ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ರೆ ಇನ್ನು 10 ವರ್ಷ ಜೈಲು, 5 ಲಕ್ಷ ರೂಪಾಯಿ ದಂಡ!
ಸೋಮವಾರ ಮಂಡಿಸಲಾಗಿದ್ದ ಪಬ್ಲಿಕ್ ಎಕ್ಸಾಮಿನೇಷನ್ಸ್ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಮಸೂದೆ, 2024 ಅನ್ನು ಮಂಗಳವಾರ ಅಂಗೀಕರಿಸಲಾಯಿತು. ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಈ ಮಸೂದೆಗೆ ಅನುಮೋದನೆ ನೀಡಿತ್ತು. ಈ ಕಾನೂನಿನ ಅಡಿಯಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ಮಾಡುವಂಥ ಸಂಘಟಿತ ಅಪರಾಧಗಳಲ್ಲಿ ತೊಡಗಿರುವ ಮಾಫಿಯಾಗಳ ವಿರುದ್ಧ ದೊಡ್ಡ ಮಟ್ಟದ ಅವಕಾಶ ಕಲ್ಪಿಸಲಾಗಿದೆ.
ನವದೆಹಲಿ (ಫೆ.6): ಪ್ರಧಾನಿ ಮೋದಿ ದೇಶದ ಯುವಜನತೆಗೆ ದೊಡ್ಡ ಗಿಫ್ಟ್ ನೀಡಿದ್ದಾರೆ. ಅದರಂತೆ ಕೇಂದ್ರ ಸರ್ಕಾರ ಪ್ರಶ್ನೆಪತ್ರಿಕೆ ಸೋರಿಕೆಯಂಥ ಅಪರಾಧ ತಡೆಗಟ್ಟುವ ಸಲುವಾಗಿ ಐತಿಹಾಸಿಕ ಮಸೂದೆಯನ್ನು ಪಾಸ್ ಮಾಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ಕುರಿತಾದ ಮಾಫಿಯಾದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಹೊಸ ಮಸೂದೆಯ ಪ್ರಕಾರ 10 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂಪಾಯಿವರೆಗೆ ದಂಡವನ್ನು ವಿಧಿಸುವ ಅವಕಾಶವಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್, ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೇ ರಿಕ್ರೂಟ್‌ಮೆಂಟ್ ಬೋರ್ಡ್, ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗಳು ನಡೆಸುವ ನೇಮಕಾತಿ ಪರೀಕ್ಷೆಗಳನ್ನು ಬಿಲ್ ಒಳಗೊಂಡಿದೆ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಕಟ್ಟುನಿಟ್ಟಾಗಿ ಎದುರಿಸಲು, ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಮಸೂದೆ, 2024 ಅನ್ನು ಮಂಗಳವಾರ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಇದೀಗ ಪರೀಕ್ಷೆ ಪ್ರಕ್ರಿಯೆಗೆ ಧಕ್ಕೆ ತಂದ ಅಪರಾಧಕ್ಕಾಗಿ ಹೊಸ ಕಾನೂನು ಮಾಡಲಾಗುತ್ತದೆ. ಅಕ್ರಮಗಳ ಸಂದರ್ಭದಲ್ಲಿ ಗರಿಷ್ಠ 1 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 3 ರಿಂದ 5 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
ವಿದ್ಯಾರ್ಥಿಗಳು ಟಾರ್ಗೆಟ್ ಅಲ್ಲ: ಈ ಮಸೂದೆಯ ಮೂಲಕ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗುವುದಿಲ್ಲ. ಪರೀಕ್ಷಾ ಅಕ್ರಮಗಳ ಸಂಘಟಿತ ಅಪರಾಧ, ಮಾಫಿಯಾದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಈ ಕಾನೂನು ಜಾರಿಯಾಗಲಿದೆ. ಈ ಮಸೂದೆಯು ಉನ್ನತ ಮಟ್ಟದ ತಾಂತ್ರಿಕ ಸಮಿತಿಯನ್ನು ಪ್ರಸ್ತಾಪ ಮಾಡಿದೆ. ಇದು ಕಂಪ್ಯೂಟರ್‌ಗಳ ಮೂಲಕ ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷಿತಗೊಳಿಸಲು ಶಿಫಾರಸುಗಳನ್ನು ಮಾಡಿದೆ. ಇದು ಇದು ಕೇಂದ್ರ ಕಾನೂನು ಆಗಿರಲಿದ್ದು, ಇದು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಪ್ರವೇಶಕ್ಕಾಗಿ ಜಂಟಿ ಪ್ರವೇಶ ಪರೀಕ್ಷೆಗಳು ಮತ್ತು ಪರೀಕ್ಷೆಗಳನ್ನು ಸಹ ಒಳಗೊಂಡಿದೆ.
ಪರೀಕ್ಷೆಯ ಪತ್ರಿಕೆ ಸೋರಿಕೆಯು ರಾಷ್ಟ್ರವ್ಯಾಪಿ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ರೀತಿಯ ಮೊದಲ ಕೇಂದ್ರ ಕಾನೂನನ್ನು ತರುವುದು ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಮನಗಂಡಿತ್ತು. ಗುಜರಾತ್, ಕರ್ನಾಟಕದಂಥ ಕೆಲವು ರಾಜ್ಯಗಳು ಈ ಸಮಸ್ಯೆಯನ್ನು ಎದುರಿಸಲು ತಮ್ಮದೇ ಆದ ಕಾನೂನುಗಳನ್ನು ತಂದಿವೆ. ಕಳೆದ ವರ್ಷ, ಪರೀಕ್ಷಾ ಪತ್ರಿಕೆಗಳ ಸೋರಿಕೆಯ ನಂತರ, ರಾಜಸ್ಥಾನದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ, ಹರಿಯಾಣದಲ್ಲಿ ಗ್ರೂಪ್-ಡಿ ಹುದ್ದೆಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ), ಗುಜರಾತ್‌ನಲ್ಲಿ ಜೂನಿಯರ್ ಕ್ಲರ್ಕ್‌ಗಳ ನೇಮಕಾತಿ ಪರೀಕ್ಷೆ ಮತ್ತು ಬಿಹಾರದಲ್ಲಿ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು.
ಪೇಪರ್ ಸೋರಿಕೆ ನಮ್ಮ ಕನಸು, ಭರವಸೆ, ವಯಸ್ಸು ಎಲ್ಲವನ್ನೂ ಮುಳುಗಿಸುವಂತಹ ಕಂದಕವಾಗಿದೆ ಎನ್ನುತ್ತಾರೆ ಕಳೆದ ಐದು ವರ್ಷಗಳಿಂದ ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ರಾಜಸ್ಥಾನದ ನಿವಾಸಿ ಧೀರಜ್ ವಿಷ್ಣೋಯ್ ಎಂಬ ಅಭ್ಯರ್ಥಿ. ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಯು ನಂಬಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳುತ್ತಾರೆ. ಪರೀಕ್ಷಾರ್ಥಿಗಳಾದ ನಾವು ನಮ್ಮ ವರ್ಷಗಳ ಶ್ರಮ, ತ್ಯಾಗ, ಪೋಷಕರ ಸಂಪಾದನೆ ಮತ್ತು ಶ್ರಮವನ್ನು ನಂಬಿ ಹಣ ಖರ್ಚು ಮಾಡುತ್ತೇವೆ, ಪರೀಕ್ಷೆಗೆ ತಯಾರಾಗಲು ಲಕ್ಷಗಟ್ಟಲೆ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರದಿಂದ ಕಟ್ಟುನಿಟ್ಟಿನ ಕಾನೂನುಗಳು ಬಹಳ ಅಗತ್ಯವಾಗಿದೆ ಎಂದಿದ್ದಾರೆ.