ಎಂಜಿನಿಯರಿಂಗ್ ಕಾಲೇಜಲ್ಲಿ ಬಿಎಸ್ಸಿ ವರದಿ ನೀಡಿ: ಡಿಸಿಎಂ ಅಶ್ವತ್ಥ ನಾರಾಯಣ
* ಅಧಿಕಾರಿಗಳು, ತಜ್ಞರೊಂದಿಗೆ ಸಚಿವರ ಮಹತ್ವದ ಸಮಾಲೋಚನೆ
* ವಿಜ್ಞಾನ ಆಧಾರಿತ ಕೋರ್ಸ್ ಆರಂಭಿಸುವುದು ಈ ವರ್ಷವೇ ಇದು ಸಾಧ್ಯವೇ?
* 220 ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 100 ಕಾಲೇಜುಗಳಲ್ಲಿ ಅತ್ಯುತ್ತಮ ದರ್ಜೆಯ ಮೂಲಸೌಕರ್ಯಗಳಿವೆ
ಬೆಂಗಳೂರು(ಜೂ.11): ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸ್‌ಗಳ ಬೋಧನೆ ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸಿ ಜುಲೈ ಅಂತ್ಯದೊಳಗೆ ವರದಿ ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ತಜ್ಞರಿಗೆ ಸೂಚಿಸಿದ್ದಾರೆ.
ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಬಂಧ ಗುರುವಾರ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದ ಡಾ.ಅಶ್ವತ್ಥ ನಾರಾಯಣ ಅವರು , ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಕೋರ್ಸುಗಳ ಬೋಧನೆ ಆರಂಭಿಸುವ ಕುರಿತ ಸಾಧಕ ಬಾಧಕಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದರು. ರಾಜ್ಯದಲ್ಲಿ ಇರುವ ಒಟ್ಟು 220 ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 100 ಕಾಲೇಜುಗಳಲ್ಲಿ ಅತ್ಯುತ್ತಮ ದರ್ಜೆಯ ಮೂಲಸೌಕರ್ಯಗಳಿವೆ. ಬಿಎಸ್ಸಿ ಮಾದರಿಯ 4 ವರ್ಷಗಳ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಈ ಕಾಲೇಜುಗಳಲ್ಲಿ ಬೋಧಿಸುವ ಸಾಧ್ಯತೆ ಬಗ್ಗೆ ಜುಲೈ ಅಂತ್ಯದೊಳಗೆ ಕಾರ್ಯಸೂಚಿ ರೂಪಿಸಿ ವರದಿ ನೀಡುವಂತೆ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ಅವರ ನೇತೃತ್ವದ ಸಮಿತಿಗೆ ಸೂಚಿಸಿದರು.
ಆ್ಯಪ್ಸ್ ಸಹಾಯದಿಂದ ಹೋಮ್‌ವರ್ಕ್, ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಮಾಹಿತಿ!
ವಿಜ್ಞಾನ ಆಧಾರಿತ ಕೋರ್ಸ್ ಆರಂಭಿಸುವುದು ಈ ವರ್ಷವೇ ಇದು ಸಾಧ್ಯವೇ? ಏನಾದರೂ ಕಾನೂನು ತಡಕು ಬರಬಹುದೆ ಎಂದು ಪರಿಶೀಲಿಸಿ. ಕಾನೂನು ತೊಡಕಿದ್ದರೆ ಸುಗ್ರೀವಾಜ್ಞೆ ಜಾರಿಗೆ ತರಬೇಕಾಗುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನವನ್ನು ಯಾವ ರೀತಿ ಬೋಧಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಿರಿ. ಅದೇ ರೀತಿಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಕಲಿಕೆ ಹಾಲಿ ಇರುವ ಮೂಲ ಸೌಕರ್ಯದಿಂದಲೇ ಈ ಸುಧಾರಣೆಯನ್ನು ಜಾರಿಗೆ ತರಲು ಸಾಧ್ಯವೇ ಎಂಬುದರ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ, ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ ಭಾಗಿಯಾಗಿದ್ದರು.