7 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು: ಶಾಲೆಗೆ ಬೀಗ, ಹೆಚ್ಚಿದ ಆತಂಕ

ಕೆ.ಆರ್‌.ಪುರ ವ್ಯಾಪ್ತಿಯ ಪ್ರೌಢಶಾಲೆಯಲ್ಲಿ ಮೊದಲಿಗೆ ಶಿಕ್ಷಕರಲ್ಲಿ ಸೋಂಕು ಪತ್ತೆ, ಇದೀಗ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು| ಬೊಮ್ಮನಹಳ್ಳಿಯ ವಸಂತಪುರ ವಾರ್ಡ್‌ನ ಸಾಯಿ ಕುಟೀರ ಅಪಾರ್ಟ್‌ಮೆಂಟ್‌ವೊಂದರಲ್ಲೇ 8 ಕೇಸ್‌ ಪತ್ತೆ| ಸ್ಥಳೀಯರಲ್ಲಿ ಆತಂಕ| 
 

School Closed Due to Corona Positive to Students in Bengaluru grg

ಬೆಂಗಳೂರು(ಮಾ.06): ರಾಜಧಾನಿ ಬೆಂಗಳೂರಿನ ಮತ್ತೆ ಎರಡು ಕಡೆ ಕ್ಲಸ್ಟರ್‌ ಮಾದರಿಯಲ್ಲಿ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ನಾರಾಯಣಪುರ ಸರ್ಕಾರಿ ಪ್ರೌಢ ಶಾಲೆಯ ಏಳು ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ 14 ದಿನ ಶಾಲೆಗೆ ರಜೆ ಘೋಷಿಸಲಾಗಿದೆ.

ಕಾವಲುಭೈರಸಂದ್ರದ ಮಂಜುಶ್ರೀ ನರ್ಸಿಂಗ್‌ ಕಾಲೇಜು, ಬೊಮ್ಮನಹಳ್ಳಿಯ ಎಸ್‌ಎ​ನ್‌ಎನ್‌ ರಾಜ್‌ ಲೇಕ್‌ ವ್ಯೂವ್‌ ಅಪಾರ್ಟ್‌ಮೆಂಟ್‌, ಬೆಳ್ಳಂದೂರಿನ ಎಸ್‌ಜೆಆರ್‌ ವಾಟರ್‌ ಮಾರ್ಕ್ ಅಪಾರ್ಟ್‌ಮೆಂಟ್‌, ಅಟ್ಟೂರಿನ ಸಂಭ್ರಮ್‌ ಕಾಲೇಜು, ಅಗ್ರಗಾಮಿ ಕಾಲೇಜು ಮತ್ತು ಪೂರ್ವ ವೆನಿಜಿಯಾ ಅಪಾರ್ಟ್‌ಮೆಂಟ್‌ ಬಳಿಕ ಶುಕ್ರವಾರ ಬೊಮ್ಮನಹಳ್ಳಿಯ ವಸಂತಪುರ ವಾರ್ಡ್‌ನ ಸಾಯಿ ಕುಟೀರ ಅಪಾರ್ಟ್‌ಮೆಂಟ್‌ ಹಾಗೂ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಲಸ್ಟರ್‌ ಮಾದರಿಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

14 ದಿನ ಶಾಲೆ ಬಂದ್‌:

ಫೆ.27ರಂದು ನಾರಾಯಣಪುರ ಸರ್ಕಾರಿ ಪ್ರೌಢ ಶಾಲೆಯ ಇಬ್ಬರು ಶಿಕ್ಷಕರಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ 160 ವಿದ್ಯಾರ್ಥಿಗಳನ್ನು ಮಾ.4ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಶುಕ್ರವಾರ ಏಳು ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಆರು ವಿದ್ಯಾರ್ಥಿಗಳನ್ನು ಕೆ.ಆರ್‌.ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಬ್ಬ ವಿದ್ಯಾರ್ಥಿಯನ್ನು ಹೋಂ ಐಸೋಲೇಷನ್‌ ಮಾಡಲಾಗಿದೆ. ಈ ಮೂಲಕ ಶಾಲೆಯ 9 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ, ಶಾಲೆ ಬಂದ್‌ ಮಾಡಿ ವಿದ್ಯಾರ್ಥಿಗಳಿಗೆ 14 ದಿನ ರಜೆ ನೀಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರೌಢ ಶಾಲೆಯ 15 ವಿದ್ಯಾರ್ಥಿಗಳಿಗೆ ಕೊರೋನಾ: ಶುರುವಾಯ್ತು ಆತಂಕ

ಸಂಪರ್ಕಿತರಿಗೆ ಕ್ವಾರಂಟೈನ್‌:

ಇನ್ನು ಸೋಂಕು ಕಾಣಿಸಿಕೊಂಡ ವಿದ್ಯಾರ್ಥಿಗಳು ಲಕ್ಷಣ ರಹಿತ ಸೋಂಕಿತರಾಗಿದ್ದು, ಆರೋಗ್ಯವಾಗಿದ್ದಾರೆ. ಸೋಂಕಿತರೊಂದಿಗೆ 66 ಪ್ರಾಥಮಿಕ ಹಾಗೂ 53 ಮಂದಿ ಪರೋಕ್ಷ ಸಂಪರ್ಕ ಹೊಂದಿದ್ದಾರೆ ಎಂದು ಗುರುತಿಸಿ ಕ್ವಾರಂಟೈನ್‌ ಮಾಡಲಾಗಿದೆ. ಶಾಲೆಯಲ್ಲಿ ಒಟ್ಟು 188 ವಿದ್ಯಾರ್ಥಿಗಳಿದ್ದು, ಈವರೆಗೆ 160 ವಿದ್ಯಾರ್ಥಿಗಳನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಉಳಿದ 28 ವಿದ್ಯಾರ್ಥಿಗಳನ್ನು ಸೋಂಕು ಪರೀಕ್ಷೆ ನಡೆಸುವುದು ಬಾಕಿ ಇದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಸಾಯಿ ಕುಟೀರದ 8 ಮಂದಿಗೆ ಸೋಂಕು

ಕಳೆದ ಫೆ.25ರಂದು ವಸಂತಪುರ ವಾರ್ಡ್‌ ಸಾಯಿ ಕುಟೀರ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ವರಿಗೆ ಸೋಂಕು ದೃಢಪಟ್ಟಿತ್ತು. ತಕ್ಷಣ (ಫೆ.26-ಫೆ.27)ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಎಲ್ಲ 108 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಮತ್ತಿಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಇಡೀ ಅಪಾರ್ಟ್‌ಮೆಂಟ್‌ ನಿವಾಸಿಗಳನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಏಳು ದಿನದ ನಂತರ ಮಾ.3ರಂದು ಮತ್ತೆ ಎಲ್ಲರನ್ನು ಸೋಂಕು ಪರೀಕ್ಷೆಗೆ ಒಳಪಡಿಸಿದಾಗ ಮತ್ತೆ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ ಅನ್ನು ಕ್ಲಸ್ಟರ್‌ ಎಂದು ಪರಿಗಣಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದ್ದಾರೆ.

ಸ್ಥಳ ಸೋಂಕಿತರ ಸಂಖ್ಯೆ

ನಾರಾಯಣಪುರ ಸರ್ಕಾರಿ ಪ್ರೌಢಶಾಲೆ 09
ಸಾಯಿ ಕುಟೀರ ಅಪಾರ್ಟ್‌ಮೆಂಟ್‌ 08
 

Latest Videos
Follow Us:
Download App:
  • android
  • ios