*  ತರಗತಿಯಲ್ಲಿ ಫೋಟೋ ಹಾಕಿದ ವಿದ್ಯಾರ್ಥಿಗಳು*  ಪ್ರಿನ್ಸಿಪಾಲ್‌ ಗಮನಕ್ಕೆ ಬಂದ ನಂತರ ಫೋಟೋ ತೆರವು*  ಜಾಲತಾಣದಲ್ಲಿ ವೈರಲ್‌

ಮಂಗಳೂರು(ಜೂ.09): ನಗರದಲ್ಲಿರುವ ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್‌ ವಿವಾದ ಬಗೆಹರಿಯುವ ಮೊದಲೇ ಇನ್ನೊಂದು ವಿವಾದ ಶುರುವಾಗಿದೆ. ಕಾಲೇಜಿನ ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ಸಾವರ್ಕರ್‌ ಫೋಟೊ ಹಾಕಿದ್ದು, ಬಳಿಕ ತೆರವುಗೊಳಿಸಲಾಗಿದೆ. ಕಾಲೇಜಿನ ಕಾಮರ್ಸ್‌ ಬ್ಲಾಕ್‌ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ನಡೆದದ್ದೇನು?: 

ಸೋಮವಾರ ಸಂಜೆ ವಿದ್ಯಾರ್ಥಿಗಳಿಬ್ಬರು ಭಾರತಮಾತೆ ಮತ್ತು ಸಾವರ್ಕರ್‌ ಫೋಟೊವನ್ನು ಮುಚ್ಚಿದ ಕವರ್‌ನೊಳಗೆ ತಂದು ಅದನ್ನು ತರಗತಿಯ ಕರಿಹಲಗೆಯ ಮೇಲೆ ಹಾಕಿದ್ದರು. ಇದನ್ನು ಇತರ ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದಿದ್ದರು. ಮಂಗಳವಾರ ಬೆಳಗ್ಗೆ ಪ್ರಾಂಶುಪಾಲರು ಆಗಮಿಸಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ, ಅನಧಿಕೃತವಾಗಿ ಹಾಕಿದ್ದ ಫೋಟೊಗಳನ್ನು ತೆರವುಗೊಳಿಸಿದ್ದಾರೆ. ಬಳಿಕ ಫೋಟೋ ಹಾಕಿದ ವಿದ್ಯಾರ್ಥಿಗಳನ್ನು ಕರೆಸಿ ಎಚ್ಚರಿಕೆ ನೀಡಿ ತಪ್ಪೊಪ್ಪಿಗೆಯನ್ನು ಪಡೆದಿದ್ದಾರೆ.

ಕರ್ನಾಟಕದಲ್ಲಿ ಇಂದಿನಿಂದ ಪಿಯು ಕಾಲೇಜು ಶುರು: ಹಿಜಾಬ್‌ ನಿಷೇಧ

ಜಾಲತಾಣದಲ್ಲಿ ವೈರಲ್‌: 

ಸಾವರ್ಕರ್‌ ಫೋಟೊ ಹಾಕಿದ ಇಡೀ ಘಟನೆಯನ್ನು ವಿದ್ಯಾರ್ಥಿಗಳೇ ವಿಡಿಯೊ ಚಿತ್ರೀಕರಣ ಮಾಡಿ ಅದನ್ನು ಎಡಿಟ್‌ ಕೂಡ ಮಾಡಿ ಜಾಲತಾಣದಲ್ಲಿ ಪಸರಿಸಿದ್ದರು. ಮಾತ್ರವಲ್ಲದೆ, ಕಾಲೇಜಿನ ಅನೇಕ ವಿದ್ಯಾರ್ಥಿಗಳು ಈ ವಿಡಿಯೊವನ್ನು ಶೇರ್‌ ಮಾಡಿಕೊಂಡಿದ್ದರು, ವಾಟ್ಸಪ್‌ ಸ್ಟೇಟಸ್‌ನಲ್ಲೂ ಹಾಕಿಕೊಂಡಿದ್ದರು. ಹೀಗಾಗಿ ಈ ಘಟನೆ ಹೊರಗೆ ಬಂದಿದ್ದು, ಬಳಿಕ ವೈರಲ್‌ ಆಗಿತ್ತು. ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್‌ ಹೋರಾಟಕ್ಕೆ ಪ್ರತಿಯಾಗಿ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಸಾವರ್ಕರ್‌ ಫೋಟೊ ಹಾಕಿದ್ದಾರೆ ಎನ್ನಲಾಗಿದೆ.