ಸರ್ಕಾರಿ ಶಾಲೆಗೆ ಆನ್ಲೈನ್ ಕ್ಲಾಸ್ ಆರಂಭ : ದಿನಾಂಕ ನಿಗದಿ
- ಜು.1ರಿಂದ ಆನ್‌ಲೈನ್ ತರಗತಿಗಳ ಮೂಲಕ ಶೈಕ್ಷಣಿಕ ವರ್ಷ ಆರಂಭ
- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ
- ಜು.1ರಿಂದ 1ರಿಂದ 10ನೇ ತರಗತಿವರೆಗೆ ‘ಚಂದನ’ ವಾಹಿನಿಯಲ್ಲಿ ತರಗತಿ
ಬೆಂಗಳೂರು (ಜೂ.29): ಕೋವಿಡ್ ಕಾರಣ ಪ್ರಸಕ್ತ ಶೈಕ್ಷಣಿಕ ವರ್ಷದ (2021-2022) ಭೌತಿಕ ತರಗತಿಗಳನ್ನು ಆರಂಭಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜು.1ರಿಂದ ಆನ್‌ಲೈನ್ ತರಗತಿಗಳ ಮೂಲಕ ಶೈಕ್ಷಣಿಕ ವರ್ಷ ಆರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ವಿಕಾಸಸೌಧದಲ್ಲಿ ಸೋಮವಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅವರು, ಜು.1ರಿಂದ 1ರಿಂದ 10ನೇ ತರಗತಿವರೆಗೆ ‘ಚಂದನ’ ವಾಹಿನಿಯಲ್ಲಿ ತರಗತಿ ಆರಂಭಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಅಭಿವೃದ್ಧಿಪಡಿಸಿರುವ ‘ದೀಕ್ಷಾ’ ಪೋರ್ಟಲ್‌ನಲ್ಲಿ ಆಡಿಯೋ ಮತ್ತು ವಿಡಿಯೋ ಸಹಿತ 22 ಸಾವಿರ ವಿಷಯಗಳು ಇದರಲ್ಲಿವೆ. ಸಿಬಿಎಸ್‌ಸಿ ಮಾದರಿಯಲ್ಲಿಯೇ ತರಗತಿ ನಡೆಸಲು ಆನ್‌ಲೈನ್ ತರಗತಿ ಬೋಧನೆ ಮಾಡುವ ಸಂಬಂಧ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
SSLC ಪರೀಕ್ಷೆ: ಸುರೇಶ್ ಕುಮಾರ್ ನಡೆಗೆ ಆರೋಗ್ಯ ಸಚಿವ ಸುಧಾಕರ್ ಬೇಸರ ...
ಎಲ್ಲ ಶಾಲೆಗಳಲ್ಲಿಯೂ ಆನ್‌ಲೈನ್ ತರಗತಿಗಳನ್ನು ಆರಂಭಿಸಲಾಗುತ್ತದೆ. ಆನ್‌ಲೈನ್ ತರಗತಿಗಳಿಗೆ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಸಾಧನ ಇಲ್ಲದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಇಲಾಖೆ ಕಾರ್ಯನೋನ್ಮುಖವಾಗಿದೆ. ತಾಲೂಕು ಹಂತದಲ್ಲಿ ಮೊಬೈಲ್ ಬ್ಯಾಂಕ್ ಮಾಡಿ ಮೊಬೈಲ್ ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಮಕ್ಕಳ ವಾಣಿ- ಯೂಟ್ಯೂಬ್ ಚಾನೆಲ್‌ನಲ್ಲಿಯೂ ಪಾಠಗಳು ಲಭ್ಯವಿರಲಿದೆ, ಜು.1ರಿಂದ ಒಂದು ತಿಂಗಳ ಕಾಲ ಹಿಂದಿನ ವರ್ಷದ ತರಗತಿಯನ್ನು ಪುನರ್ ಮನನ ಮಾಡುವುದಕ್ಕಾಗಿ ‘ಸೇತುಬಂಧ’ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಸದ್ಯಕ್ಕೆ ಶಾಲೆ ಪ್ರಾರಂಭಿಸುವ ನಿರ್ಧಾರವನ್ನು ಕೈಬಿಟ್ಟ ಸರ್ಕಾರ, ಶಿಕ್ಷಣ ಸಚಿವರು ಹೇಳಿದ್ದು ಹೀಗೆ ...
ಭೌತಿಕ ತರಗತಿ ಆರಂಭಕ್ಕೆ ಕ್ರಿಯಾಯೋಜನೆ: ಭೌತಿಕ ತರಗತಿಗಳನ್ನು ಆರಂಭಿಸಲು ಕ್ರಿಯಾಯೋಜನೆ ರೂಪಿಸಬೇಕೆನ್ನುವುದು ಎಲ್ಲರ ಒಲವಾಗಿದ್ದು, ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ನಮ್ಮ ಮಕ್ಕಳು ಕಲಿಕೆಯಿಂದ ವಂಚಿತರಾಗದಿರಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಶಿಕ್ಷಣ ನೀಡುವ ಕುರಿತಂತೆ ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಮಕ್ಕಳ ತಜ್ಞರು ಸೇರಿದಂತೆ ಈ ಬಗ್ಗೆ ನಿರಂತರವಾದ ಸಲಹೆಗಳನ್ನು ನೀಡಲು ಶಿಕ್ಷಣ ಟಾಸ್ಕ್ ಫೋರ್ಸ್ ರಚನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಸಮಿತಿ ವರ್ಷ ಪೂರ್ತಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಅವಲೋಕಿಸಲಿದೆ. ಕಾಲಕಾಲಕ್ಕೆ ವರದಿಗಳನ್ನು ಸಲ್ಲಿಸಲಿದೆ ಎಂದರು.
ಶುಲ್ಕ ವಿಚಾರ ನೀವೇ ಇತ್ಯರ್ಥ ಮಾಡಿಕೊಳ್ಳಿ
ಖಾಸಗಿ ಶಾಲೆಗಳ ಶುಲ್ಕ ವಿಚಾರ ವಿಚಾರ ಕೋರ್ಟ್ ಮುಂದೆ ಪ್ರಸ್ತಾಪ ಮಾಡಿದ್ದೇವೆ. ಶಾಲೆಗಳು, ಪೋಷಕರು ಇಬ್ಬರಿಗೂ ಸಮಸ್ಯೆಯಿದೆ. ಹೀಗಾಗಿ, ಪೋಷಕರು ಹಾಗೂ ಖಾಸಗಿ ಶಾಲೆಗಳು ಕುಳಿತು ಮಾತನಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕಾಗುತ್ತದೆ.
- ಎಸ್.ಸುರೇಶ್ ಕುಮಾರ್, ಶಿಕ್ಷಣ ಸಚಿವ