Asianet Suvarna News Asianet Suvarna News

ಶಾಲೆ ಆರಂಭಕ್ಕೆ ವಿದೇಶದಲ್ಲೂ ಪೋಷಕರ ವಿರೋಧ!

ವಿದೇಶಗಳಲ್ಲಿ ಶಾಲೆ ತೆರೆದರೂ ಶೇ.90 ಆನ್‌ಲೈನ್‌ ಕ್ಲಾಸ್‌!| ಕೆಲವು ದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ| ಅನೇಕ ದೇಶಗಳಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ತರಗತಿ| 2 ದಿನ ಶಾಲೆ, 4 ದಿನ ಆನ್‌ಲೈನ್‌ ಕ್ಲಾಸ್‌

Parents In Foreign Countries Are Not Ready To Send Children To Regular Classes pod
Author
Bangalore, First Published Oct 7, 2020, 8:14 AM IST
  • Facebook
  • Twitter
  • Whatsapp

ಬೆಂಗಳೂರು(ಅ.07): ರಾಜ್ಯದಲ್ಲಿ ಶಾಲೆ ಕಾಲೇಜುಗಳನ್ನು ತೆರೆಯಲು ಸರ್ಕಾರ ಮಾರ್ಗಸೂಚಿ ಸಿದ್ಧಪಡಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಇದೇ ವೇಳೆ ಕೇಂದ್ರ ಸರ್ಕಾರ ಕೂಡ ಅನ್‌ಲಾಕ್‌ 5.0 ಮಾರ್ಗಸೂಚಿಯಡಿ ರಾಜ್ಯಗಳು ಬೇಕಾದರೆ ಶಾಲೆಗಳನ್ನು ಆರಂಭಿಸಬಹುದು ಎಂದು ಹೇಳಿದೆ. ಆದರೆ, ಸಂಸದರು ಹಾಗೂ ಶಾಸಕರಿಗೆ ಕೊರೋನಾ ಬರಬಹುದು ಎಂಬ ಭೀತಿಯಿಂದ ಸಂಸತ್‌ ಮತ್ತು ವಿಧಾನಮಂಡಲದ ಅಧಿವೇಶನಗಳನ್ನೇ ಅರ್ಧಕ್ಕೆ ಮೊಟಕುಗೊಳಿಸಿದ ಸರ್ಕಾರಗಳು ಮಕ್ಕಳನ್ನು ಹೇಗೆ ಶಾಲೆಗೆ ಕಳುಹಿಸಿ ಅಪಾಯಕ್ಕೆ ದೂಡುವ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಪೋಷಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಶಾಲೆಗಳನ್ನು ಹೇಗೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಅಲ್ಲಿರುವ ಕನ್ನಡಿಗರಿಂದ ಮಾಹಿತಿ ತರಿಸಿಕೊಂಡು ‘ಕನ್ನಡಪ್ರಭ’ ರಿಯಾಲಿಟಿ ಚೆಕ್‌ ಮಾದರಿಯಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ಈ ರಿಯಾಲಿಟಿ ಚೆಕ್‌ನಲ್ಲಿ ವ್ಯಕ್ತವಾದ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿದೇಶಗಳಲ್ಲಿ ಶೇ.90ರಷ್ಟುಆನ್‌ಲೈನ್‌ ತರಗತಿ ನಡೆಯುತ್ತಿವೆ. ಜತೆಗೆ, ಹೈಬ್ರಿಡ್‌ ಮಾದರಿಯಲ್ಲೂ ಶಾಲೆ ನಡೆಯುತ್ತಿದೆ. ಒಂದಷ್ಟುಕಡೆ ಪೂರ್ಣಪ್ರಮಾಣದ ಶಾಲೆ ಆರಂಭವಾಗಿದೆ ಎಂದು ತಿಳಿದು ಬರುತ್ತದೆ. ಅಲ್ಲದೆ, ನಮ್ಮ ರಾಜ್ಯದಲ್ಲೂ ಶಾಲೆಗಳನ್ನು ಹೇಗೆ ತೆರೆಯಬಹುದು ಅಥವಾ ಪ್ರಸಕ್ತ ಶೈಕ್ಷಣಿಕ ವರ್ಷದ ಪಾಠ ಪ್ರವಚನಗಳನ್ನು ಹೇಗೆ ಪೂರ್ಣಗೊಳಿಸಬಹುದು ಎಂಬುದಕ್ಕೆ ಕೆಲ ಮಾದರಿಗಳು ಸಿಗುತ್ತವೆ.

ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ, ಕೆನಡಾ, ಆಸ್ಪ್ರೇಲಿಯಾ ಹೀಗೆ ಬಹುತೇಕ ದೇಶಗಳಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಆದರೆ, ಕೆನಡಾ ಮತ್ತು ಆಸ್ಪ್ರೇಲಿಯಾ ಹೊರತುಪಡಿಸಿ ಇನ್ನೆಲ್ಲಾ ಪ್ರಮುಖ ದೇಶಗಳಲ್ಲೂ ಸರ್ಕಾರ ಮತ್ತು ಶಾಲೆಗಳು ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಅಥವಾ ಕಳುಹಿಸದಿರುವ ಆಯ್ಕೆಗಳನ್ನು ನೀಡುವೆ. ಮುಖ್ಯವಾಗಿ ಪೋಷಕರಿಗೆ 3 ಆಯ್ಕೆ ನೀಡಲಾಗಿದೆ. 1.ಸಂಪೂರ್ಣ ಆನ್‌ಲೈನ್‌ ಶಿಕ್ಷಣ ಆಯ್ಕೆ ಮಾಡಿಕೊಳ್ಳುವುದು. 2.ಮೊದಲಿನಂತೆಯೇ ಮಕ್ಕಳನ್ನು ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಕಳುಹಿಸುವುದು. 3.ಹೈಬ್ರಿಡ್‌ ಅಥವಾ ಬ್ಲೆಂಡೆಡ್‌ ಮಾದರಿ. ಈ ಮಾದರಿಯಲ್ಲಿ ಕೆಲ ವಿಷಯಗಳ ಕೆಲವು ತರಗತಿಗಳು ಶಾಲೆಯಲ್ಲಿ ನಡೆಯುತ್ತವೆ ಮತ್ತು ಇನ್ನಿತರ ತರಗತಿಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ.

ಬಹುತೇಕರ ಆಯ್ಕೆ ಆನ್‌ಲೈನ್‌:

ಅಮೆರಿಕದಲ್ಲಿ ಶಾಲೆ ತೆರೆಯಲು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ನಿಯಮಗಳಿವೆ. ಜೊತೆಗೆ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಲ್ಲಾ ಶಾಲೆ ಕಾಲೇಜುಗಳನ್ನೂ ತೆರೆದಿದ್ದರೆ, ವಿರೋಧ ಪಕ್ಷವಾದ ಡೆಮಾಕ್ರೆಟಿಕ್‌ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಯ್ಕೆಯನ್ನು ಪೋಷಕರಿಗೆ ಬಿಡಲಾಗಿದೆ. ಆದರೆ, ಅಮೆರಿಕವೂ ಸೇರಿದಂತೆ ದುಬೈ, ಕೆನಡಾ ಹೀಗೆ ಯಾವ್ಯಾವ ದೇಶಗಳಲ್ಲಿ ಶಾಲೆಗಳು ಆನ್‌ಲೈನ್‌ ಆಯ್ಕೆಯನ್ನು ನೀಡಿವೆಯೋ ಅಲ್ಲೆಲ್ಲ ಪೋಷಕರು ಮತ್ತು ಮಕ್ಕಳು ಹೆಚ್ಚಾಗಿ ಆನ್‌ಲೈನ್‌ ತರಗತಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಫ್ರಾನ್ಸ್‌, ಆಸ್ಪ್ರೇಲಿಯಾ, ಜರ್ಮನಿ ಮುಂತಾದ ದೇಶಗಳಲ್ಲಿ ಆನ್‌ಲೈನ್‌ ಆಯ್ಕೆಯೇ ಇಲ್ಲ. ಅಲ್ಲಿ ಎಲ್ಲಾ ಮಕ್ಕಳೂ ಶಾಲೆಗೆ ಹೋಗುತ್ತಿದ್ದಾರೆ.

ಅಪ್ಪ-ಅಮ್ಮ ಇಬ್ಬರೂ ಕೆಲಸದಲ್ಲಿದ್ದರೆ ಶಾಲೆ:

ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲಿ ಅಪ್ಪ-ಅಮ್ಮ ಇಬ್ಬರೂ ಕೆಲಸದಲ್ಲಿದ್ದರೆ ಆಗ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೇ ಹೆಚ್ಚು ಒಲವು ತೋರುತ್ತಿದ್ದಾರೆ. ಏಕೆಂದರೆ ಮನೆಯಲ್ಲಿ ಅವರ ಜೊತೆ ಕುಳಿತು ಆನ್‌ಲೈನ್‌ ಕ್ಲಾಸ್‌ಗೆ ಹಾಜರಾಗಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ.

ಹೈಬ್ರಿಡ್‌ ತರಗತಿ ಕೂಡ ಜನಪ್ರಿಯ:

ದುಬೈ, ಬಹರೇನ್‌, ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲಿ ಶಾಲೆಗಳು ಹೈಬ್ರಿಡ್‌ ಅಥವಾ ಬ್ಲೆಂಡೆಡ್‌ ತರಗತಿಗಳ ಆಯ್ಕೆಯನ್ನು ಪೋಷಕರಿಗೆ ನೀಡಿವೆ. ಈ ವ್ಯವಸ್ಥೆಯಲ್ಲಿ ಗರಿಷ್ಠ ಮುನ್ನೆಚ್ಚರಿಕೆ ವಹಿಸಿ, ಸಾಧ್ಯವಾದಷ್ಟುಕಡಿಮೆ ಮಕ್ಕಳನ್ನು ಸರದಿಯ ಪ್ರಕಾರ ಪುಟ್ಟಪುಟ್ಟಬ್ಯಾಚ್‌ಗಳಲ್ಲಿ ಶಾಲೆಗೆ ಕರೆಸಿಕೊಳ್ಳಲಾಗುತ್ತದೆ. ಆದರೆ, ಒಂದು ದಿನ ಬಿಟ್ಟು ಒಂದು ದಿನ ಅಥವಾ ವಾರಕ್ಕೆ ಎರಡು ದಿನ ಮಾತ್ರ ಮಕ್ಕಳಿಗೆ ಶಾಲೆಯಲ್ಲಿ ತರಗತಿಯಿರುತ್ತದೆ. ಈ ತರಗತಿಯಲ್ಲಿ ಗಣಿತ, ವಿಜ್ಞಾನದಂತಹ ಕಠಿಣ ವಿಷಯಗಳನ್ನು ಮಾತ್ರ ಬೋಧಿಸಲಾಗುತ್ತದೆ. ನಂತರ ಇನ್ನುಳಿದ ದಿನ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಮಕ್ಕಳು ಪಾಠ ಕೇಳುತ್ತಾರೆ. ಆನ್‌ಲೈನ್‌ನಲ್ಲಿ ಸರಳ ವಿಷಯಗಳನ್ನು ಬೋಧಿಸಲಾಗುತ್ತದೆ.

ಹೈಬ್ರಿಡ್‌ ತರಗತಿಯ ಆಯ್ಕೆ ಎಲ್ಲೆಲ್ಲಿದೆಯೋ ಆ ದೇಶಗಳಲ್ಲೆಲ್ಲ ಸಾಮಾನ್ಯವಾಗಿ ಶೇ.100 ಆನ್‌ಲೈನ್‌ ಪಾಠದ ಆಯ್ಕೆಯೂ ಇದೆ. ಹೀಗಾಗಿ ಹೈಬ್ರಿಡ್‌ ವಿಧಾನದಲ್ಲಿ ಎರಡು ಲಾಭಗಳಿವೆ. ಒಂದು, ಈ ಮಾದರಿಯಲ್ಲಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಿರುತ್ತದೆ. ಹೀಗಾಗಿ ಕೊರೋನಾ ತಗಲುವ ಸಾಧ್ಯತೆ ಕಡಿಮೆ. ಎರಡನೆಯದಾಗಿ, ಎಲ್ಲಾ ವಿಷಯಗಳನ್ನೂ ಆನ್‌ಲೈನ್‌ನಲ್ಲಿ ಬೋಧಿಸಲು ಸಾಧ್ಯವಿಲ್ಲ ಎಂಬ ಸಮಸ್ಯೆಗೂ ಇದು ಪರಿಹಾರ. ಹೀಗಾಗಿ ಈ ವಿಧಾನ ಕೂಡ ಸಾಕಷ್ಟುಜನಪ್ರಿಯವಾಗಿದೆ.

ಫ್ರಾನ್ಸ್‌, ಆಸ್ಪ್ರೇಲಿಯಾ ಮಾದರಿ ನಮಗೆ ಹೊಂದದು:

ಫ್ರಾನ್ಸ್‌ ಮತ್ತು ಆಸ್ಪ್ರೇಲಿಯಾದಲ್ಲಿ ಮಾಸ್ಕ್‌, ಸಾಮಾಜಿಕ ಅಂತರ ಮುಂತಾದ ಮುನ್ನೆಚ್ಚರಿಕೆಯೊಂದಿಗೆ ಎಲ್ಲಾ ಶಾಲೆ, ಕಾಲೇಜುಗಳನ್ನೂ ತೆರೆಯಲಾಗಿದೆ. ಶಾಲೆಗೆ ಮಕ್ಕಳು ಹೋಗುವುದರಿಂದಾಗಿ ಅಲ್ಲಿ ಕೊರೋನಾ ಹೆಚ್ಚಾಗಿಲ್ಲ. ಏಕೆಂದರೆ ಆ ದೇಶಗಳಲ್ಲಿ ಜನಸಂಖ್ಯೆ ಕಡಿಮೆ ಮತ್ತು ಶಾಲೆಗಳು ವಿಶಾಲವಾಗಿವೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸುಲಭ. ನಮ್ಮ ದೇಶಕ್ಕೆ ಅಥವಾ ನಮ್ಮ ರಾಜ್ಯಕ್ಕೆ ಈ ಮಾದರಿ ಹೊಂದುವುದಿಲ್ಲ. ಏಕೆಂದರೆ, ಇಲ್ಲಿ ಜನಸಂಖ್ಯೆ ಮತ್ತು ಜನಸಾಂದ್ರತೆ ಬಹಳ ಹೆಚ್ಚು. ಉದಾಹರಣೆಗೆ, ಆಸ್ಪ್ರೇಲಿಯಾದಲ್ಲಿ ಒಂದು ಚ.ಕಿ.ಮೀ. ಪ್ರದೇಶದಲ್ಲಿ ಸರಾಸರಿ 3.2 ಜನರು ವಾಸಿಸುತ್ತಿದ್ದರೆ, ಭಾರತದಲ್ಲಿ ಒಂದು ಚ.ಕಿ.ಮೀ. ಪ್ರದೇಶದಲ್ಲಿ ಸರಾಸರಿ 382 ಜನರು ವಾಸಿಸುತ್ತಿದ್ದಾರೆ! ಹೀಗಾಗಿ ನಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ಜೊತೆಗೆ ನಮ್ಮ ರಾಜ್ಯದ ನಗರ ಪ್ರದೇಶಗಳಲ್ಲಿರುವ ಶಾಲೆಗಳು ಸಣ್ಣಪುಟ್ಟಕಟ್ಟಡದಲ್ಲಿ ಕಿಷ್ಕಿಂಧೆಯಂತಹ ಜಾಗದಲ್ಲೂ ನಡೆಯುತ್ತಿವೆ. ಅಲ್ಲಿ ಸಾಮಾಜಿಕ ಅಂತರ ಅಸಾಧ್ಯ. ಮೇಲಾಗಿ ನಮ್ಮ ರಾಜ್ಯದ ಜನಸಾಮಾನ್ಯರು ಪಾಶ್ಚಾತ್ಯರಷ್ಟುಸುಶಿಕ್ಷಿತರೂ ಶ್ರೀಮಂತರೂ ಅಲ್ಲದ್ದರಿಂದ ಮಕ್ಕಳಿಗೆ ಕೊರೋನಾ ಬಗ್ಗೆ ಅರಿವು ಮೂಡಿಸುವುದು ಅಥವಾ ಸುರಕ್ಷತೆಗೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳುವುದು ಕಷ್ಟವಾಗುತ್ತದೆ.

ಬ್ರಿಟನ್ನಿನಲ್ಲಿ ಪೋಷಕರ ವಿರೋಧದ ನಡುವೆಯೇ ಎಲ್ಲಾ ಶಾಲೆ ಕಾಲೇಜುಗಳನ್ನೂ ತೆರೆಯಲಾಗಿದೆ. ಆದರೆ, ಶಿಕ್ಷಣ ಸಂಸ್ಥೆಗಳೇ ಈಗ ಕೊರೋನಾ ಹರಡುವ ಕೇಂದ್ರಗಳಾಗಿ ಮಾರ್ಪಡುತ್ತಿದ್ದು, ಅನೇಕ ಶಾಲೆ, ಕಾಲೇಜುಗಳನ್ನು ಮತ್ತೆ ಮುಚ್ಚಲಾಗಿದೆ.

ಕರ್ನಾಟಕದಲ್ಲಿ ಏನು ಮಾಡಬಹುದು?

1. ಸದ್ಯಕ್ಕೆ ಸಂಪೂರ್ಣ ಆನ್‌ಲೈನ್‌ನಲ್ಲೇ ತರಗತಿಗಳನ್ನು ಮುಂದುವರೆಸುವುದು ಮೊದಲ ಉತ್ತಮ ಆಯ್ಕೆ.

2. ಆನ್‌ಲೈನ್‌ ಕ್ಲಾಸ್‌ಗೆ ಹಾಜರಾಗಲು ಸಾಧ್ಯವಿಲ್ಲ, ನಮ್ಮಲ್ಲಿ ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಅಥವಾ ಲ್ಯಾಪ್‌ಟಾಪ್‌ ಇಲ್ಲ ಎನ್ನುವ ವಿದ್ಯಾರ್ಥಿಗಳನ್ನು ಮಾತ್ರ ಶಾಲೆಗೆ ಕರೆಸಬಹುದು. ಆಗ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆಯಿರುತ್ತದೆ. ಹೀಗಾಗಿ ಸೋಂಕಿನ ಅಪಾಯ ಕಡಿಮೆ. ಆದರೆ, ಶಿಕ್ಷಕರಿಗೆ ಹೆಚ್ಚಿನ ಹೊರೆಯಾಗುತ್ತದೆ.

3. ಕೆಲ ಕಠಿಣ ವಿಷಯಗಳ ಪಾಠವನ್ನು ಮಾತ್ರ ಶಾಲೆಯಲ್ಲೇ ಮಾಡಿ, ಅಂದರೆ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮಾತ್ರ ಭೌತಿಕ ತರಗತಿ ನಡೆಸಿ, ಇನ್ನುಳಿದ ವಿಷಯಗಳನ್ನು ಆನ್‌ಲೈನ್‌ನಲ್ಲಿ ಬೋಧಿಸುವ ಹೈಬ್ರಿಡ್‌ ಅಥವಾ ಬ್ಲೆಂಡೆಡ್‌ ಮಾದರಿಯ ಪಾಠದ ಕ್ರಮ ಅಳವಡಿಸಿಕೊಳ್ಳಬಹುದು.

ತಲೆಕೆಳಗಾಯ್ತು ತಜ್ಞರ ಲೆಕ್ಕಾಚಾರ

ಕಾಲೇಜು ವಿದ್ಯಾರ್ಥಿಗಳು ತಿಳುವಳಿಕೆ ಹೊಂದಿರುತ್ತಾರೆ. ಕೊರೋನಾ ಬಗ್ಗೆ ಶಾಲಾ ಮಕ್ಕಳಿಗಿಂತ ಹೆಚ್ಚು ಜಾಗ್ರತೆ ವಹಿಸುತ್ತಾರೆ. ಮೊದಲು ಕಾಲೇಜು, ನಂತರ ಶಾಲೆಗಳನ್ನು ಹಂತಹಂತವಾಗಿ ಆರಂಭಿಸಿ ಎಂದು ಸರ್ಕಾರಗಳಿಗೆ ಆರೋಗ್ಯ, ಶಿಕ್ಷಣ ತಜ್ಞರು ಸಲಹೆ ನೀಡಿದ್ದರು. ಆದರೆ, ವಿದೇಶಗಳಲ್ಲಿ ಕಂಡು ಬಂದಿರುವ ಸಂಗತಿ ಏನೆಂದರೆ, ಯುವಕ-ಯುವತಿಯರು ಹೆಚ್ಚಾಗಿ ಪಬ್ಬು, ಕ್ಲಬ್ಬು, ಬೀಚಲ್ಲಿ ಬಿಡುಬೀಸಾಗಿ ಸುತ್ತಾಡುತ್ತಿದ್ದು, ಅವರಿಂದಲೇ ಮನೆ ಮಂದಿಯೂ ಸೇರಿದಂತೆ ಕೊರೋನಾ ಹಬ್ಬಿದೆ. ಹಾಗಾಗಿ, ಕಾಲೇಜು ವಿದ್ಯಾರ್ಥಿಗಳು ತಿಳುವಳಿಕೆಯಿಂದ ವರ್ತಿಸುತ್ತಾರೆ ಎಂಬ ತಜ್ಞರ ಲೆಕ್ಕಾಚಾರ ತಲೆಕೆಳಗಾಗಿದೆ.

ಶಾಲೆಗೆ ಆಯ್ಕೆಗಳು

1. ಶಾಲೆಯನ್ನೇ ತೆರೆಯದೆ ಎಲ್ಲ ಮಕ್ಕಳಿಗೂ ಶೇ.100ರಷ್ಟುಆನ್‌ಲೈನ್‌ ತರಗತಿ ವ್ಯವಸ್ಥೆ

2. 2 ದಿನ ಶಾಲೆ, 4 ದಿನ ಆನ್‌ಲೈನ್‌ ಎಂಬ ಹೈಬ್ರಿಡ್‌ ಮಾದರಿ. ಇದಕ್ಕೆ ಪೋಷಕರ ಒಲವು

3. ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆದು ತರಗತಿ ನಡೆಸುವುದು. ಇದಕ್ಕೆ ಅನೇಕರ ವಿರೋಧ

ಶಾಲೆ ಆರಂಭ ಮಾಡಬೇಕಾ? ಸುವರ್ಣ ನ್ಯೂಸ್‌ ಸಮೀಕ್ಷೆ

ಬೇಕು - 27%

ಬೇಡ - 73%

ಶುರುವಾದರೆ ಹೇಗಿರಬೇಕು?

ಪೂರ್ಣ ಆನ್‌ಲೈನ್‌: 43%

ಎಲ್ಲರೂ ಶಾಲೆಗೆ: 34%

ಹೈಬ್ರಿಡ್‌ ತರಗತಿ: 23%

Follow Us:
Download App:
  • android
  • ios