ಬೆಂಗಳೂರು(ಡಿ.19): ರಾಜ್ಯದಲ್ಲಿ ಶಾಲೆ ಮತ್ತು ಪಿಯು ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿದಂತೆ ಶನಿವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಜ.1ರಿಂದ ವಿದ್ಯಾಗಮದ ಜೊತೆಗೆ 10 ಮತ್ತು 12ನೇ ತರಗತಿಗಳಿಗೆ ಶಾಲೆಯಲ್ಲೇ ಪಾಠ ಆರಂಭಿಸಲು ಈ ಸಭೆಯಲ್ಲಿ ಅನುಮತಿ ದೊರೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಅಲ್ಲದೆ, ಶಾಲೆ ಆರಂಭದ ಬಗ್ಗೆ ಸಭೆಯ ನಂತರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಥವಾ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯುವ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌, ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಚಿವ ಸುರೇಶ್‌ ಕುಮಾರ್‌ ಅವರು ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ನೀಡಿರುವ ವರದಿಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಸಮಿತಿಯ ಶಿಫಾರಸಿನಂತೆ ಜ.1ರಿಂದ ಮೊದಲ ಹಂತದಲ್ಲಿ 10 ಮತ್ತು 12ನೇ ತರಗತಿಗಳಿಗೆ ವಿದ್ಯಾರ್ಥಿಗಳ ಭೌತಿಕ ಹಾಜರಾತಿಗೆ ಅನುಮತಿ ಕೋರಲಿದ್ದಾರೆ.

ಜೊತೆಗೆ ಯಾವೆಲ್ಲಾ ಸುರಕ್ಷಾ ಕ್ರಮಗಳೊಂದಿಗೆ ವಿದ್ಯಾಗಮ ಮತ್ತು ಶಾಲೆ, ಕಾಲೇಜು ಆರಂಭಿಸಬೇಕೆಂದು ಸಮಿತಿ ನೀಡಿರುವ ಮಾರ್ಗಸೂಚಿ (ಎಸ್‌ಒಪಿ) ಬಗ್ಗೆಯೂ ಮುಖ್ಯಮಂತ್ರಿ ಅವರಿಗೆ ವಿವರಣೆ ನೀಡಲಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ಡಿಸೆಂಬರ್‌ ಕೊನೆಯ ವಾರದ ದಿನಗಳ ಕೋವಿಡ್‌ ಪ್ರಕರಣಗಳನ್ನು ನೋಡಿಕೊಂಡು ಶಾಲೆಗಳನ್ನು ಆರಂಭಿಸಬಹುದು ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಶಿಕ್ಷಣ ಇಲಾಖೆ ಗುರುವಾರ ನಡೆದ ಸಭೆಯಲ್ಲಿ ಸಮಿತಿಯ ಶಿಫಾರಸಿನಂತೆ ಜ.1ರಿಂದ 10 ಮತ್ತು 12ನೇ ತರಗತಿ ಹಾಗೂ ಜ.15ರಿಂದ 9 ಮತ್ತು 11ನೇ ತರಗತಿ ಹಾಗೂ ನಂತರದ ದಿನಗಳಲ್ಲಿ ಉಳಿದ ತರಗತಿಗಳ ಮಕ್ಕಳಿಗೆ ತರಗತಿ ಬೋಧನೆ ಆರಂಭಿಸಲು ತೀರ್ಮಾನಿಸಿದೆ. ಮೂಲಗಳ ಪ್ರಕಾರ ಈ ತೀರ್ಮಾನಕ್ಕೆ ಶನಿವಾರದ ಸಭೆಯಲ್ಲಿ ಮುಖ್ಯಮಂತ್ರಿಗಳಿಂದ ಕೂಡ ಅನುಮತಿ ದೊರೆಯುವುದು ಬಹುತೇಕ ಖಚಿತವಾಗಿದೆ.

ಸಾಧ್ಯಾಸಾಧ್ಯತೆಗಳು

1. ಸುರಕ್ಷತಾ ಕ್ರಮಗಳೊಂದಿಗೆ ಶಾಲೆ ಆರಂಭಕ್ಕೆ ಕೋವಿಡ್‌ ತಾಂತ್ರಿಕ ಸಮಿತಿ ಗ್ರೀನ್‌ಸಿಗ್ನಲ್‌

2. ಈ ಹಿನ್ನೆಲೆಯಲ್ಲಿ 2021ನೇ ವರ್ಷಾರಂಭದಿಂದ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಸಜ್ಜು

3. ವಿದ್ಯಾಗಮದ ಜೊತೆಗೇ ಶಾಲೆ, ಪಿಯು ಕಾಲೇಜು ಆರಂಭಿಸಲು ಸಿಎಂ ಜತೆ ಇಂದು ಸಭೆ

4. ಜ.1ರಿಂದ 10, 12ನೇ ಕ್ಲಾಸ್‌; ಜ.15ರಿಂದ 9, 11ನೇ ಕ್ಲಾಸ್‌; ನಂತರ ಇತರೆ ತರಗತಿ ಶುರು

6. ಪ್ರಸ್ತಾವನೆಗೆ ಸಿಎಂ ಸಮ್ಮತಿ ಸಾಧ್ಯತೆ. ಸಭೆ ಬಳಿಕ ಶಿಕ್ಷಣ ಸಚಿವರಿಂದ ಅಧಿಕೃತ ಘೋಷಣೆ ನಿರೀಕ್ಷೆ