Asianet Suvarna News Asianet Suvarna News

Udupi: ಕುಂದಾಪುರ ಕಾಲೇಜ್ ಕ್ಯಾಂಪಸ್‌ನಲ್ಲಿ ಸ್ಪೆಷಲ್ ಮಾರ್ಕೆಟ್

ಅಲ್ಲೊಂದು ಮಾರುಕಟ್ಟೆ ಇದೆ, ಆದರೆ ಮಾರ್ಕೆಟ್ ಅಲ್ಲ. ಅಲ್ಲಿರುವ ಮಾರಾಟಗಾರರು ವ್ಯಾಪಾರಿಗಳಲ್ಲ, ಖರೀದಿಸಿದವರು ಗ್ರಾಹಕರಲ್ಲ. ಏನಿದು ಸ್ಪೆಷಲ್ ಅಂದ್ರಾ. ಇಲ್ಲಿದೆ ಒಂದು ವರದಿ.

Special Market in Kundapura College Campus at Udupi gvd
Author
Bangalore, First Published Aug 4, 2022, 12:07 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಆ.04): ಅಲ್ಲೊಂದು ಮಾರುಕಟ್ಟೆ ಇದೆ, ಆದರೆ ಮಾರ್ಕೆಟ್ ಅಲ್ಲ. ಅಲ್ಲಿರುವ ಮಾರಾಟಗಾರರು ವ್ಯಾಪಾರಿಗಳಲ್ಲ, ಖರೀದಿಸಿದವರು ಗ್ರಾಹಕರಲ್ಲ. ಏನಿದು ಸ್ಪೆಷಲ್ ಅಂದ್ರಾ. ಇಲ್ಲಿದೆ ಒಂದು ವರದಿ. ಬಾಯಲ್ಲಿ ನೀರೂರಿಸಿದ ಆಹಾರ ಉತ್ಪಾದನೆ ಮತ್ತು ಮಾರಾಟ ಮೇಳ, ತಾವೇ ತಯಾರಿಸಿದ ಬಗೆಬಗೆಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವರ್ತಕರು, ವಿವಿಧ ತಿಂಡಿ-ತಿನಿಸುಗಳನ್ನು ಹಣ ಕೊಟ್ಟು ಖರೀದಿಸುತ್ತಿರುವ ಗ್ರಾಹಕರು. ಇನ್ನು ಗ್ರಾಹಕರನ್ನು ಸೆಳೆಯಲು ಇತರರೊಂದಿಗೆ ಸ್ಪರ್ಧೆಗಿಳಿದು ಮಾತನಾಡುತ್ತಿರುವ ಸ್ವಾಗತಕಾರರು. ಇದೇನೊ ಶಾಪಿಂಗ್ ಮಾಲ್ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇವರೆಲ್ಲರೂ ವಿದ್ಯಾರ್ಥಿಗಳು ಆದರೆ ಇಂದು ಮಾತ್ರ ಪಕ್ಕಾ ವ್ಯಾಪಾರಿಗಳಾಗಿ ಬದಲಾಗಿದ್ದಾರೆ. 

ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಕೌಶಲ್ಯ ಬೆಳೆಸುವ ಉದ್ದೇಶದಿಂದ ಕುಂದಾಪುರ ಎಜ್ಯುಕೇಶನಲ್ ಸೊಸೈಟಿ ಆಡಳಿತದ ಕುಂದಾಪುರ ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವ್ಯಾಪಾರ ಮೇಳವಿದು. ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ತಾವೇ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಎಲ್ಲರ ಗಮನ ಸೆಳೆಯಿತು. ಒಟ್ಟು ಏಳು ಅಂಗಡಿಗಳಿದ್ದು, ಒಂದೊಂದು ಅಂಗಡಿಗಳಲ್ಲಿ ಐದಕ್ಕಿಂದ ಹೆಚ್ಚು ಸ್ಟಾಲ್‍ಗಳಿದ್ದವು. ಪಾನಿ ಪುರಿ, ಸೇವ್ ಪುರಿ, ಕೊಕೊನಟ್ ಲಡ್ಡು, ಗೋಲ್ಗಪ್ಪ, ಚುರ್ಮುರಿ, ಸ್ಯಾಂಡ್ ವಿಚ್, ಬಟರ್ ಪ್ಲೇನ್, ಮಸಾಲ ಚಾಟ್, ಬೇಬಿ ಕಾರ್ನ್ ಫ್ರೈ, ಪಾಪ್ ಕಾರ್ನ್, ಸಮೋಸಾ, ವೆಜ್ ಸ್ಯಾಂಡ್‍ವಿಚ್, ಪೀನಟ್ ಚಾಟ್ಸ್, ಖರ್ಜುರ ಬರ್ಫಿ, ಡ್ರೈ ಜಾಮುನ್ ಮೊದಲಾದ ತಿನಿಸಿಗಳು ಗ್ರಾಹಕರನ್ನು ಆಕರ್ಷಿಸಿದವು. 

ಉಡುಪಿ ಅಷ್ಟಮಿ ಗೊಂದಲ; ಈ ಬಾರಿ ಎರಡು ಅಷ್ಟಮಿ!

ಕಾಲೇಜಿನ ವಿದ್ಯಾರ್ಥಿಗಳು ಇವುಗಳನ್ನು ಖರೀದಿಸಿ ರುಚಿ ಸವಿದರು. ಜೊತೆಗೆ ಬಿಸಲಿನ ತಾಪದಿಂದ ದಣಿವಾರಿಸಿಕೊಳ್ಳಲು ಕೊಕ್ಕುಮ್ ಜ್ಯೂಸ್, ಬಟರ್ ಮಿಲ್ಕ್, ಮೊಕ್ಟೈಲ್, ರೋಸ್, ಲೆಮನ್, ಫ್ರೆಶ್ ಲೈಮ್, ಆರೆಂಜ್ ಜ್ಯೂಸ್, ಪಿಸ್ತಾ ಸೇರಿದಂತೆ ವಿವಿಧ ಬಗೆಯ ಸ್ವೀಟ್ಸ್, ಕೇಕ್, ಐಸ್‍ಕ್ರೀಮ್‍ಗಳನ್ನು, ಬಗೆಬಗೆಯ ತಂಪು ಪಾನೀಯಗಳನ್ನು ಖರೀದಿಸಲು ವಿದ್ಯಾರ್ಥಿಗಳು ಮುಗಿಬಿದ್ದರು. ಜೊತೆಗೆ ಸ್ಟೇಶನರಿ, ಕಂಗನ್ ಸ್ಟೋರ್ಸ್, ಕಾಯಿ ಅಂಗಡಿ, ವೀಳ್ಯದೆಲೆ, ವಿವಿಧ ಹೂವಿನ ಗಿಡಗಳ ನರ್ಸರಿಯೂ ಇತ್ತು. ವಿಶೇಷವೆಂದರೆ ವಿದ್ಯಾರ್ಥಿಗಳು ತಾವೇ ವಿವಿಧ ಔಷಧೀಯ ಗಿಡಗಳ ಮೂಲಕ ತಯಾರಿಸಿದ ನಿಸರ್ಗ ನಿಧಿ ಹೆಸರಿನ ಆಯುರ್ವೇದ ತೈಲಗಳು ಮಾರಾಟ ಮೇಳದಲ್ಲಿ ಗಮನ ಸೆಳೆಯಿತು. 

ಬಿಜೆಪಿಗೆ ಪರ್ಯಾಯ ಹಿಂದು ಪಕ್ಷ ಕಟ್ಟಬೇಕಾಗುತ್ತದೆ: ಮುತಾಲಿಕ್‌ ಎಚ್ಚರಿಕೆ

ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾದ ಸೀಮಾ ಪಿ ಶೆಟ್ಟಿ ಉದ್ಘಾಟಿಸಿದ ಬಳಿಕ ಆರಂಭಗೊಂಡ ವ್ಯಾಪಾರ ಮಳಿಗೆ ಮಧ್ಯಾಹ್ನ ಎರಡು ಗಂಟೆಯ ತನಕವೂ ನಡೆಯಿತು. ವ್ಯಾಪಾರ ಮೇಳದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಭೋದಕೇತರ ವೃಂದದವರು ಗ್ರಾಹಕರಾಗಿ ಖರೀದಿಯಲ್ಲಿ ತಲ್ಲೀನರಾದ ದೃಶ್ಯಗಳು ಕಂಡುಬಂದವು. ವಿವಿಧ ಬಗೆಯ ಮಾಡೆಲ್‍ಗಳು, ಬೊಂಬೆಗಳು ಗ್ರಾಹಕರನ್ನು ಆಕರ್ಷಿಸಿದವು. ವಿದ್ಯಾರ್ಥಿ ದಿಸೆಯಲ್ಲೇ ಅರಿವಾಗಬೇಕು ಎಂಬ ಸದುದ್ದೇಶದಿಂದ ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಇಂತಹ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸು ಕಂಡಿದೆ.

Follow Us:
Download App:
  • android
  • ios