ರಾಜ್ಯದ ಏಕೈಕ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯ NITKಗೆ ಹೊಸ ನಿರ್ದೇಶಕರಾಗಿ ಪ್ರೊ.ಪ್ರಸಾದ್ ಕೃಷ್ಣ ನೇಮಕ
ಸುರತ್ಕಲ್ ನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ ಇದರ ಹೆಚ್ಚುವರಿ ನಿರ್ದೇಶಕರಾಗಿ ಪ್ರೊ. ಪ್ರಸಾದ್ ಕೃಷ್ಣ ಅವರನ್ನು ನೇಮಿಸಲಾಗಿದೆ.
ಮಂಗಳೂರು (ಆ.25): ಸುರತ್ಕಲ್ ನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ ಇದರ ಹೆಚ್ಚುವರಿ ನಿರ್ದೇಶಕರಾಗಿ ಪ್ರೊ. ಪ್ರಸಾದ್ ಕೃಷ್ಣ ಅವರನ್ನು ನೇಮಿಸಲಾಗಿದ್ದು, ಗುರುವಾರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಗ್ ವಿಭಾಗ ಪ್ರಾಧ್ಯಾಪಕರಾಗಿದ್ದ ಪ್ರೊ. ಪ್ರಸಾದ್ ಕೃಷ್ಣ ಅವರು ಎನ್‌ಐಟಿಕೆ ಸುರತ್ಕಲ್‌ನಲ್ಲಿ 2016ರಿಂದ 2018ವರೆಗೆ ಡೀನ್ (ಎಎಐಆರ್) ಆಗಿ ಕಾರ್ಯ ನಿರ್ವಹಿಸಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಎನ್‌ಐಟಿ ಕ್ಯಾಲಿಕಟ್‌ನ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಇದೀಗ ಪ್ರೊ. ಪ್ರಸಾದ್ ಕೃಷ್ಣ ಅವರು ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ನೋಡಿಕೊಳ್ಳುತ್ತಾರೆ. ಜತೆಗೆ ಎನ್‌ಐಟಿ ಕ್ಯಾಲಿಕಟ್‌ನ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ಪ್ರೊ. ಪ್ರಸಾದ್ ಕೃಷ್ಣ ಅವರು ಎನ್‌ಐಟಿಕೆಯ ಹಳೆ ವಿದ್ಯಾರ್ಥಿ. ಬಿಟೆಕ್ ಮೆಕ್ಯಾನಿಕಲ್ ಎಂಜಿನಿಯರಿಂಗ್ (1983)ನಲ್ಲಿ ಪ್ರಥಮ ಶ್ರೇಣಿಯನ್ನು ಗಳಿಸಿದ್ದಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕಿರ್ಲೋಸ್ಕರ್ ಚಿನ್ನದ ಪದಕ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪಡೆದಿದ್ದರು. ಐಐಟಿ ಮದ್ರಾಸ್‌ನಿಂದ ಸ್ನಾತಕೋತ್ತರ ಪದವಿ ಪಡೆದ ಅವರು ಯುಎಸ್‌ಎಯ ಮಿಚಿಗನ್ ಆನ್ ಆರ್ಬರ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ 37 ವರ್ಷಗಳ ಸುದೀರ್ಘ ವೃತ್ತಿಪರ ಅನುಭವವನ್ನು ಹೊಂದಿದ್ದಾರೆ.
ಎನ್‌ಐಟಿ ಕುರುಕ್ಷೇತ್ರ, ಎನ್‌ಐಟಿ ಜಲುಂಧರ್, ಎಸ್‌ವಿಎನ್‌ಐಟಿ ಸೂರತ್ ಮತ್ತು ಎಸ್‌ಪಿಎ ನವದೆಹಲಿಯಂತಹ ವಿವಿಧ ರಾಷ್ಟ್ರೀಯಯ ಸಂಸ್ಥೆಗಳಲ್ಲಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ನಾನು ಪದವಿ ಪಡೆದ ಕಾಲೇಜನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಇದು ಸಂದ ಗೌರವ ಮತ್ತು ಸುಯೋಗ. ಎನ್‌ಐಟಿಕೆಯನ್ನು ಹಲವಾರು ಶೈಕ್ಷಣಿಕ ವಿಭಾಗಗಳು ಮತ್ತು ವೃತ್ತಿಪರ ವಿಶೇಷತೆಗಳನ್ನು ಹೊಂದಿರುವ ಸಂಶೋಧನಾ ವಿಶ್ವವಿದ್ಯಾಲಯವನ್ನಾಗಿ ಅಭಿವೃದ್ಧಿಗೊಳಿಸಲು ಮತ್ತು ವಿಶ್ವಾದ್ಯಂತ ಮಹತ್ವಾಕಾಂಕ್ಷೆಯ ಆಲೋಚನೆ ಹೊಂದಿರುವವರಿಗೆ ಎನ್‌ಐಟಿಕೆಯನ್ನು ಆದ್ಯತೆಯ ತಾಣವನ್ನಾಗಿ ಮಾಡಲು ಬದ್ಧರಾಗಿದ್ದೇವೆ ಎಂದು ಪ್ರೊ.ಪ್ರಸಾದ್ ಕೃಷ್ಣ ಹೇಳಿದ್ದಾರೆ.
ಮದರಸಾಗಳ ಶಿಕ್ಷಣ ವ್ಯವಸ್ಥೆ ಪರಿಶೀಲನೆ: BC Nagesh
ಎಸ್‌ಎಸ್‌ಐಟಿ ಇಗ್ನೋ ಕೇಂದ್ರದಲ್ಲಿ ಹೊಸ ಕೋರ್ಸ್ ಆರಂಭ: ತುಮಕೂರು ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಇಗ್ನೋ ಕೇಂದ್ರದಲ್ಲಿ ಶೈಕ್ಷಣಿಕ ಸಾಲಿನಲ್ಲಿ ಹೊಸ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಿದೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ ಬೆಂಗಳೂರು ಕೇಂದ್ರದ ಹಿರಿಯ ನಿರ್ದೇಶಕರಾದ ಡಾ.ಎಸ್ ರಾಧಾ ತಿಳಿಸಿದರು.
ತುಮಕೂರಿನ ಎಸ್‌ಎಸ್‌ಐಟಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೈಕ್ಷಣಿಕ ಸಾಲಿನ ಕೋರ್ಸ್‌ಗಳ ಪ್ರವೇಶಾತಿ ಆರಂಭವಾಗಿದ್ದು, ಇದರೊಂದಿಗೆ ಹೊಸ ಕೋರ್ಸ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ. 2022-23ನೇ ಸಾಲಿನ ಪ್ರವೇಶಾತಿಗೆ ಹೊಸದಾಗಿ ಆರಂಭಗೊಂಡಿರುವ ಕೋರ್ಸ್‌ಗಳಲ್ಲಿ ಎಂಬಿಎ ವಿಭಾಗದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ನಿರ್ವಹಣೆ, ಕಾರ್ಯಾಚರಣೆ ನಿರ್ವಹಣೆ, ಮಾರ್ಕೆಟಿಂಗ್, ಎಂಎಸ್‌ಸಿ ವಿಭಾಗದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟನಿರ್ವಹಣೆ, ಎಂಎ ವಿಭಾಗದಲ್ಲಿ ಹಿಂದಿ, ಅರೇಬಿಕ್, ಪಿಜಿ ಡಿಪ್ಲೊಮೋ ವಿಭಾಗದಲ್ಲಿ ಅಮೆರಿಕಾ ಸಾಹಿತ್ಯ ಮತ್ತು ಕಾದಂಬರಿ, ಬ್ರಿಟಿಷ್ ಸಾಹಿತ್ಯ, ಇಂಗ್ಲಿಷ್‌ನಲ್ಲಿ ನವ ಸಾಹಿತ್ಯ, ಎಲೆಕ್ಟ್ರಾನಿಕ್ ವೇದಿಕ್ ಗಣಿತ ಸೇರಿದಂತೆ 8 ಪದವಿ, 8 ಸ್ನಾತಕೋತ್ತರ ಪದವಿ, 8 ಡಿಪ್ಲೊಮೋ ಮತ್ತು 3 ಸರ್ಟಿಫಿಕೆಟ್ ಕೋರ್ಸ್‌ಗಳನ್ನು ಆರಂಭಿಸಲಾಗಿದೆ ಎಂದು ಡಾ.ಎಸ್ ರಾಧಾ ವಿವರಿಸಿದರು.
ವಿದ್ಯಾರ್ಥಿಗಳಿಗೆ ವಾರಾಂತ್ಯದಲ್ಲಿ ತರಗತಿ ನಡೆಸಲಾಗುತ್ತಿದ್ದು, ಸ್ವಯಂಪ್ರಭ ದೂರದರ್ಶನ ವಾಹಿನಿ ಮತ್ತು ಜ್ಞಾನವಾಹಿನಿ, ಜ್ಞಾನಧಾರ ರೇಡಿಯೋ ಕಾರ್ಯಕ್ರಮಗಳ ಮೂಲಕ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಈ ವಿಶ್ವವಿದ್ಯಾಲಯದಲ್ಲಿ ಒಂದೇ ಬಾರಿಗೆ ಎರಡು ಪದವಿ ಪಡೆಯಬಹುದಾಗಿದೆ. ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರು ಮಾತನಾಡಿ, ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ನಮ್ಮ ಕಾಲೇಜಿನಲ್ಲಿ 40ಕ್ಕೂ ಅಧಿಕ ಕೋರ್ಸ್‌ಗಳಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಪದವಿಯೊಂದಿಗೆ ನಿಯೋಜನೆ ಚಟುವಟಿಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಬೇಕಿರುವಂತಹ ಅಗತ್ಯ ತರಗತಿಗಳನ್ನು ನಡೆಸಲಾಗುತ್ತದೆ ಎಂದರು.