ಬೆಂಗಳೂರು (ಸೆ.21):  ಕೇಂದ್ರ ಸರ್ಕಾರವು ಅನ್‌ಲಾಕ್‌ 4.0 ಮಾರ್ಗಸೂಚಿಯಲ್ಲಿ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರಳಿ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ಅವಕಾಶ ನೀಡಿದ್ದರೂ ರಾಜ್ಯ ಸರ್ಕಾರ ಕೊನೇ ಕ್ಷಣದಲ್ಲಿ ವಿದ್ಯಾರ್ಥಿಗಳ ಭೇಟಿಗೆ ಅವಕಾಶ ನೀಡದಿರುವ ನಿರ್ಧಾರಕ್ಕೆ ಖಾಸಗಿ ಶಾಲೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ರಾಜ್ಯದ 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಸೆ.21ರಿಂದ ಶಾಲೆಗಳಿಗೆ ತೆರಳಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದರಿಂದ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಾಸ್ಕ್‌, ಸ್ಯಾನಿಟೈಸರ್‌, ಸ್ಯಾನಿಟೈಸರ್‌ ಬಳಕೆಯ ಸ್ಟ್ಯಾಂಡ್‌, ಥರ್ಮಲ್‌ ಸ್ಕಾ್ಯನರ್‌ಗಳನ್ನು ಖರೀದಿ ಮಾಡಲಾಗಿತ್ತು. ಕೊಠಡಿಗಳನ್ನು ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿತ್ತು.

ಅನುದಾನಿತ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ! ..

‘ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನೇ ರಾಜ್ಯ ಸರ್ಕಾರ ಕನ್ನಡಕ್ಕೆ ಅನುವಾದ ಮಾಡಿ ನೀಡಲಿದೆ ಎಂದು ಭಾವಿಸಿದ್ದೆವು. ಆದರೆ, ಶನಿವಾರ ರಾತ್ರಿ ಏಕಾಏಕಿ ಆದೇಶ ಹೊರಡಿಸಿ ಸೆಪ್ಟಂಬರ್‌ ಅಂತ್ಯದವರೆಗೆ ಶಾಲೆ/ಕಾಲೇಜು ತೆರೆಯಲು ಅವಕಾಶವಿಲ್ಲವೆಂದು ಹೇಳಿರುವುದು ಸರಿಯಾದ ಕ್ರಮವಲ್ಲ. ಮೊದಲೇ ಹೇಳಿದ್ದರೆ ನಾವು ಸುರಕ್ಷತಾ ಕ್ರಮಕ್ಕಾಗಿ ಬೇಕಾದ ಉತ್ಪನ್ನಗಳನ್ನು ಖರೀದಿ ಮಾಡುತ್ತಿರಲಿಲ್ಲ. ಇದರಿಂದ ಶಾಲೆಗಳಿಗೆ ಸಾವಿರಾರು ರುಪಾಯಿ ನಷ್ಟವಾಗಿದೆ ಇದಕ್ಕೆ ಯಾರು ಹೊಣೆ? ಸರ್ಕಾರ ತನ್ನ ನಿರ್ಧಾರವನ್ನು ಒಂದು ವಾರ ಮೊದಲೇ ತಿಳಿಸಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಬೇಸರ ಹೊರಹಾಕಿವೆ.

ಬ್ರೇಕಿಂಗ್: ಶಾಲಾ-ಕಾಲೇಜು ಆರಂಭದ ಬಗ್ಗೆ ಮಹತ್ವದ ಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ .

ತಾರತಮ್ಯವೇಕೆ?:  ‘ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮದಿಂದ ಮಕ್ಕಳ ಶಾಲಾ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ‘ವಿದ್ಯಾಗಮ’ ಯೋಜನೆಯಲ್ಲಿ ಸುರಕ್ಷತಾ ಕ್ರಮ ಅನುಸರಿಸದೆಯೇ ಬೋಧನೆ ಮಾಡುತ್ತಿರುವುದು ಎಷ್ಟುಸರಿ? ಸರ್ಕಾರಿ ಮತ್ತು ಖಾಸಗಿ ಶಾಲೆ ಮಕ್ಕಳು ಎಂಬ ತಾರತಮ್ಯ ಏಕೆ?’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್‌)ದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಶಿಕ್ಷಣ ಇಲಾಖೆಯನ್ನು ಪ್ರಶ್ನಿಸಿದ್ದಾರೆ.