Asianet Suvarna News Asianet Suvarna News

ಹಾವೇರಿ ಮೆಡಿಕಲ್‌ ಕಾಲೇಜು ಕಟ್ಟಡದಲ್ಲೇ ತರಗತಿ ಆರಂಭಕ್ಕೆ ಸಿದ್ಧತೆ

ನಿರಂತರ ಮಳೆಯಿಂದಾಗಿ ಹಾವೇರಿ ಮೆಡಿಕಲ್‌ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ. 

Preparation for commencement of classes in Haveri Medical College building gvd
Author
First Published Oct 31, 2022, 11:01 PM IST

ನಾರಾಯಣ ಹೆಗಡೆ

ಹಾವೇರಿ (ಅ.31): ನಿರಂತರ ಮಳೆಯಿಂದಾಗಿ ಹಾವೇರಿ ಮೆಡಿಕಲ್‌ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಆದರೆ, ಆಡಳಿತಾತ್ಮಕ ಕಟ್ಟಡ ಮತ್ತು ತರಗತಿ ನಡೆಸಲು ಅಗತ್ಯವಿರುವ ಶೈಕ್ಷಣಿಕ ಕಟ್ಟಡ ತ್ವರಿತವಾಗಿ ಪೂರ್ಣಗೊಳಿಸಿ ಹೊಸ ಕಟ್ಟಡದಲ್ಲೇ ವೈದ್ಯಕೀಯ ತರಗತಿ ಆರಂಭಿಸಲು ಸಿದ್ಧತೆ ನಡೆದಿದೆ. ಈ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಹೈದರಾಬಾದ್‌ ಮೂಲದ ಗುತ್ತಿಗೆದಾರರಿಗೆ ವಹಿಸಿ ನವೆಂಬರ್‌ಗೆ ಎರಡು ವರ್ಷಗಳು ಆಗಲಿವೆ. ಒಪ್ಪಂದದ ಪ್ರಕಾರ 24 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ, ನಿರಂತರವಾಗಿ ಬೀಳುತ್ತಿದ್ದ ಮಳೆಯಿಂದಾಗಿ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ಮುಗಿದಿಲ್ಲ. 

ಈಗಾಗಲೇ ಆಲ್‌ ಇಂಡಿಯಾ ಖೋಟಾದಡಿ ಹಾವೇರಿ ಮೆಡಿಕಲ್‌ ಕಾಲೇಜಿಗೆ ಅನೇಕ ವಿದ್ಯಾರ್ಥಿಗಳಿಗೆ ಸೀಟ್‌ ಅಲಾಟ್‌ಮೆಂಟ್‌ ಆಗಿದೆ. ಇನ್ನು ರಾಜ್ಯ ಮಟ್ಟದ ಕೌನ್ಸೆಲಿಂಗ್‌ ಪ್ರಕ್ರಿಯೆ ಆಗಬೇಕಿದೆ. ಅದಾದ ಬಳಿಕ ತರಗತಿ ಆರಂಭವಾಗಬೇಕಿದೆ. ಅದಕ್ಕಾಗಿ ಸದ್ಯಕ್ಕೆ ತರಗತಿ ನಡೆಸಲು ಅಗತ್ಯ ವ್ಯವಸ್ಥೆಯನ್ನು ಹೊಸ ಕ್ಯಾಂಪಸ್‌ನಲ್ಲೇ ಮಾಡಲು ನಿರ್ಧರಿಸಲಾಗಿದೆ. ಡಿಸೆಂಬರ್‌ ಒಳಗಾಗಿ ಸಂಪೂರ್ಣ ಕಟ್ಟಡ ಕಾಮಗಾರಿ ಪೂರ್ತಿಗೊಳ್ಳುವ ಸಾಧ್ಯತೆಯಿಲ್ಲ. ಆದರೆ, ಶೀಘ್ರದಲ್ಲೇ ತರಗತಿ ಆರಂಭವಾಗಲಿರುವುದರಿಂದ ಶೈಕ್ಷಣಿಕ ವಿಭಾಗವನ್ನು ಪೂರ್ತಿಗೊಳಿಸಲು ಆದ್ಯತೆ ನೀಡಲಾಗಿದೆ. ಜತೆಗೆ, ಆಡಳಿತಾತ್ಮಕ ಭವನವನ್ನೂ ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ.

ಸಹಕಾರ ಸಂಘಗಳು ರೈತರಿಗೆ ಹತ್ತಿರವಾಗುವ ಕಾರ್ಯ ಮಾಡಬೇಕು: ಸಚಿವ ಬಿ.ಸಿ.ಪಾಟೀಲ್‌

22 ವಿದ್ಯಾರ್ಥಿಗಳಿಗೆ ಸೀಟ್‌: ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಇಲ್ಲಿಯ ಮೆಡಿಕಲ್‌ ಕಾಲೇಜಿನಲ್ಲಿ ತರಗತಿ ಆರಂಭಕ್ಕೆ ಭಾರತೀಯ ಮೆಡಿಕಲ್‌ ಕೌನ್ಸಿಲ್‌ ಅನುಮತಿ ನೀಡಿದೆ. ಮೆಡಿಕಲ್‌ ಕಾಲೇಜು ಪ್ರವೇಶಕ್ಕೆ ನೀಟ್‌ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಆಲ್‌ ಇಂಡಿಯಾ ಖೋಟಾದಡಿ ಶೇ. 15ರಷ್ಟುಹಾಗೂ ಕೆಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ರಾಜ್ಯದ ಖೋಟಾ ಶೇ. 85ರಷ್ಟುಸೀಟು ಭರ್ತಿ ಮಾಡಲಾಗುತ್ತದೆ. ಅದರಂತೆ ಈಗಾಗಲೇ ಆಲ್‌ ಇಂಡಿಯಾ ಖೋಟಾದಡಿ 22 ವಿದ್ಯಾರ್ಥಿಗಳಿಗೆ ಹಾವೇರಿ ಮೆಡಿಕಲ್‌ ಕಾಲೇಜಿಗೆ ಸೀಟ್‌ ಅಲಾಟ್‌ಮೆಂಟ್‌ ಆಗಿದೆ. ಒಟ್ಟು 150 ಮೆಡಿಕಲ್‌ ವಿದ್ಯಾರ್ಥಿಗಳಿಗೆ ಹಾವೇರಿ ಮೆಡಿಕಲ್‌ ಕಾಲೇಜಿನಲ್ಲಿ ಅವಕಾಶ ಲಭ್ಯವಾಗಲಿದೆ. ದೇವಗಿರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತರಗತಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದರೂ ಹೊಸ ಕಟ್ಟಡದಲ್ಲೇ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ. ದೇವಗಿರಿ ಎಂಜಿನಿಯರಿಂಗ್‌ ಕಾಲೇಜಿನ ಬಳಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.

ಊರಿಗೆ ತೆರಳಿದ ಕಾರ್ಮಿಕರು: ಸಮೀಪದ ದೇವಗಿರಿ ಯಲ್ಲಾಪುರದಲ್ಲಿ ಮೆಡಿಕಲ್‌ ಕಾಲೇಜು ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳ ತಗ್ಗು ಪ್ರದೇಶದಲ್ಲಿ ಇರುವುದರಿಂದ ಮಳೆ ನೀರು ಇಂಗುತ್ತಿಲ್ಲ. ನಿರಂತರವಾಗಿ ಮಳೆಯಾಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡು ಕಾರ್ಮಿಕರು ಕೆಲಸವಿಲ್ಲದೆ ಖಾಲಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಇಲ್ಲಿ ಕೆಲಸ ಮಾಡುತ್ತಿದ್ದ ಒಂದು ಸಾವಿರ ಕಾರ್ಮಿಕರಲ್ಲಿ ಎರಡು ನೂರಕ್ಕೂ ಹೆಚ್ಚು ಕಾರ್ಮಿಕರು ಊರಿಗೆ ತೆರಳಿದ್ದಾರೆ.

ಅಂತಿಮ ಹಂತದಲ್ಲಿ ನೇಮಕಾತಿ: ಮೆಡಿಕಲ್‌ ಕಾಲೇಜು ಆರಂಭಕ್ಕೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಹುದ್ದೆ ನೇಮಕ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಈಗಾಗಲೇ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆ ಮುಗಿದಿದೆ. 5 ಪ್ರೊಫೆಸರ್‌, 17 ಅಸೋಸಿಯೇಟ್‌ ಪ್ರೊಫೆಸರ್‌, 31 ಅಸಿಸ್ಟಂಟ್‌ ಪ್ರೊಫೆಸರ್‌, 14 ಸೀನಿಯರ್‌ ರೆಸಿಡೆಂಟ್‌ ಹಾಗೂ 12 ಟ್ಯೂಟರ್ಸ್‌ ಸೇರಿದಂತೆ 79 ಹುದ್ದೆ ನೇಮಕಾತಿಗೆ ಈಗಾಗಲೇ ಸಂದರ್ಶನ ಪೂರ್ಣಗೊಂಡಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಇದರಲ್ಲಿ 53 ಕಾಯಂ ಹುದ್ದೆಗಳಿಗೆ ಮತ್ತು 26 ಗುತ್ತಿಗೆ ಆಧಾರದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ತರಗತಿ ಆರಂಭವಾಗುವ ಮುನ್ನ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದೆ ಎಂದು ಮೆಡಿಕಲ್‌ ಕಾಲೇಜು ಆಡಳಿತಾಧಿಕಾರಿ ಡಾ. ಉದಯ ಮುಳಗುಂದ ತಿಳಿಸಿದ್ದಾರೆ.

ಮೈಸೂರು ದಸರಾ ಮೀರಿಸುವಂತೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತೀವಿ: ಸಚಿವ ಸುನೀಲ್‌ ಕುಮಾರ್‌

ಮೆಡಿಕಲ್‌ ಕಾಲೇಜು ಕಟ್ಟಡ ಕಾಮಗಾರಿ ಈಗ ಚುರುಕಾಗಿ ನಡೆಯುತ್ತಿದೆ. ಶೈಕ್ಷಣಿಕ ಭವನ ಮತ್ತು ಆಡಳಿತಾತ್ಮಕ ಭವನ ನಿರ್ಮಾಣವನ್ನು ತಿಂಗಳೊಳಗೆ ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಅಲ್ಲಿಯೇ ವೈದ್ಯಕೀಯ ತರಗತಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ದೇವಗಿರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ.
-ಮಹಮ್ಮದ್‌ ರೋಶನ್‌, ಜಿಪಂ ಸಿಇಒ (ಮೆಡಿಕಲ್‌ ಕಾಲೇಜು ನಿರ್ಮಾಣ ಉಸ್ತುವಾರಿ)

Follow Us:
Download App:
  • android
  • ios