ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರೇ ಗಮನಿಸಿ!
ನಿಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರಾ..? ಖಾಸಗಿ ಶಾಲೆಯಲ್ಲಿಕಲಿಯುತ್ತಿರುವ ಮಕ್ಕಳ ಪೋಷಕರೇ ಗಮನಿಸಿ.. ಸರ್ಕಾರ ನೀಡಿದ ಆ ಸೂಚನೆ ಏನು..?
ಬೆಂಗಳೂರು (ಜ.28): ಖಾಸಗಿ ಶಾಲಾ ಶುಲ್ಕ ಕಡಿತ ಸಂಬಂಧ ಸಭೆ ನಡೆಸಿ ಎರಡು ವಾರ ಕಳೆಯುತ್ತಿದ್ದರೂ ಸೂಕ್ತ ಆದೇಶ ಮಾಡಲು ಸರ್ಕಾರ ವಿಳಂಬ ಮಾಡುತ್ತಿರುವುದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರುವ ಪೋಷಕ ವರ್ಗ ಆದೇಶ ಹೊರಡಿಸಲು ಜ.28ರ ಗಡುವು ನೀಡಿದೆ.
ಗಡುವಿನೊಳಗೆ ಆರ್ಥಿಕ ಸಂಕಷ್ಟದಲ್ಲಿರುವ ಸಮಸ್ತ ಪೋಷಕ ವರ್ಗಕ್ಕೆ ನೆರವಾಗಲು ನಮ್ಮ ಬೇಡಿಕೆಯಂತೆ ಶುಲ್ಕ ಕಡಿತಗೊಳಿಸಿ ಆದೇಶ ಮಾಡದೆ ಇದ್ದರೆ ಮತ್ತೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ ಎಚ್ಚರಿಕೆ ನೀಡಿದೆ.
ಹೈ ಕೋರ್ಟ್ ಮೆಟ್ಟಿಲೇರಿ 1 ಅಂಕ ಪಡೆದ ವಿದ್ಯಾರ್ಥಿನಿ : ಕ್ರಮಕ್ಕೆ ಸಚಿವರ ಸೂಚನೆ
ಶುಲ್ಕ ಕಡಿತ ಸಂಬಂಧ ಪೋಷಕ ಸಂಘಟನೆಗಳು ಮತ್ತು ಖಾಸಗಿ ಶಾಲಾ ಸಂಘಟನೆಗಳೊಂದಿಗೆ ಸಭೆ ನಡೆಸಿ ವಾರಗಳು ಕಳೆದರೂ ಸಮಸ್ಯೆ ಪರಿಹರಿಸಲು ಶಿಕ್ಷಣ ಇಲಾಖೆ ಮೀನಮೇಷ ಎಣಿಸುತ್ತಿದೆ. ಇದು, ಖಾಸಗಿ ಶಾಲೆಯವರಿಗೆ ಬಲವಂತವಾಗಿ ಪೋಷಕರಿಂದ ಪೂರ್ಣ ಶುಲ್ಕ ವಸೂಲಿ ಮಾಡಲು ಅನುವು ಮಾಡಿಕೊಡುವುದಾಗಿದೆ. ಸಂಪೂರ್ಣ ಶುಲ್ಕ ಪಡೆದ ಮೇಲೆ ಸರ್ಕಾರ ಆದೇಶ ಹೊರಡಿಸಿದರೆ ಪ್ರಯೋಜನವಾದರೂ ಏನು? ನಂತರ ಕಟ್ಟಿದ ಶುಲ್ಕ ಪಡೆಯಲು ಪೋಷಕರು ಪ್ರಯಾಸಪಡಬೇಕಾ? ಆಗ ಮತ್ತೊಂದ ಸಮಸ್ಯೆ ಶುರುವಾಗುತ್ತದೆ ಎಂದು ವೇದಿಕೆ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜ.28ರೊಳಗೆ ಸರ್ಕಾರ ಶುಲ್ಕ ಕಡಿತದ ಬಗ್ಗೆ ಆದೇಶ ಹೊರಡಿಸಬೇಕು. ನಿರ್ಲಕ್ಷ್ಯ ಮಾಡಿದರೆ ಮತ್ತೆ ಪ್ರತಿಭಟನೆ ನಡೆಸುವುದು ನಿಶ್ಚಿತ ಎಂದು ವೇದಿಕೆ ಹೇಳಿದೆ.
ತರಾತುರಿಯಲ್ಲಿ ಆಗದು, ಟೈಂ ಕೊಡಿ: ಸುರೇಶ್
ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿಪಡಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶುಲ್ಕ ಸಮಸ್ಯೆ ಬಗೆಹರಿಸುವುದು ಸುಲಭದ ಮಾತಲ್ಲ. ತರಾತುರಿಯಲ್ಲಿ ಶುಲ್ಕ ನಿಗದಿ ಮಾಡಲು ಆಗಲ್ಲ. ಸಾಕಷ್ಟುಸಮಸ್ಯೆಗಳಿವೆ. ಎಲ್ಲವನ್ನೂ ಅವಲೋಕಿಸಿ ನಿರ್ಧಾರಕ್ಕೆ ಬರಬೇಕಾಗಿದೆ. ಪೋಷಕರು ಸಮಯ ಹಾಗೂ ಸಹಕಾರ ಎರಡೂ ನೀಡಬೇಕು ಎಂದು ತಿಳಿಸಿದ್ದಾರೆ.
ನಗರದಲ್ಲಿ ಶಿಕ್ಷಕರ ಸಂಘಟನೆ ಜತೆಗೆ ನಡೆಸಿದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಷಕರು ಶುಲ್ಕ ವಿಚಾರವಾಗಿ ಆತಂಕಪಡುವ ಅಗತ್ಯವಿಲ್ಲ. ಶುಲ್ಕ ನಿಗದಿ ಕಾರ್ಯ ಪ್ರಗತಿಯಲ್ಲಿದೆ. ಅಲ್ಲಿಯವರೆಗೂ ಯಾವುದೇ ಶಾಲೆಗಳು ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ. ಒತ್ತಡ ಹಾಕಿದಲ್ಲಿ ಪೋಷಕರು ದೂರು ನೀಡಬಹುದು. ತಕ್ಷಣವೇ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.