6, 7, 8 ತರಗತಿ ಹಾಜರಾತಿ ಪ್ರಮಾಣ ಏರಿಕೆ
- ರಾಜ್ಯದಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭವಾಗಿ ಮೂರನೇ ದಿನ
- ಮೂರೂ ತರಗತಿಗಳ ಹಾಜರಾತಿ ಶೇ.45 ದಾಟಿದೆ
ಬೆಂಗಳೂರು (ಸೆ.09): ರಾಜ್ಯದಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭವಾಗಿ ಮೂರನೇ ದಿನವಾದ ಬುಧವಾರ ಈ ಮೂರೂ ತರಗತಿಗಳ ಹಾಜರಾತಿ ಶೇ.45 ದಾಟಿದೆ.
ಮೂರೂ ತರಗತಿಗಳಿಗೆ ಮೊದಲ ದಿನ ಶೇ.23ರಿಂದ 30ರಷ್ಟುವಿದ್ಯಾರ್ಥಿಗಳು ಹಾಜರಾಗಿದ್ದರು. ಎರಡನೇ ದಿನ ಇಲಾಖೆಯ ಸ್ಟೂಡೆಂಟ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ (ಎಸ್‌ಎಟಿಎಸ್) ತಂತ್ರಾಂಶದ ಸರ್ವರ್ ತಾಂತ್ರಿಕ ಸಮಸ್ಯೆ ಕಾರಣ ಹಾಜರಾತಿ ಮಾಹಿತಿ ಲಭ್ಯವಾಗಿರಲಿಲ್ಲ.
ಪ್ರವಾಹದಲ್ಲೇ ಮಕ್ಕಳಿಗೆ ಪಾಠ, ದೋಣಿಯೇ ಶಾಲೆ
ಇದೀಗ ಸರ್ವರ್ ದುರಸ್ತಿಗೊಳಿಸಿರುವ ಶಿಕ್ಷಣ ಇಲಾಖೆ ಮೂರನೇ ದಿನದ ಹಾಜರಾತಿ ಮಾಹಿತಿ ನೀಡಿದ್ದು ಮೂರೂ ತರಗತಿಗಳ ಹಾಜರಾತಿ ಶೇ.15ರಿಂದ 20ರಷ್ಟುಏರಿಕೆ ಕಂಡುಬಂದಿದೆ. ಬುಧವಾರ 6ನೇ ತರಗತಿಗೆ ಶೇ.46, 7ನೇ ತರಗತಿ ಶೇ.44.8 ಮತ್ತು 8ನೇ ತರಗತಿ ಶೇ.46.65 ರಷ್ಟುವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶೇ.48.71 ಶಾಲೆಗಳು ವಿದ್ಯಾರ್ಥಿಗಳ ಹಾಜರಾತಿಯ ಅಂಕಿ-ಅಂಶಗಳನ್ನು ಅಪ್‌ಲೋಡ್ ಮಾಡಿದ್ದು, ಶೇ.51.29 ಶಾಲೆಗಳು ಅಪ್‌ಲೋಡ್ ಮಾಡಿಲ್ಲ. ಇನ್ನು ಕಳೆದ ಸೆ.23ರಿಂದ ಆರಂಭಗೊಂಡಿರುವ 9 ಮತ್ತು 10ನೇ ತರಗತಿ ಹಾಜರಾತಿ ಕ್ರಮವಾಗಿ ಶೇ.59.62 ಹಾಗೂ ಶೇ.61.86ರಷ್ಟುದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.
ಶುಕ್ರವಾರ ಮತ್ತು ಶನಿವಾರ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಹಾಜರಾತಿ ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ. ಶನಿವಾರ ಎರಡನೇ ಶನಿವಾರ ರಜೆ ಇರುವುದರಿಂದ ಶುಕ್ರವಾರದಿಂದ ಭಾನುವಾರದ ವರೆಗೆ ವಿದ್ಯಾರ್ಥಿಗಳಿಗೆ ನಿರಂತರ ನಾಲ್ಕು ದಿನ ರಜೆ ಸಿಗಲಿದೆ. ಸೆ.13ರಂದು ಶಾಲೆಗಳು ಪುನಾರಂಭಗೊಳ್ಳಲಿದ್ದು ಅಂದು ಹಾಜರಾತಿ ಇನ್ನಷ್ಟುಹೆಚ್ಚಾಗಬಹುದು ಎನ್ನುತ್ತಾರೆ ಅಧಿಕಾರಿಗಳು.