ಆರ್‌ಸಿಯು ಸುತ್ತೋಲೆ ವಿರುದ್ಧ ಬೆಳಗಾವಿ ಚನ್ನಮ್ಮ ವಿವಿ ಸಿಡಿದೆದ್ದ SC/ST ವಿದ್ಯಾರ್ಥಿಗಳು!
ಬೆಳಗಾವಿಯ ಚನ್ನಮ್ಮ ವಿಶ್ವ ವಿದ್ಯಾಲಯದ ಶುಲ್ಕ ಪಾವತಿ ಕುರಿತ ಸುತ್ತೋಲೆ ವಿರುದ್ಧ ಸಿಡಿದೆದ್ದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಂದ ಪ್ರತಿಭಟನೆ. ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಿ ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿಗಳು.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಸೆ.24) : ರಾಜ್ಯದ ಅತಿದೊಡ್ಡ ವಿಶ್ವವಿದ್ಯಾಲಯವಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಿದೆ. 2020-2021ನೇ ಸಾಲಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಮರುಪಾವತಿ ಮಾಡಿಕೊಳ್ಳುವ ಕುರಿತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹೊರಡಿಸಿದ ಸುತ್ತೋಲೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಸಿಡಿದೆದ್ದಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಆಡಳಿತ ಮಂಡಳಿ ಕಚೇರಿಗೆ ನುಗ್ಗಲು ಯತ್ನಿಸಿದರು. ಪ್ರತಿಭಟನಾನಿರತ ವಿದ್ಯಾರ್ಥಿಗಳ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರು. ಭದ್ರತಾ ಸಿಬ್ಬಂದಿ ಪ್ರತಿರೋಧ ನಡುವೆಯೂ ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಿ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಸಲು ಅಧಿಕಾರಿಗಳು ಹರಸಾಹಸ ಪಟ್ಟರು. ರಾಣಿ ಚನ್ನಮ್ಮ ವಿವಿ 2020-21ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ಕಡಿಮೆ ಶಿಷ್ಯವೇತನ ಮಂಜೂರಾಗಿರುತ್ತದೆ. ಮಂಜೂರಾದ ಮೊತ್ತದಲ್ಲಿ ವಿನಾಯಿತಿ ನೀಡಿದ ಮೊತ್ತಕ್ಕಿಂತ ಕಡಿಮೆ ಶಿಷ್ಯವೇತನ ಜಮೆಯಾಗಿದೆ. ಹೀಗಾಗಿ ಉಳಿದ ಮೊತ್ತವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಘಟಕದವರು ನೀಡಿರುವ ಡಿ.ಸಿ.ಬಿ. ಪ್ರಕಾರ ವಿದ್ಯಾರ್ಥಿಗಳು ಶುಲ್ಕದ ಬಾಕಿ ಮೊತ್ತ ಪಾವತಿಸುವಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಘಟಕದವರು ತಿಳಿಸಿರುತ್ತಾರೆ.
ಹೀಗಾಗಿ ಸೆಪ್ಟೆಂಬರ್ 23ರೊಳಗಾಗಿ ಶುಲ್ಕ ಮರುಪಾವತಿ ಮಾಡಿದ ಚಲನ ಪ್ರತಿ ನೀಡಬೇಕು ಎಂದು ತಿಳಿಸಲಾಗಿತ್ತು. ರಾಣಿ ಚನ್ನಮ್ಮ ವಿವಿ ಹೊರಡಿಸಿದ ಈ ಸುತ್ತೋಲೆ ವಿರೋಧಿಸಿ ವಿದ್ಯಾರ್ಥಿಗಳು ಕಳೆದ ಎರಡು ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪರೀಕ್ಷೆಗಳು ಸಮೀಪಿಸುವಾಗಲೇ ರಾಣಿ ಚನ್ನಮ್ಮ ವಿವಿ ಈ ರೀತಿ ಸುತ್ತೋಲೆ ಹೊರಡಿಸುತ್ತಿದ್ದಾರೆ ಎಂದು ಗರಂ ಆದ್ರು. ಅಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳು ನಿನ್ನೆ ಬೆಂಗಳೂರಿಗೆ ತೆರಳಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಭೇಟಿಯಾಗಿ ಮನವಿ ಮಾಡಿ ಬಂದಿದ್ದಾಗಿಯೂ ತಿಳಿಸಿದರು.
ರಾಣಿ ಚನ್ನಮ್ಮ ವಿವಿ ದುರಾಡಳಿತದಿಂದ ಬೇಸತ್ತಿದ್ದೇವೆ ಎಂದ ವಿದ್ಯಾರ್ಥಿಗಳು
ಇನ್ನು ಪ್ರತಿಭಟನಾನಿರತ ವಿದ್ಯಾರ್ಥಿನಿ ವಿದ್ಯಾ ಕಾಂಬಳೆ ಮಾತನಾಡಿ, 'ನಮಗೆ ನೀಡುವ ಶಿಷ್ಯವೇತನದಲ್ಲಿಯೇ ನಮ್ಮ ಶಿಕ್ಷಣ ಮುಗಿಯುತ್ತದೆ ಎಂದು ನಾವು ರಾಣಿ ಚನ್ನಮ್ಮ ವಿವಿಗೆ ಪ್ರವೇಶಾತಿ ಪಡೆದಿದ್ದೆವು. ನಾನು ಮೊದಲ ವರ್ಷ 4030 ರೂ. ಪಾವತಿಸಿದ್ದರೆ, ಎರಡನೇ ವರ್ಷ 3 ಸಾವಿರ ರೂ. ಕಟ್ಟಿದ್ದೇನೆ. ಎಕ್ಸಿಟ್ ಫೀ ಎಂದು ಹತ್ತು ಸಾವಿರ, ಇಪ್ಪತ್ತು ಸಾವಿರ ಶುಲ್ಕ ವಿಧಿಸಿದರೇ ಹೇಗೆ? ಸೆ.27ರಂದು ಪರೀಕ್ಷೆ ಇದೆ, ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ರಾಣಿ ಚನ್ನಮ್ಮ ವಿವಿ ಪ್ರತಿ ವಿದ್ಯಾರ್ಥಿಯ ಬಗ್ಗೆ ಕಾಳಜಿ ವಹಿಸಬೇಕು. ಆಡಳಿತ ಮಂಡಳಿ ದುರಾಡಳಿತಕ್ಕೆ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಕೇವಲ ಪ್ರತಿಭಟನೆ ಮಾಡುವುದೇ ಕೆಲಸ ಆಗಿದೆ. ನಮಗೆ ಆಶ್ವಾಸನೆ ನೀಡುವುದು ಬೇಡ ಸ್ಥಳದಲ್ಲೇ ಪರಿಹಾರ ಸಿಗಬೇಕು' ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದತ್ತ ಬೊಟ್ಟು ಮಾಡಿದ ಕುಲಸಚಿವ ಎಂ.ಹನುಮಂತಪ್ಪ..!
ಇನ್ನು ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಶುಲ್ಕ ಪಾವತಿ ಗೊಂದಲ ಬಗ್ಗೆ ಪ್ರತಿಕ್ರಿಯಿಸಿದ ರಾಣಿ ಚನ್ನಮ್ಮ ವಿವಿ ಕುಲಸಚಿವ ಎಂ.ಹನುಮಂತಪ್ಪ, 'ಎಸ್ ಸಿ ಎಸ್‌ಟಿ ಮಕ್ಕಳು ಫೀಸ್ ಕಟ್ಟಕ್ಕೆ ಆಗಲ್ಲ ಸಮಾಜ ಕಲ್ಯಾಣ ಇಲಾಖೆಯಿಂದ ತರಿಸಿಕೊಳ್ಳಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದರು. ಹೀಗಾಗಿ ನಾನು ಬೆಂಗಳೂರಿಗೆ ಹೋಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದೆ. ಇಲ್ಲಿಯೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಬಂದು ಚರ್ಚೆ ನಡೆಸಿದ್ದೇನೆ. ಮಕ್ಕಳ ಹತ್ತಿರ ಫೀಸ್ ಕಲೆಕ್ಟ್ ಮಾಡಬೇಡಿ ಕೇಂದ್ರ ಕಚೇರಿಗೆ ಪತ್ರ ಬರೆದು ತರಿಸಿಕೊಳ್ಳಿ ಅಂತಾ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದಾರೆ.
ಹೀಗಾಗಿ ನಾವು ವಿದ್ಯಾರ್ಥಿಗಳ ಬಳಿ ಯಾವುದೇ ಫೀಸ್ ಕಲೆಕ್ಟ್ ಮಾಡುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ಕೇಂದ್ರ ಕಚೇರಿಗೆ ಪತ್ರ ಬರೆದು ತರಿಸಿಕೊಳ್ಳುತ್ತೇವೆ. NET ಪರೀಕ್ಷೆ ಇರುವುದರಿಂದ ಪರೀಕ್ಷೆ ಮುಂದೂಡಿಕೆಗೆ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಅದನ್ನೂ ಕುಲಪತಿಗಳ ಜೊತೆ ಚರ್ಚಿಸಿ ಪರೀಕ್ಷೆ ಮುಂದೂಡಿಕೆಗೆ ಮನವಿ ಮಾಡಿದ್ದೇವೆ. ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳ ಶಿಷ್ಯವೇತನ ಕಡಿಮೆ ಜಮಾ ಆಗಿತ್ತು. ಎಸ್‌ಸಿ ಎಸ್ ಟಿ ವಿದ್ಯಾರ್ಥಿಗಳಿರಲಿ ಬೇರೆ ವಿದ್ಯಾರ್ಥಿಗಳು ಇರಲಿ ಫೀಸ್ ಸ್ಟ್ರಕ್ಚರ್ ಇರುತ್ತೆ. ಕೆಲವನ್ನು ಪರಿಗಣನೆಗೆ ತಗೆದುಕೊಂಡು ಇನ್ನೂ ಕೆಲವನ್ನು ಪರಿಗಣನೆಗೆ ತಗೆದುಕೊಂಡಿಲ್ಲ. ಇದರಲ್ಲಿ ಕೆಲವು ಸರ್ಕಾರ ಕಟ್ಟಬೇಕಾಗುತ್ತೆ, ಕೆಲವು ವಿದ್ಯಾರ್ಥಿಗಳು ಕಟ್ಟಬೇಕಾಗುತ್ತೆ. ವಿದ್ಯಾರ್ಥಿಗಳು ತಮಗೆ ಶುಲ್ಕ ಪಾವತಿ ಮಾಡಲಾಗಲ್ಲ ಎಂದು ಹೇಳಿದಾಗ ಸರ್ಕಾರದವರು ನಮಗೆ ಕಳಿಸಿ ನಾವೇ ಭರಿಸುತ್ತೇವೆ ಎಂದಿದ್ದಾರೆ.
ಕೊರೋನಾ ಕಡಿಮೆಯಾಗುತ್ತಿದ್ದಂತೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಕುಸಿತ..!
ಸರ್ಕಾರದಿಂದ ಬಂದ ಸುತ್ತೋಲೆಯಂತೆ ನಾವು ಸುತ್ತೋಲೆ ಹೊರಡಿಸಿದ್ದೆವು. ಮತ್ತೆ ನಿನ್ನೆ ಸರ್ಕಾರ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು ಅದರ ಪ್ರಕಾರ ನಾವು ಫಾಲೋ ಮಾಡ್ತೀವಿ. ಸರ್ಕಾರದಿಂದ ಕಾಲ ಕಾಲಕ್ಕೆ ಬರುವ ಸುತ್ತೋಲೆಯಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಶಿಷ್ಯವೇತನ ಕಡಿಮೆ ಪಾವತಿ ಏಕೆ ಆಗಿದೆ ಎಂಬುದು ನಮಗೆ ಏನು ಗೊತ್ತು. 18-07-2022ರಂದು ಬಂದಿದ್ದ ಸರ್ಕಾರದ ಸುತ್ತೋಲೆ ಪ್ರಕಾರ ನಾವು ಸುತ್ತೋಲೆ ಹೊರಡಿಸಿದ್ದೆವು. ಈಗ ಸರ್ಕಾರದವರೇ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಮೊದಲು ಫೀಸ್ ಕೊಡಲ್ಲ ಅಂದಿದ್ರು, ಈಗ ಕೊಡ್ತೀವಿ ಅಂತಾ ಹೇಳಿದ್ದಾರೆ. ಸರ್ಕಾರ ಹೊರಡಿಸಿದ ಸುತ್ತೋಲೆಯಂತ್ರೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಮರುಪಾವತಿಗೆ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.
18 ಗಂಟೆ ತರಗತಿಯೊಳಗೆ 1ನೇ ತರಗತಿ ಬಾಲಕಿ ಲಾಕ್, ಕಂಗಾಲದ ಪೋಷಕರಿಗೆ ಮರುದಿನ ಸರ್ಪ್ರೈಸ್!
ಸದಾ ಒಂದಿಲ್ಲೊಂದು ಒಂದು ವಿವಾದದಿಂದ ಸದಾ ಸುದ್ದಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಾರ್ಯವೈಖರಿಗೆ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಶಿಷ್ಯವೇತನ ಕಡಿಮೆ ಜಮೆ ಆಗಿದೆ ಎಂದು ವಿದ್ಯಾರ್ಥಿಗಳ ಬಳಿ ಶುಲ್ಕ ಪಾವತಿಗೆ ಮುಂದಾಗಿದ್ದರ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಸದ್ಯದ ಮಟ್ಟಿಗೆ ಯಶಸ್ಸು ಸಿಕ್ಕಿದೆ. ಪರೀಕ್ಷೆ ಸಮೀಪಿಸುವ ವೇಳೆ ಈ ರೀತಿ ಗೊಂದಲಗಳ ಸೃಷ್ಟಿಗೆ ಅವಕಾಶ ಮಾಡದೇ ವಿದ್ಯಾರ್ಥಿಗಳ ಹಿತದೃಷ್ಟಿಯತ್ತ ವಿವಿ ಆಡಳಿತ ಮಂಡಳಿ ಗಮನಹರಿಸಲಿ ಎಂಬುದು ವಿದ್ಯಾರ್ಥಿಗಳ ಹಕ್ಕೊತ್ತಾಯ.