IST

ವಿಧಾನಸಭೆ(ಸೆ.23):  ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸುವ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಗುರುವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ವಿಧೇಯಕ ಉದ್ದೇಶಗಳನ್ನು ವಿವರಿಸಿ ಅಂಗೀಕಾರ ಪಡೆದುಕೊಂಡರು. ಹೊಸ ಶಿಕ್ಷಣ ನೀತಿ ಅನ್ವಯ ಎರಡು ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಎಂದು ನಾಮಕಾರಣ ಮಾಡಲಾಗಿದೆ.

ಹೊಸ ಶಿಕ್ಷಣ ನೀತಿಯ ಅನ್ವಯ ವಿಧೇಯಕವನ್ನು ತರಲಾಗಿದೆ. ಪಿಯುಸಿ ನಿರ್ದೇಶಕರಿಗೆ ಪರೀಕ್ಷೆ ಕಡೆ ಗಮನಹರಿಸಿಕೊಂಡು ಆಡಳಿತ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕಡೆಯೂ ನೋಡಬೇಕಿದೆ. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಕಷ್ಟಕರವಾಗಿದೆ. ಹೀಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಒಗ್ಗೂಡಿಸಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಂದು ಮಾಡಲಾಗಿದೆ. ಮಂಡಳಿಗೆ ಒಬ್ಬರು ಐಎಎಸ್‌ ಅಧಿಕಾರಿಯನ್ನು ನೇಮಿಸಲಾಗಿದೆ. ಇದರಿಂದ ನಿರ್ದೇಶಕರು ಶೈಕ್ಷಣಿಕ ಚಟುವಟಿಕೆಗಳತ್ತ ಹೆಚ್ಚಿನ ಗಮನಹರಿಸಿ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಅಶ್ವಥ್ ನಾರಾಯಣ

ದೇಶದ ಕೆಲವು ರಾಜ್ಯಗಳಲ್ಲಿ 10, 11 ಮತ್ತು 12ನೇ ತರಗತಿ ಪ್ರತ್ಯೇಕವಾಗಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತ್ಯೇಕವಾಗಿದೆ. ಈಗ ಎರಡನ್ನು ವಿಲೀನಗೊಳಿಸಲಾಗುತ್ತಿದೆ. ಎನ್‌ಇಪಿ ಅನ್ವಯ ನಾಲ್ಕು ಹಂತದಲ್ಲಿ ಶೈಕ್ಷಣಿಕವನ್ನು ವಿಭಾಗಿಸಲಾಗಿದೆ. ಎಲ್‌ಕೆಜಿಯಿಂದ ಎರಡನೇ ತರಗತಿ, ಮೂರನೇ ತರಗತಿಯಿಂದ ಐದನೇ ತರಗತಿ, ಆರನೇ ತರಗತಿಯಿಂದ ಎಂಟನೇ ತರಗತಿ ಮತ್ತು ಒಂಭತ್ತನೇ ತರಗತಿಯಿಂದ 12ನೇ ತರಗತಿಯವರೆಗೆ ವಿಭಾಗಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಪಬ್ಲಿಕ್‌ ಪರೀಕ್ಷೆಯನ್ನು ಯಥಾಸ್ಥಿತಿಯಲ್ಲಿಯೇ ನಡೆಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು. ಚರ್ಚೆಯಲ್ಲಿ ಸದಸ್ಯರಾದ ರಮೇಶ್‌ಕುಮಾರ್‌, ಶರತ್‌ ಬಚ್ಚೇಗೌಡ, ಅಭಯ್‌ ಪ್ರಸಾದ್‌, ಪಿ.ರಾಜೀವ್‌ ಸೇರಿದಂತೆ ಇತರರು ಭಾಗವಹಿಸಿದರು.
 

Follow Us:
Download App:
  • android
  • ios