Karnataka Sanskrit University Opposition: #SayNoToSanskrit ಅಭಿಯಾನಕ್ಕೆ ವ್ಯಾಪಕ ಖಂಡನೆ
ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಟ್ವಿಟ್ಟರ್ ಅಭಿಯಾನ #SayNoToSanskrit ಹ್ಯಾಷ್ ಟ್ಯಾಗ್ ಬಳಸಿ ನಡೆಸಿದ ಅಭಿಯಾನಕ್ಕೆ ಲಕ್ಷಾಂತರ ಮಂದಿಯಿಂದ ಬೆಂಬಲ. ಕರವೇಯ ಅಧ್ಯಕ್ಷರ ಹೇಳಿಕೆಗೆ ಹಲವರ ವಿರೋಧ.
ಬೆಂಗಳೂರು(ಜ.17): ಸಂಸ್ಕೃತ ವಿಶ್ವವಿದ್ಯಾಲಯ (Sanskrit university) ಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಕನ್ನಡಪರ ಹೋರಾಟಗಾರರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು ಭಾನುವಾರ ಟ್ವಿಟ್ಟರ್ ಅಭಿಯಾನ ನಡೆಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ, ಎಸ್‌ಎಫ್‌ಐ ಸೇರಿದಂತೆ ನಾನಾ ಸಂಘಟನೆಗಳು ಕರೆ ನೀಡಿದ್ದ ‘ಸಂಸ್ಕೃತ ವಿವಿ ಬೇಡ’, #SayNoToSanskrit ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿ ಒಕ್ಕೊರಲಿನಿಂದ ಕನ್ನಡದ ನೆಲದಲ್ಲಿ ಕನ್ನಡವನ್ನು ಕಡೆಗಣಿಸಿ ಸಂಸ್ಕೃತಕ್ಕೆ ಮಣೆ ಹಾಕೋದು ಬೇಡ ಎಂದು ವಿರೋಧ ವ್ಯಕ್ತಪಡಿಸಿದರು. ಮಾತ್ರವಲ್ಲ ತಕ್ಷಣವೇ ರಾಜ್ಯ ಸರಕಾರ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಒತ್ತಾಯಿಸಿದರು.
ಈ ನಡುವೆ ಕರವೇಯ ಅಭಿಯಾನಕ್ಕೆ ವ್ಯಾಪಕ ವಿರೋಧಗಳು ಕೂಡ ವ್ಯಕ್ತವಾಗಿದೆ. ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಪತ್ರಕರ್ತ ನವೀನ್ ಸಾಗರ್ ಸೇರಿದಂತೆ ಹಲವು ಮಂದಿ ನಾರಾಯಣ ಗೌಡರ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ
ಪತ್ರಕರ್ತ ನವೀನ್ ಸಾಗರ್ " ಕನ್ನಡ ಓರಾಟಗಾರರಲ್ಲಿ ಒಂದು ತಪ್ಪು ತಿಳಿವಳಿಕೆ ಇದೆ. ಅವ್ರು ಸಂಸ್ಕೃತ ಅಂದ್ರೆ ತಾವು ಬಯ್ಯೋಕೆ ಬಳಸೋ #%#%##@₹&೪₹:೪-#₹€¢$^$ ಪದಗಳು ಅಂದ್ಕೊಂಡವ್ರೆ. ನಾವ್ ಅದ್ರಲ್ಲಿ ಈಗಾಗ್ಲೇ ಪಿಎಚ್ಡಿ ಪಡ್ಕೊಂಡಿದೀವಿ. ಮತ್ತೆ ಯಾಕೆ ಅದಕ್ಕೊಂದು ಯೂನಿವರ್ಸಿಟಿ ಅನ್ನೋದು ಅವರ ಪ್ರಶ್ನೆ. ಅಯ್ಯೋ ದಡ್ರಾ... ಭಾಷೆಗಳ ಅಮ್ಮ ಕಣ್ರೋ ಸಂಸ್ಕೃತ! ಅಮ್ಮನ್ ಭಾಷೆ ಅಲ್ಲ" ಎಂದಿದ್ದಾರೆ
ಫೇಸ್‌ಬುಕ್ (Facbook), ಟ್ವಿಟರ್‌ಗಳಲ್ಲಿ ಸಂಸ್ಕೃತ ವಿವಿ ಬೇಡ ಹ್ಯಾಶ್ ಟ್ಯಾಗ್ ಭಾನುವಾರ ಟಾಪ್ ಟ್ರೆಂಡಿಂಗ್‌ನಲ್ಲಿತ್ತು. ಅಭಿಯಾನದ ಬಗ್ಗೆ ಮಾತನಾಡಿದ ಕರವೇ ಅಧ್ಯಕ್ಷ ಟಿ. ಎ. ನಾರಾಯಣ ಗೌಡ, ‘ಮೊದಲು ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಶಾಲೆಗಳನ್ನು ಉಳಿಸಲಿ. ಸಂಸ್ಕೃತ ವಿವಿಗೆ ಕೊಡಲು 359 ಕೋಟಿ ರೂ., 100 ಎಕರೆ ಮೀಸಲು ಅರಣ್ಯ ಜಾಗ ಇದೆ. ಆದರೆ ಕನ್ನಡಿಗರ ಏಕೈಕ ವಿವಿಗೆ ಕೊಡಲು 2 ಕೋಟಿ ಹಣವಿಲ್ಲವೇ?’ ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿವಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಮೊದಲು ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿ, ಅಗತ್ಯ ಶಿಕ್ಷಕರನ್ನು ನೇಮಕ ಮಾಡಿ. ಅತಿಥಿ ಉಪನ್ಯಾಸಕರಿಗೆ ಸೂಕ್ತ ಸಂಬಳ ಕೊಡಲಿ. ಕನ್ನಡ ಮಾಧ್ಯಮದಲ್ಲಿ ಪಿಯುಸಿ ಹಂತದಲ್ಲಿ ಕಲಿಯಲು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಿ’ ಎಂದು ಆಗ್ರಹಿಸಿದರು.
ಮೊದಲ ಹಂತದಲ್ಲಿ ಸಂಸ್ಕೃತ ವಿವಿ ಸ್ಥಾಪನೆ ಹಿನ್ನೆಲೆಯ ಹುನ್ನಾರಗಳನ್ನು ಬಯಲಿಗೆಳೆದು ಜನಜಾಗೃತಿ ನಡೆಸಲಾಗುವುದು. ಮುಂದೆ ಹಂತಹಂತವಾಗಿ ರಾಜ್ಯದೆಲ್ಲೆಡೆ ಬೀದಿ ಹೋರಾಟಗಳನ್ನು ಸಂಘಟಿಸಲಾಗುವುದು. ಸಂಸ್ಕೃತ ವಿವಿ ರದ್ದುಗೊಳಿಸದಿದ್ದರೆ ಅನಿವಾರ್ಯವಾಗಿ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳಬೇಕಾಗುತ್ತದೆ ಅಂತ ಕರವೇ ಅಧ್ಯಕ್ಷ ನಾರಾಯಣಗೌಡ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಹಂಪಿಯಲ್ಲಿನ ಕನ್ನಡ ವಿವಿಯ ಸಿಬ್ಬಂದಿಗೆ ಹಣ ಕೊಡಲೂ ಸರ್ಕಾರ ಹಣವಿಲ್ಲವೆಂಬ ಸಬೂಬು ನೀಡುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ, ಹೋರಾಟ ನಡೆಸಿ ಅನುದಾನ ಕೊಡಿಸಬೇಕಾಯಿತು. ಕನ್ನಡ ವಿವಿಗೆ ಇಲ್ಲದ ಹಣ ಸಂಸ್ಕೃತ ವಿವಿಗೆ ಎಲ್ಲಿಂದ ಬಂತು? ಸರ್ಕಾರ ಇದಕ್ಕೆ ಉತ್ತರ ನೀಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಗೋಕಾಕ್ ಚಳವಳಿಯನ್ನು ಸ್ಮರಿಸಿದ ನಾರಾಯಣ ಗೌಡರು, “ಅಂದು ಗೋಕಾಕ್ ಚಳವಳಿಯಲ್ಲಿ ವರನಟ ಡಾ.ರಾಜಕುಮಾರ್ ಅವರು ಭಾಗವಹಿಸಿ ದೊಡ್ಡ ಸಂಚಲನ ಮೂಡಿಸಿದ್ದರು. ಈಗಲೂ ಅಂಥದ್ದೇ ಆಪತ್ತು ಎದುರಾಗಿರುವುದರಿಂದ ಕನ್ನಡದ ಸಾಹಿತಿ, ಕಲಾವಿದರು, ಚಿಂತಕರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಎಚ್ಚೆತ್ತುಕೊಂಡು ಈ ಪಿತೂರಿಗಳ ವಿರುದ್ಧ ನಿಲ್ಲಬೇಕಿದೆ. ಗೋಕಾಕ್ ಚಳವಳಿ ಯಾಕೆ ನಡೆಯಿತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳೋಣ. ಆಗಲೂ ಕೂಡಾ ಇದೇ ಸಂಸ್ಕೃತದ ಯಜಮಾನಿಕೆ ಮಾಡಲು ಬಯಸುವವರು ಕನ್ನಡದ ಬದಲು ಸಂಸ್ಕೃತ ಕಲಿಕೆಯ ಪಿತೂರಿ ನಡೆಸಿದ್ದರು. ಇಡೀ ರಾಜ್ಯವೇ ಆಗ ಒಂದಾಗಿ ಹೋರಾಡಿತ್ತು. ಈಗ ಅಂಥದ್ದೇ ಕಾಲ ಬಂದಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಸರ್ಕಾರ ಹಠಮಾರಿತನ ತೋರಿದರೆ ಕರ್ನಾಟಕ ರಕ್ಷಣಾ ವೇದಿಕೆ ಇಡೀ ರಾಜ್ಯದಾದ್ಯಂತ ಆಂದೋಲನ ಆರಂಭಿಸುತ್ತದೆ. ಇದರ ಪರಿಣಾಮವನ್ನು ಆಳುವ ಬಿಜೆಪಿ ಸರ್ಕಾರವೇ ಎದುರಿಸಬೇಕಾಗುತ್ತದೆ. ಸರ್ಕಾರ ಕನ್ನಡ ನುಡಿಯನ್ನು ಬದಿಗೆ ಸರಿಸಿ, ಸಂಸ್ಕೃತವನ್ನು ಹೇರುತ್ತಿರುವ ಕುರಿತು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ನೂರು ಎಕರೆ ಅರಣ್ಯ ಪ್ರದೇಶವನ್ನೇ ಸಂಸ್ಕೃತ ವಿವಿಗೆ ಕೊಡಲಾಗಿದೆ. ಇರುವ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಓದಲು ವಿದ್ಯಾರ್ಥಿಗಳು ಬರುತ್ತಿಲ್ಲ. ಹೀಗಿರುವಾಗ ಇಷ್ಟು ದೊಡ್ಡ ಜಾಗವನ್ನು ಯಾಕೆ ಕೊಡಲಾಗಿದೆ? ಇದೇ ಜಾಗದಲ್ಲಿ ಇನ್ನೊಂದು ಕನ್ನಡ ವಿವಿ ತೆರೆಯಬಹುದಿತ್ತಲ್ಲವೇ? ಎಂದು ಸಾಲು ಸಾಲು ಟ್ವೀಟ್ ಮಾಡಿ ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.