ಬೆಂಗಳೂರು (ಜ.26):  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹನಿಯಾ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬರಿಗೆ ಕಳೆದ ವರ್ಷದ ವಾರ್ಷಿಕ ಪರೀಕ್ಷೆಯ ಮರು ಎಣಿಕೆಯಲ್ಲಿ ಕಡಿಮೆ ಅಂಕ ನೀಡಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. 

2020ರ ಪಿಯು ವಾರ್ಷಿಕ ಪರೀಕ್ಷೆಯ ಲೆಕ್ಕಶಾಸ್ತ್ರ ವಿಷಯದಲ್ಲಿ 99 ಅಂಕ ಬಂದಿತ್ತು. ಈ ಅಂಕಕ್ಕೆ ತೃಪ್ತರಾಗದ ವಿದ್ಯಾರ್ಥಿನಿಯು ಉತ್ತರ ಪತ್ರಿಕೆಯ ಛಾಯಾ ಪ್ರತಿ ನೋಡಿ ತನಗೆ 100 ಅಂಕ ಬರಬೇಕಿದೆ. 

ಹೈಕೋರ್ಟ್‌ ಮೆಟ್ಟಿಲೇರಿ 1 ಅಂಕ ಗಳಿಸಿದ ವಿದ್ಯಾರ್ಥಿನಿ

ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿ ತನಗೆ ಒಂದು ಅಂಕ ಕಡಿಮೆ ಬಂದಿದೆ ಎಂದು ಕೋರಿ ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಮರು ಎಣಿಕೆಯಲ್ಲಿ 88 ಅಂಕಗಳು ಬಂದಿದ್ದವು. ಈ ಕುರಿತು ವಿದ್ಯಾರ್ಥಿನಿಯು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಮರು ಎಣಿಕೆಗೆ ಆದೇಶಿಸಿದ್ದು, ಆ ನಂತರ 100 ಅಂಕಗಳು ಬಂದಿದ್ದವು.

ಪ್ರಕರಣ ಸಂಬಂಧ ಮರು ಎಣಿಕೆಯಲ್ಲಿ ಲೋಪ ಎಸಗಿದ ಅಧಿಕಾರಿ, ಉಪನ್ಯಾಸಕರು ಮತ್ತು ಸಂಬಂಧಿಸಿದ ಸಿಬ್ಬಂದಿಯ ವಿರುದ್ಧ ಅಗತ್ಯ ಕ್ರಮಕೈಗೊಂಡು ಎರಡು ದಿನದೊಳಗೆ ವರದಿ ಸಲ್ಲಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕರಿಗೆ ಸಚಿವರು ಸೂಚಿಸಿದ್ದಾರೆ.

- ಮರು ಎಣಿಕೆಯಲ್ಲೂ ಎಡವಟ್ಟು ಮಾಡಿದ ಸಿಬ್ಬಂದಿ

- ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವ ಸುರೇಶ್‌ ಸೂಚನೆ