ಇನ್ನು ಆನ್‌ಲೈನಲ್ಲೇ ಖಾಸಗಿ ಶಾಲೆಗಳಿಗೆ ಲೈಸೆನ್ಸ್: ಸಚಿವ ನಾಗೇಶ್
ಸೇವೆಗಳನ್ನು ಆನ್‌ಲೈಗೊಳಿಸಿ ಹಲವು ನಿಯಮಗಳನ್ನು ಸರಳೀಕರಿಸಲಾಗಿದೆ. ಸಚಿವರ ಹಂತದಲ್ಲಿ ಆಗಬೇಕಿದ್ದ ಕೆಲಸಗಳನ್ನು ಜಿಲ್ಲಾ ಉಪನಿರ್ದೇಶಕ ಹಂತಕ್ಕೆ ಇಳಿಸಲಾಗಿದೆ. ಇನ್ಮುಂದೆ ಖಾಸಗಿ ಶಾಲೆಗಳು ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನಿಗದಿತ ಲಿಂಕ್ ಮೂಲಕ ಆನ್‌ಲೈನ್‌ನಲ್ಲೇ ಈ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಬೆಂಗಳೂರು(ಮಾ.04): ಹೊಸ ಶಾಸಗಿ ಶಾಲೆಗಳ ಆರಂಭ, ಶಾಲೆಗಳ ಮಾನ್ಯತೆ ನವೀಕರಣ, ನಿರಾಕ್ಷೇಪಣಾ ಪತ್ರಕ್ಕೆ ಅರ್ಜಿ ಸಲ್ಲಿಕೆ, ನೋಂದಣಿ ಸೇರಿದಂತೆ ವಿವಿಧ ಸೇವೆಗಳನ್ನು ಸರ್ಕಾರ ಆನ್‌ಲೈನ್‌ಗೊಳಿಸಿದ್ದು, ಕಾಲಮಿತಿಯಲ್ಲಿ ಈ ಸೇವೆಗಳನ್ನು ನೀಡಲು ಅಭಿವೃದ್ಧಿಪಡಿಸಿರುವ ತಂತ್ರಾಂಶಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶುಕ್ರವಾರ ನಗರದಲ್ಲಿ ಚಾಲನೆ ನೀಡಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಈ ಎಲ್ಲ ಸೇವೆಗಳಿಗಾಗಿ ಖಾಸಗಿ ಶಾಲೆಗಳ ಮುಖ್ಯಸ್ಥರು ಭೌತಿಕವಾಗಿ ಅರ್ಜಿ ಸಲ್ಲಿಸಬೇಕಾಗಿತ್ತು. ಹಲವು ಅಧಿಕಾರಿಗಳ ಹಂತದಲ್ಲಿ ಅನುಮೋದನೆ ಪಡೆದು ಸರ್ಕಾರಕ್ಕೆ ಬರಬೇಕಿತ್ತು. ಇದರಿಂದ ಈ ಸೇವೆಗಳ ಕಡತ ವಿಲೇವಾರಿ ಪ್ರಕ್ರಿಯೆ ತಡವಾಗುತ್ತಿದೆ ಜತೆಗೆ ಭ್ರಷ್ಟಾಚಾರಕ್ಕೆ ದಾರಿಯಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಹಾಗಾಗಿ ಈ ಸೇವೆಗಳನ್ನು ಆನ್‌ಲೈಗೊಳಿಸಿ ಹಲವು ನಿಯಮಗಳನ್ನು ಸರಳೀಕರಿಸಲಾಗಿದೆ. ಸಚಿವರ ಹಂತದಲ್ಲಿ ಆಗಬೇಕಿದ್ದ ಕೆಲಸಗಳನ್ನು ಜಿಲ್ಲಾ ಉಪನಿರ್ದೇಶಕ ಹಂತಕ್ಕೆ ಇಳಿಸಲಾಗಿದೆ. ಇನ್ಮುಂದೆ ಖಾಸಗಿ ಶಾಲೆಗಳು ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನಿಗದಿತ ಲಿಂಕ್ ಮೂಲಕ ಆನ್‌ಲೈನ್‌ನಲ್ಲೇ ಈ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ವಿವರಿಸಿದರು.
1ನೇ ಕ್ಲಾಸ್ ಪ್ರವೇಶಕ್ಕೆ 6 ವರ್ಷ: ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ
ಹೊಸ ಶಾಲೆಗೆ ಅರ್ಜಿ, ಮಾನ್ಯತೆ ನವೀಕರಣ, ಎನ್‌ಒಸಿ ಮತ್ತಿತರ ಸೇವೆಗಳಿಗೆ ಆಪ್‌ಲೈನ್‌ನಲ್ಲಿ ಇದ್ದ 8 ಹಂತಗಳ ಪರಿಶೀಲನೆಯನ್ನು ಈಗ ಆನ್‌ಲೈನ್‌ನಲ್ಲಿ 4 ಹಂತಕ್ಕೆ ಇಳಿಕೆ ಮಾಡಿದೆ. ಅದೇ ರೀತಿ 27 ದಿನಗಳ ಅವಧಿ ಇದೀಗ 17 ದಿನಕ್ಕೆ ತಗ್ಗಿದೆ. ಅರ್ಜಿಯ ಸ್ಥಿತಿಯ ಬಗ್ಗೆ ಎಸ್‌ಎಂಎಸ್ ಮೂಲಕ ಸಂಬಂಧಪಟ್ಟವರ ಮೊಬೈಲ್‌ಗೆ ಮಾಹಿತಿ ಸಿಗಲಿದೆ. ಶಾಲಾ ಆಡಳಿತ ಮಂಡಳಿಗಳು ಅರ್ಜಿ ಜತೆಗೆ ಜಿಯೋ ಟ್ಯಾಗ್‌ವುಳ್ಳ ದಾಖಲಾತಿಗಳನ್ನು ಸಲ್ಲಿಸಬೇಕು. ಎಲ್ಲ ಅರ್ಜಿದಾರರ ಸಂಸ್ಥೆಗಳು ಅಪ್‌ಲೋಡ್ ಮಾಡಿರುವ ಎಲ್ಲ ದಾಖಲಾತಿಗಳು ಸಾರ್ವಜನಿಕರ ಪರಿವೀಕ್ಷಣೆಗೆ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ಆದರೆ, ಅರ್ಜಿ ಸಲ್ಲಿಸುವ ವೇಳೆ ತಪ್ಪು ಮಾಹಿತಿ ನೀಡಿದರೆ ಪ್ರಸ್ತುತ ಇರುವ ದಂಡಕ್ಕಿಂತ 5 ಪಟ್ಟು ಹೆಚ್ಚು ದಂಡ ಪಾವತಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್‌ಸಿಂಗ್, ಆಯುಕ್ತ ವಿಶಾಲ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ.ಕಾವೇರಿ ಮತ್ತಿತರರಿದ್ದರು.
ಖಾಸಗಿ ಶಾಲಾ ಸಂಘಟನೆಗಳ ಸ್ವಾಗತ
ಖಾಸಗಿ ಶಾಲೆಗಳ ಸೇವೆಗಳನ್ನು ಸರ್ಕಾರ ಆನ್‌ಲೈನ್‌ಗೊಳಿಸಿರುವುದನ್ನು ಖಾಸಗಿ ಶಾಲಾ ಸಂಘಟನೆಗಳು ಸ್ವಾಗತಿಸಿವೆ. ಸರ್ಕಾರದ ಈ ಕ್ರಮದಿಂದ ಹೊಸ ಶಾಲೆ ಆರಂಭ, ಮಾನ್ಯತೆ ನವೀಕರಣ, ಎನ್‌ಒಸಿ ಇತ್ಯಾದಿ ಸೇವೆಗಳನ್ನು ಪಡೆಯಲು ಇಲಾಖೆಯ 30ರಿಂದ 40 ಅಧಿಕಾರಿಗಳ ಬಳಿಗೆ ಅಲೆಯುವುದು ತಪ್ಪಿದೆ. ಜತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ. ಇದಕ್ಕಾಗಿ ಇಲಾಖಾ ಸಚಿವರು ಮತ್ತು ಅಧಿಕಾರಿಗಳಿಗೆ ಅಭಿನಂದಿಸುತ್ತೇವೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.