*  ಹಿಜಾಬ್‌ ತೆಗೆದು ಪರೀಕ್ಷೆಗೆ ಬನ್ನಿ, ಶೈಕ್ಷಣಿಕ ಜೀವನ ಹಾಳು ಮಾಡಿಕೊಳ್ಳದಿರಿ*  ವಿದ್ಯಾರ್ಥಿಗಳು ಹೈಕೋರ್ಟ್‌ ಆದೇಶ ಪಾಲಿಸಿ*  ಶಿವಮೊಗ್ಗದಲ್ಲಿ ಇಂದಿನಿಂದ ಶಾಲೆ?

ಬೆಂಗಳೂರು(ಫೆ.23): ಹಿಜಾಬ್‌(Hijab) ಕಾರಣದಿಂದ ವಿದ್ಯಾರ್ಥಿಗಳು(Students) ಪರೀಕ್ಷೆಗಳಿಗೆ ಗೈರು ಹಾಜರಾದರೆ ಅವರಿಗೆ ಬೇರೆ ಆಯ್ಕೆಗಳಿರುವುದಿಲ್ಲ. ಹಿಜಾಬ್‌ ತೆಗೆದು ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಯಾರೂ ಕೂಡ ಹಟ ಮಾಡಿ ಶೈಕ್ಷಣಿಕ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಮನವಿ ಮಾಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್‌ ವಿಚಾರದಲ್ಲಿ ಹೈಕೋರ್ಟ್‌(High Court) ನೀಡಿರುವ ಆದೇಶವನ್ನು ಕೆಲವರು ವಿರೋಧಿಸಿದ್ದಾರೆ. ಅಂತಹವರ ಪರವಾಗಿ ಕಾಂಗ್ರೆಸ್‌ನವರು ಮಾತನಾಡುವುದು ಸರಿಯಲ್ಲ. ವಿದ್ಯಾರ್ಥಿಗಳು ಹೈಕೋರ್ಟ್‌ ಆದೇಶ ಪಾಲಿಸಿ, ಶಾಲೆ, ಕಾಲೇಜು, ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್‌ ತೆಗೆದು ಬರಬೇಕು. ಹಿಜಾಬ್‌ಗಾಗಿ ಹಟ ಹಿಡಿದು ಕೂತರೆ ಇಡೀ ವರ್ಷದ ಶೈಕ್ಷಣಿಕ ಜೀವನ ವ್ಯರ್ಥವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

Hijab row: ಬಳೆ, ಸಿಂಧೂರ, ಕುಂಕುಮ ಧರಿಸಿ ಬಂದರೆ ವಿದ್ಯಾರ್ಥಿಗಳನ್ನು ತಡೆಯುವಂತಿಲ್ಲ

ಕೇಸು ಹಿಂಪಡೆದಿದ್ದರಿಂದ ಹತ್ಯೆ:

ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದವರ ಮೇಲಿನ ಪ್ರಕರಣಗಳನ್ನು ಈ ಹಿಂದಿನ ಸರ್ಕಾರಗಳು ವಾಪಸ್‌ ಪಡೆದಿದ್ದೇ ಮತ್ತೆ ಮತ್ತೆ ಹತ್ಯೆ ಪ್ರಕರಣಗಳು ಮರುಕಳಿಸಲು ಕಾರಣವಾಗಿದೆ ಎಂದು ಇದೇ ವೇಳೆ ಸಚಿವ ನಾಗೇಶ್‌ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಐದು ವರ್ಷದ ಅಧಿಕಾರಾವಧಿ ನೋಡಿದರೆ ಮಂಗಳೂರು, ಕೂರ್ಗ್‌ ಸೇರಿದಂತೆ ರಾಜ್ಯದ ವಿವಿಧೆಡೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಎಸಗಿದವರ ಮೇಲೆನ ಪ್ರಕರಣಗಳನ್ನು ವಾಪಸ್‌ ಪಡೆದಿದ್ದಾರೆ. ಇದರಿಂದ ಅವರಿಗೆ ಭಯವಿಲ್ಲದಂತಾಗಿದೆ ಎಂದರು.

ಶಿವಮೊಗ್ಗದಲ್ಲಿ ಇಂದಿನಿಂದ ಶಾಲೆ?

ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಹಿನ್ನೆಲೆಯಲ್ಲಿ ರಜೆ ನೀಡಲಾಗಿರುವ ಶಾಲೆ, ಕಾಲೇಜುಗಳನ್ನು ಪುನಾರಂಭಿಸುವ ಬಗ್ಗೆ ಪರಿಸ್ಥಿತಿ ನೋಡಿಕೊಂಡು ಅಲ್ಲಿನ ಜಿಲ್ಲಾಧಿಕಾರಿ ನಿರ್ಧಾರ ಮಾಡುತ್ತಾರೆ. ಪರಿಸ್ಥಿತಿ ಗಂಭೀರವಾಗಿದ್ದರಿಂದ ಒಂದು ದಿನ ರಜೆ ನೀಡಲಾಗಿತ್ತು. ಬುಧವಾರದಿಂದ ಯಥಾಸ್ಥಿತಿಯಲ್ಲಿ ಶಾಲೆ, ಕಾಲೇಜುಗಳನ್ನು ತೆರೆಯಲು ಜಿಲ್ಲಾಧಿಕಾರಿ ಪರಿಶೀಲಿಸಿ ಕ್ರಮ ವಹಿಸುತ್ತಾರೆ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ. 

ಅನುದಾನಿತ ಪ್ರೌಢಶಾಲೆ ಖಾಲಿ ಹುದ್ದೆ ಭರ್ತಿಗೆ ಕ್ರಮ

ರಾಜ್ಯದಲ್ಲಿ(Karnataka) 2015ರ ಡಿಸೆಂಬರ್‌ವರೆಗೆ ನಿವೃತ್ತಿ, ಮರಣ ಹಾಗೂ ರಾಜೀನಾಮೆಯಿಂದ ಖಾಲಿ ಇರುವ 2181 ಹುದ್ದೆಗಳ ಪೈಕಿ 257 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದು, ಉಳಿದ 1924 ಹುದ್ದೆಗಳ ಭರ್ತಿ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

ಹಿಜಾಬ್ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸ ಮಾಡಬೇಕಿದೆ, ಸಿಎಂಗೆ ಪತ್ರ ಬರೆದ ಸುರೇಶ್ ಕುಮಾರ್‌

ಬಿಜೆಪಿಯ(BJP) ಶಶೀಲ್‌ ಜಿ. ನಮೋಶಿ, ಪುಟ್ಟಣ್ಣ ಹಾಗೂ ಅರುಣ ಶಹಾಪುರ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ನೇಮಕಾತಿಗೆ(Recruitment) ಈಗಾಗಲೇ ಅನುಮತಿಸಿರುವ 257 ಹುದ್ದೆಗಳ ಪೈಕಿ 54 ಹುದ್ದೆಗಳನ್ನು ಆಯುಕ್ತಾಲಯಗಳ ಹಂತದಲ್ಲಿ ಭರ್ತಿ ಮಾಡಿದ್ದು, ಇನ್ನುಳಿದ 203 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ವಿವಿಧ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ವಿವರಿಸಿದರು.

ಅನುದಾನಿತ ಪದವಿಪೂರ್ವ ಕಾಲೇಜುಗಳಿಗೆ ಸಂಬಂಧಿಸಿದಂತೆ ಕಾರ್ಯಭಾರದ ಮೇಲೆ ಪರಿಗಣಿತವಾಗಿ ಒಟ್ಟು 998 ಹುದ್ದೆಗಳ ಪೈಕಿ 323 ಹುದ್ದೆಗಳನ್ನು ಈವರೆಗೆ ಭರ್ತಿ ಮಾಡಲಾಗಿದೆ. ಉಳಿದ ಖಾಲಿ ಇರುವ 675 ಹುದ್ದೆಗಳ ಪೈಕಿ 436 ಹುದ್ದೆಗಳಿಗೆ ಆಡಳಿತ ಮಂಡಳಿಗಳು ಈವರೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ನಿರ್ದೇಶನಾಲಯದ ಹಂತದಲ್ಲಿ 239 ಹುದ್ದೆಗಳ ಪ್ರಸ್ತಾವನೆಗಳನ್ನು ವಿವಿಧ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.