ಅನುದಾನಿತ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ!
ಶಿಕ್ಷಕರ ನೇಮಕಕ್ಕೆ ಅಪರ ಆಯುಕ್ತಾಲಯದ ಅನವಶ್ಯಕ ಕೊಕ್ಕೆ| ಶುರುವಾಗಿದೆ ಸಿದ್ಧಲಿಂಗಯ್ಯ ಹಿರೇಮಠ ಹಠಾವೋ ಆಂದೋಲನ| ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗದೇ ಇತ್ತ ಮಕ್ಕಳಿಗೂ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡಲಾಗದೇ ಅನುದಾನಿತ ಶಿಕ್ಷಣ ಸಂಸ್ಥೆಗಳು ವಿಶ್ವಾಸ ಕಳೆದುಕೊಳ್ಳುತ್ತಿವೆ|
ಶಿವಾನಂದ ಗೊಂಬಿ
ಹುಬ್ಬಳ್ಳಿ(ಸೆ.20): ಉತ್ತರ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬ ದೂರು ಸಾಮಾನ್ಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ರಾರಯಂಕ್ ಗಗನ ಕುಸುಮ ಎನಿಸಿವೆ. ಈ ಕಳಂಕ ತೊಳೆಯಲು ಮುತುವರ್ಜಿ ವಹಿಸಬೇಕಾದ ಧಾರವಾಡದ ಶಿಕ್ಷಣ ಇಲಾಖೆಯ ಅಪರ ಆಯುಕ್ತಾಲಯವೇ ಗುಣಮಟ್ಟದ ಶಿಕ್ಷಣಕ್ಕೆ ಕಂಟಕವಾಗಿ ಪರಿಣಮಿಸಿದೆ!
ಮೊದಲಿನಿಂದಲೂ ಇಲ್ಲಿನ ಖಾಸಗೀ ಶಿಕ್ಷಣ ಸಂಸ್ಥೆಗಳು ವಿದ್ಯಾದಾನವನ್ನು ಅಕ್ಷರ ದಾಸೋಹ ಎಂದು ಭಾವಿಸಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತ ಬಂದಿವೆ. ಇಲ್ಲಿನ ಅಕ್ಷರಸ್ಥರ ಪ್ರಮಾಣ ಹೆಚ್ಚಲು ಖಾಸಗೀ ಸಂಸ್ಥೆಗಳ ಕೊಡುಗೆ ಅಪಾರ. ಶಿಕ್ಷಣದ ವಿಷಯದಲ್ಲಿ ಸರ್ಕಾರ ಮಾಡದೇ ಇರುವುದನ್ನು ಈ ಸಂಸ್ಥೆಗಳು ಮಾಡಿವೆ. ಆದರೆ ಇಂದು ಈ ಅಪರ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಬರುವ ಶಿರಸಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳೂ ಸೇರಿದಂತೆ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿನ 1200ಕ್ಕೂ ಅಧಿಕ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ 1000ಕ್ಕೂ ಅಧಿಕ ಶಿಕ್ಷಕ ಹುದ್ದೆಗಳು ಕಳೆದ ಐದಾರು ವರ್ಷಗಳಿಂದ ಖಾಲಿ ಉಳಿದಿವೆ.
ಈ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ತಮ್ಮಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾದ ಆಯಾ ಶಿಕ್ಷಣ ಸಂಸ್ಥೆಗಳಿಗೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಇಲ್ಲದ ನೆಪವೊಡ್ಡಿ ಅಡ್ಡಿಯನ್ನುಂಟು ಮಾಡುತ್ತಿದ್ದಾರಂತೆ. ಇದು ಶಿಕ್ಷಣ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿದ್ದು, ಆಯುಕ್ತರನ್ನೇ ಇಲ್ಲಿಂದ ವರ್ಗ ಮಾಡಿ ಎಂಬ ‘ಹಿರೇಮಠ ಹಠಾವೋ’ ಬೇಡಿಕೆ ಮುಂದಿಟ್ಟು ಹೋರಾಟಕ್ಕೆ ಮುಂದಾಗಿದ್ದಾರೆ.
ಬ್ರೇಕಿಂಗ್: ಶಾಲಾ-ಕಾಲೇಜು ಆರಂಭದ ಬಗ್ಗೆ ಮಹತ್ವದ ಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ
ಎಲ್ಲದಕ್ಕೂ ಆಯುಕ್ತರ ಕೊಕ್ಕೆ:
ಅನುದಾನಿತ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ಯಾವುದೇ ಹುದ್ದೆಯನ್ನು ನೇಮಕ ಮಾಡಿಕೊಳ್ಳಬೇಕೆಂದರೂ ಅಪರ ಆಯುಕ್ತರ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆದ ನಂತರವೇ ನೇಮಕಾತಿ ಮಾಡಿಕೊಳ್ಳಬೇಕು.
ಆದರೆ ಅಪರ ಆಯುಕ್ತರು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ. ಅನುಮತಿಗಾಗಿ ಅಪರ ಆಯುಕ್ತರನನ್ನು ಭೇಟಿಯಾದರೆ ಇಲ್ಲದ ಕೊಕ್ಕೆ ಹಾಕಿ ಮತ್ತೊಮ್ಮೆ ಬರುವಂತೆ ತಿಳಿಸುತ್ತಾರೆ. ಅವರು ಹೇಳಿದಂತೆ ಎಲ್ಲ ಬಗೆಯ ಮಾಹಿತಿ, ಕಡತಗಳನ್ನು ಸರಿಪಡಿಸಿಕೊಂಡು ಬಂದರೂ ಮತ್ತೆ ಏನಾದರೂ ಹೇಳಿ ತಿರಸ್ಕರಿಸುತ್ತಾರೆ. ಹೀಗೆ ಕೊಕ್ಕೆ ಹಾಕಿದಾಗ ಅದನ್ನೇ ಲಿಖಿತವಾಗಿ ಕೊಡಿ ಎಂದರೆ ಮೌಖಿಕವೇ ನನ್ನ ಉತ್ತರ ಎಂದು ಗದರುತ್ತಾರಂತೆ. ಹೀಗೆ ಹತ್ತಾರುಬಾರಿ ಅಲೆದಾಡಿಸಿ ಕೊನೆಗೆ ಆ ಹುದ್ದೆಗಳನ್ನೇ ರದ್ದುಪಡಿಸುತ್ತಾರೆ. ಇದರಿಂದಾಗಿ ಸಾವಿರಕ್ಕೂ ಅಧಿಕ ಶಿಕ್ಷಕ ಹುದ್ದೆಗಳು ಖಾಲಿಯೇ ಉಳಿದಿವೆ ಎಂದು ಮೂಲಗಳು ತಿಳಿಸಿವೆ.
ಹಾಗಂತ ಎಲ್ಲ ಶಿಕ್ಷಣ ಸಂಸ್ಥೆಗಳಿಗೇ ಇದೇ ರೀತಿ ಮಾಡುತ್ತಾರೆ ಎಂಬರ್ಥವಲ್ಲ. ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಹುದ್ದೆಗಳ ಭರ್ತಿಗೆ ಯಾವುದೇ ಬಗೆಯ ಸಮಸ್ಯೆ ಮಾಡುವುದಿಲ್ಲ, ಅದೇ ಸಣ್ಣ ಹಾಗೂ ಮಧ್ಯಮ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ತಡೆಯನ್ನುಂಟು ಮಾಡುತ್ತಿದ್ದಾರೆ ಎಂಬ ಆಕ್ರೋಶ ಕೇಳಿ ಬರುತ್ತಿದೆ.
ಶಿಕ್ಷಣಕ್ಕೆ ಹೊಡೆತ:
ಇದರಿಂದಾಗಿ ಅತ್ತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗದೇ ಇತ್ತ ಮಕ್ಕಳಿಗೂ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡಲಾಗದೇ ಅನುದಾನಿತ ಶಿಕ್ಷಣ ಸಂಸ್ಥೆಗಳು ವಿಶ್ವಾಸ ಕಳೆದುಕೊಳ್ಳುತ್ತಿವೆ. ಫಲಿತಾಂಶ ಕಡಿಮೆ ಬಂದರೆ ಇದೇ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಶಿಕ್ಷಕರ ನೇಮಕಕ್ಕೆ ಕೊಕ್ಕೆ ಹಾಕುತ್ತ ವರ್ಷಗಟ್ಟಲೇ ಅಲೆದಾಡಿಸಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಾದರೂ ಹೇಗೆ ಎನ್ನುವುದು ಸಂಸ್ಥೆಗಳ ಅಳಲು.
ಹಿರೇಮಠ ಹಠಾವೋ:
ಕಾನೂನು ಬಾಹೀರವಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ಅಡ್ಡಿಯನ್ನುಂಟು ಮಾಡಲಿ ಅಥವಾ ಆ ಹುದ್ದೆಗಳನ್ನು ರದ್ದುಪಡಿಸಲಿ. ಆದರೆ ವಿನಾಕಾರಣ ಹುದ್ದೆಗಳ ನೇಮಕಕ್ಕೆ ಅಡ್ಡಿಯನ್ನುಂಟು ಮಾಡುತ್ತಿರುವುದಕ್ಕೆ ಏಕೆ ಎಂದು ಪ್ರಶ್ನಿಸುತ್ತಿರುವ ಶಿಕ್ಷಣ ಸಂಸ್ಥೆಗಳು, ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ಇಲ್ಲಿಂದ ವರ್ಗ ಮಾಡಿ. ನಮಗೆ ಬೇರೆ ಆಯುಕ್ತರನ್ನು ಕೊಡಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದು, ತಮ್ಮ ಪ್ರಯತ್ನ ಮುಂದುವರಿಸಿವೆ.
ಹಿಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದಾಗ ಇದೇ ರೀತಿ ಸಾರ್ವಜನಿಕರು, ಜನಪ್ರತಿನಿಧಿಗಳ ಕೆಲಸ-ಕಾರ್ಯಗಳಿಗೆ ಕೊಕ್ಕೆ ಹಾಕಿ ಅಲ್ಲಿಂದ ಎತ್ತಂಗಡಿ ಮಾಡಿಸಿಕೊಂಡಿರುವ ಮೇಜರ್ ಎರಡನೇ ಬಾರಿ ‘ಹಿರೇಮಠ ಹಠಾವೋ’ ಆಂದೋಲನದ ಕೂಗಿಗೆ ಒಳಗಾಗಿದ್ದಾರೆ.
ಅಪರ ಆಯುಕ್ತಾಲಯದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ಕಿರಿಕಿರಿಯಾಗುತ್ತಿದೆ ಎಂಬ ದೂರುಗಳು ನನಗೂ ಬಂದಿವೆ. ನೇಮಕಾತಿ ವಿಷಯದಲ್ಲೂ ಕೊಂಚ ವಿಪರೀತವಾಗಿದೆ. ಇದು ಸರಿಯಲ್ಲ. ಕಾನೂನು ಪ್ರಕಾರ ಎಲ್ಲವೂ ಸರಿಯಿದ್ದಾಗ ಹುದ್ದೆಗಳ ನೇಮಕಾತಿಗೆ ತಡೆ ನೀಡುವುದು ಏಕೆ? ಅಪರ ಆಯುಕ್ತರು ಮಾಡುತ್ತಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದರೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಅಂಥವುಗಳನ್ನು ತಡೆಯಲಿ. ಆದರೆ ವಿನಾಕಾರಣ ಹುದ್ದೆಗಳ ನೇಮಕಾತಿಗೆ ಅಡ್ಡಿಯನ್ನುಂಟು ಮಾಡಬಾರದು. ಕೊಕ್ಕೆ ಹಾಕುವ ತಮ್ಮ ಧೋರಣೆ ಮುಂದುವರೆಸಿದರೆ ಅವರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರ್ಯದರ್ಶಿ ಎನ್.ಎನ್. ಸವಣೂರು ತಿಳಿಸಿದ್ದಾರೆ.
ನಮ್ಮ ಕಚೇರಿ ವ್ಯಾಪ್ತಿಯಲ್ಲಿ 1200 ಶಿಕ್ಷಣ ಸಂಸ್ಥೆಗಳು ಬರುತ್ತವೆ. ಕೆಲ ಸಂಸ್ಥೆಗಳು ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಳ್ಳುತ್ತಿವೆ. ಅವುಗಳಿಗೆ ಅಷ್ಟೇ ನಾನು ಅನುಮತಿ ನೀಡಲು ನಿರಾಕರಿಸಿದ್ದೇನೆ. ನಿಯಮಬಾಹಿರವಾಗಿದ್ದಕ್ಕೆ ಆ ರೀತಿ ಕ್ರಮ ಕೈಗೊಂಡಿದ್ದೇನೆ. ವಿನಾಕಾರಣ ಯಾವುದೇ ಸಂಸ್ಥೆಗಳಿಗೆ ಕಿರಿಕಿರಿಯನ್ನುಂಟು ಮಾಡಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದ್ದಾರೆ.