Asianet Suvarna News Asianet Suvarna News

Teachers Transfer: 50,000 ಶಿಕ್ಷಕರಿಗಿಲ್ಲ ವರ್ಗಾವಣೆ ಭಾಗ್ಯ..!

*   ಶೇ.25ರಷ್ಟು ಶಿಕ್ಷಕ ಹುದ್ದೆ ಖಾಲಿ ಇರುವ ರಾಜ್ಯದ 53 ತಾಲೂಕು ವರ್ಗಾವಣೆ ವ್ಯಾಪ್ತಿಯಿಂದಲೇ ಹೊರಕ್ಕೆ
*   ನಿಗದಿತ ವಿಷಯ ಖಾಲಿ ಇಲ್ಲದಿದ್ದರೆ ಪತಿ-ಪತ್ನಿ ವರ್ಗಾವಣೆಯೂ ಇಲ್ಲ
*   ಮುಗಿಯುತ್ತಿಲ್ಲ ಗೊಂದಲ
 

No Transfer for 50000 Teachers in Karnataka grg
Author
Bengaluru, First Published Dec 20, 2021, 4:32 AM IST

ಲಿಂಗರಾಜು ಕೋರಾ

ಬೆಳಗಾವಿ(ಡಿ.20): ಶಿಕ್ಷಕರ ಹುದ್ದೆ ಶೇ.25ರಷ್ಟು ಖಾಲಿ ಇರುವ ರಾಜ್ಯದ(Karnataka) 53 ತಾಲೂಕುಗಳನ್ನು ವರ್ಗಾವಣೆ ವ್ಯಾಪ್ತಿಯಿಂದ ಹೊರಗಿಟ್ಟ ಪರಿಣಾಮ 50 ಸಾವಿರಕ್ಕೂ ಹೆಚ್ಚು ಶಿಕ್ಷಕರು(Teachers) ವರ್ಗಾವಣೆ ಭಾಗ್ಯದಿಂದ ವಂಚಿತರಾಗಿದ್ದಾರೆ. ಪತಿ-ಪತ್ನಿ ವರ್ಗಾವಣೆ(Transfer) ಪ್ರಕರಣದಲ್ಲಿ ತಾಲೂಕಿನೊಳಗೆ ನಿಗದಿತ ವಿಷಯ ಖಾಲಿಯಲ್ಲ ಎಂಬ ಕಾರಣಕ್ಕೆ ನೂರಾರು ಶಿಕ್ಷಕರಿಗೆ ವರ್ಗಾವಣೆ ಲಾಭ ದೊರೆಯುತ್ತಿಲ್ಲ. ಶಿಕ್ಷಕರಿಗೆ ಅನುಕೂಲವಾಗುವಂತೆ ವರ್ಗಾವಣೆ ಪ್ರಕ್ರಿಯೆ ನಡೆಸಲು ವರ್ಗಾವಣೆ ಕಾಯ್ದೆಯನ್ನು ಎರಡು ಬಾರಿ ರಾಜ್ಯ ಸರ್ಕಾರ(Government of Karnataka) ತಿದ್ದುಪಡಿ ಮಾಡಿದ್ದರೂ ಇಂತಹ ನ್ಯೂನತೆಗಳಿಂದಾಗಿ ವರ್ಗಾವಣೆ ಪ್ರಕ್ರಿಯೆ ಗೊಂದಲ ಬಗೆಹರಿಯುತ್ತಿಲ್ಲ. ಪ್ರಸ್ತುತ ನಡೆಯುತ್ತಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಾವಿರಾರು ಶಿಕ್ಷಕರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ.

53 ತಾಲೂಕಲ್ಲಿ ವರ್ಗ ಇಲ್ಲ:

ಮತ್ತಷ್ಟು ಹುದ್ದೆ ಕೊರತೆಯಾಗದಿರಲಿ ಎಂಬ ಕಾರಣಕ್ಕೆ ಈಗಾಗಲೇ ಶೇ.25ರಷ್ಟು ಶಿಕ್ಷಕ ಹುದ್ದೆ ಖಾಲಿ ಇರುವ ತಾಲೂಕುಗಳನ್ನು ವರ್ಗಾವಣೆ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ರಾಜ್ಯದಲ್ಲಿ ಇಂತಹ 53 ತಾಲೂಕುಗಳಿವೆ. ಇದರಿಂದಾಗಿ ಈ ತಾಲೂಕುಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 50 ಸಾವಿರಕ್ಕೂ ಹೆಚ್ಚು ಶಿಕ್ಷಕರು ಹಲವು ವರ್ಷಗಳಿಂದ ಒಂದೇ ಕಡೆ ಕಾರ್ಯ ನಿರ್ವಹಿಸಿದ್ದರೂ ವರ್ಗಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವೇ ಇಲ್ಲವಾಗಿದೆ ಎನ್ನುತ್ತಾರೆ ಶಿಕ್ಷಕರ ಸಂಘದ ಪ್ರತಿನಿಧಿಗಳು.

Lecturers Transfer: ಪಿಯು ಉಪನ್ಯಾಸಕರಿಗೆ ಸಂತಸದ ಸುದ್ದಿ ನೀಡಿದ ಸರ್ಕಾರ

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ(Kannada Prabha) ಮಾತನಾಡಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರು, ಶೇ.25ರಷ್ಟು ಹುದ್ದೆ ಖಾಲಿ ಇರುವ ತಾಲೂಕುಗಳನ್ನು ಬ್ಲಾಕ್‌ ಮಾಡದೆ ಆ ತಾಲ್ಲೂಕು ಶಿಕ್ಷಕರಿಗೂ ವರ್ಗಾವಣೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಪತಿ-ಪತ್ನಿಯರಿಗೂ ನಿರಾಸೆ!

ಹೊಸ ಕಾಯ್ದೆ ಪ್ರಕಾರ, ಪತಿ- ಪತ್ನಿ ಪ್ರಕರಣದ ವರ್ಗಾವಣೆಯಲ್ಲಿ ತನ್ನ ಪತಿ ಅಥವಾ ಪತ್ನಿ ಯಾವ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೋ ಆ ತಾಲೂಕಿನಲ್ಲಿ ಅವರು ಬೋಧಿಸುತ್ತಿರುವ ವಿಷಯದ ಹುದ್ದೆಗೆ ಮಾತ್ರ ವರ್ಗಾವಣೆ ಪಡೆಯಬಹುದು. ಆದರೆ, ಇಂತಹ ಬಹುತೇಕ ಪ್ರಕರಣದಲ್ಲಿ ಶಿಕ್ಷಕರಿಗೆ ತಾವು ಬೋಧಿಸುವ ವಿಷಯದ ಹುದ್ದೆ ಖಾಲಿ ಇಲ್ಲದೆ ಪತಿ/ಪತ್ನಿ ಒಂದೇ ತಾಲೂಕಿಗೆ ಬರುವುದು ಕಷ್ಟಕರವಾಗಿದೆ.

ಅನೇಕ ದಂಪತಿಗಳು(Couples) ಹಲವು ವರ್ಷಗಳಿಂದ ಬಹಳ ದೂರ ದೂರದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತವರು ಕೌಟುಂಬಿಕ ಸಮಸ್ಯೆ, ಮಕ್ಕಳ ಪಾಲನೆ, ವಯಸ್ಸಾದ ಪೋಷಕರ ಆರೈಕೆಯಂತಹ ಜವಾಬ್ದಾರಿಗಳನ್ನು ನಿರ್ವಹಿಸಲಾಗದೆ ಪರಿತಪಿಸುತ್ತಿದ್ದಾರೆ. ಅಂತಹವರಿಗೆ ಅನುಕೂಲವಾಗಲು ಕನಿಷ್ಠ ಪತಿ/ಪತ್ನಿ ಕಾರ್ಯನಿರ್ವಹಿಸುವ ತಾಲ್ಲೂಕಿನಲ್ಲಿ ಹುದ್ದೆ ಖಾಲಿ ಇಲ್ಲದಿದ್ದರೆ ಪಕ್ಕದ ತಾಲ್ಲೂಕಿಗೆ ವರ್ಗಾವಣೆಗೆ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಕೆ.ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು.

National Education Policy: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಯಾವಾಗ? ಸ್ಪಷ್ಟನೆ ಕೊಟ್ಟ ಸಚಿವ

ಮಿತಿ ನಿಗದಿ ಅವೈಜ್ಞಾನಿಕ:

ಒಟ್ಟಾರೆ ಮಂಜೂರಾದ ಹುದ್ದೆಗಳ ಆಧಾರದ ಮೇಲೆ ಶಿಕ್ಷಕರ ಒಟ್ಟಾರೆ ವರ್ಗಾವಣೆಗೆ ಸರ್ಕಾರ ಶೇ.15ರಷ್ಟು ಮಿತಿ ನಿಗದಿಪಡಿಸಿದೆ. ಇದರಿಂದ ಘಟಕದ ಹೊರಗೆ ಅಂದರೆ ಜಿಲ್ಲೆಯ ಹೊರಗೆ ವರ್ಗಾವಣೆಗೆ ಶಿಕ್ಷಕರಿಗೆ ಹೆಚ್ಚಿನ ಅವಕಾಶ ಸಿಗದಂತಾಗಿದೆ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಸುಮಾರು 75 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಜಿಲ್ಲೆಯೊಳಗಿನ ವರ್ಗಾವಣೆಗೆ ಇದುವರೆಗಿನ ಕೌನ್ಸೆಲಿಂಗ್‌ನಲ್ಲಿ(Counseling) ಕೇವಲ 7,923 ಮಂದಿ ಮಾತ್ರ ವರ್ಗಾವಣೆಯಾಗಿದ್ದಾರೆ. ಜಿಲ್ಲೆಯ ಹೊರಗೆ ವರ್ಗಾವಣೆ ಕೌನ್ಸೆಲಿಂಗ್‌ ಆರಂಭವಾಗಿದ್ದು ಗುರುವಾರದವರೆಗೆ 321 ಜನರಿಗೆ ಮಾತ್ರ ವರ್ಗಾವಣೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios