Asianet Suvarna News Asianet Suvarna News

SSLC ಫಲಿತಾಂಶ ಸಿದ್ಧ: ಪ್ರಕಟಿಸಲು ಶಿಕ್ಷಣ ಸಚಿವರೇ ಇಲ್ಲ..!

* ಸರ್ಕಾರದ ಅನುಮತಿಗಾಗಿ ಕಾಯುತ್ತಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
*  ಬೊಮ್ಮಾಯಿ ನೇತೃತ್ವದ ಹೊಸ ಸಚಿವ ಸಂಪುಟ ರಚನೆಯಾದರೂ ಇನ್ನೂ ಖಾತೆ ಹಂಚಿಕೆಯಾಗಿಲ್ಲ
*  ಆ.10ರೊಳಗೆ ಫಲಿತಾಂಶ ಪ್ರಕಟಿಸಲು ಮಂಡಳಿ ಸಿದ್ಧ 

No Minister of Education to Publish the SSLC Result in Karnataka grg
Author
Bengaluru, First Published Aug 6, 2021, 7:36 AM IST

ಬೆಂಗಳೂರು(ಆ.06): ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸಿದ್ಧವಾಗಿದ್ದು, ಪ್ರಕಟಿಸಲು ಸಕಲ ಸಿದ್ಧತೆ ಮಾಡಿಕೊಂಡಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಆದರೆ, ಖಾತೆ ಹಂಚಿಕೆಯಾಗಿ ಶಿಕ್ಷಣ ಇಲಾಖೆಗೆ ಹೊಸ ಸಚಿವರು ಬಂದ ಬಳಿಕವೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ಫಲಿತಾಂಶ ಸಂಪೂರ್ಣ ಸಿದ್ಧವಾಗಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಪ್ರಕಟಿಸಲು ನಾವು ಸಿದ್ಧ ಎಂದು ಮಂಡಳಿಯ ನಿರ್ದೇಶಕರು ಇಲಾಖೆಯ ಅಧಿಕಾರಿಗಳಿಗೆ ಗುರುವಾರ ನಡೆದ ಮಂಡಳಿಯ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಅಧಿಕಾರಿಗಳು ಫಲಿತಾಂಶ ಪ್ರಕಟಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರ ಅನುಮತಿ ನೀಡಿದರೆ ಆ.10ರೊಳಗೆ ಫಲಿತಾಂಶ ಪ್ರಕಟಿಸಲು ಮಂಡಳಿ ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ.

10ನೇ ವಯಸ್ಸಿಗೆ 10ನೇ ತರಗತಿ ಡಿಸ್ಟಿಂಕ್ಷನ್‌ನಲ್ಲಿ ಪಾಸು ಮಾಡಿದ ಬಾಲಕ

ಈ ಮಧ್ಯೆ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸಚಿವ ಸಂಪುಟ ರಚನೆಯಾದರೂ ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಖಾತೆ ಹಂಚಿಕೆಯಾದ ಬಳಿಕವಷ್ಟೇ ಫಲಿತಾಂಶ ಪ್ರಕಟಿಸಲು ಸರ್ಕಾರದ ಅನುಮತಿ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಒಂದು ವೇಳೆ, ಆ.10ರೊಳಗೆ ಖಾತೆ ಹಂಚಿಕೆಯಾಗಿ ಹೊಸ ಸಚಿವರು ಶಿಕ್ಷಣ ಇಲಾಖೆಯ ಅಧಿಕಾರ ವಹಿಸಿಕೊಂಡರೆ ಅದರ ಬೆನ್ನಲ್ಲೇ ಫಲಿತಾಂಶ ಪ್ರಕಟವಾಗುವುದು ನಿಶ್ಚಿತ ಎನ್ನಲಾಗಿದೆ.
 

Follow Us:
Download App:
  • android
  • ios