ಪರೀಕ್ಷೆ ಹಿನ್ನೆಲೆ ಮೂರು ತಿಂಗಳು ಲೋಡ್‌ಶೆಡ್ಡಿಂಗ್ ಇಲ್ಲ: ಎಸ್ಕಾಂ
ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ಪವರ್ ಕಟ್ ಇಲ್ಲ, ಬೇಸಿಗೆಯಲ್ಲಿ ರೈತರಿಗೆ ನೀರಿನ ಅಗತ್ಯದ ಹಿನ್ನೆಲೆಯಲ್ಲೂ ಈ ಕ್ರಮ.
ಬೆಂಗಳೂರು(ಮಾ.16): ವಿದ್ಯಾರ್ಥಿಗಳು ಹಾಗೂ ರೈತರ ಹಿತದೃಷ್ಟಿಯಿಂದ ಮುಂದಿನ ಮೂರು ತಿಂಗಳ ಅವಧಿವರೆಗೆ ಬೇಸಿಗೆ ಕಾಲದಲ್ಲಿ ರಾಜ್ಯಾದ್ಯಂತ ಯಾವುದೇ ರೀತಿಯ ಲೋಡ್ ಶೆಡ್ಡಿಂಗ್ ಮಾಡದಿರಲು ಎಲ್ಲಾ ಎಸ್ಕಾಂಗಳು ಒಮ್ಮತದ ನಿರ್ಧಾರ ಮಾಡಿವೆ. ಇತ್ತೀಚೆಗೆ ವಿದ್ಯುತ್ ವ್ಯವಹಾರ ಸಮಿತಿ ಅಧ್ಯಕ್ಷರು ಆಗಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ನಡೆದ ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಬೆಂಗಳೂರು ವ್ಯಾಪ್ತಿಯ ಬೆಸ್ಕಾಂ, ಮೈಸೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿಯ ಐದೂ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುತ್ತದೆ. ಆದಾಗ್ಯೂ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿವೆ. ಜತೆಗೆ ಇತ್ತೀಚೆಗೆ ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಮಾಡದಂತೆ ರೈತ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ಕೆಪಿಟಿಸಿಎಲ್ ನೌಕರರಿಗೆ ಶೆ.20 ವೇತನ ಹೆಚ್ಚಳ: ಹೋರಾಟಕ್ಕೂ ಮುನ್ನವೇ ಮುಷ್ಕರ ವಾಪಸ್
ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದಿನ ಮೂರು ತಿಂಗಳ ಅವಧಿಗೆ ಬೇಕಾಗುವ ವಿದ್ಯುತ್ ಬೇಡಿಕೆ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಲೋಡ್‌ಶೆಡ್ಡಿಂಗ್ ಮಾಡದೆ ವಿದ್ಯುತ್ ಪೂರೈಸಲು ಎಲ್ಲಾ ಎಸ್ಕಾಂಗಳು ನಿರ್ಧರಿಸಿವೆ ಎಂದು ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಮೂರು ತಿಂಗಳ ಅವಧಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಲಿದ್ದು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲು ಎಲ್ಲಾ ಎಸ್ಕಾಂಗಳು ನಿರ್ಧಾರ ಕೈಗೊಂಡಿವೆ. ಬೇಸಿಗೆ ಕಾಲದಲ್ಲಿ ವಿದ್ಯುತ್ ಖರೀದಿಗೆ ಬೇಕಾಗುವ ಹಣಕಾಸಿನ ವ್ಯವಸ್ಥೆಯನ್ನು ಸಿದ್ಧತೆ ಮಾಡಿಕೊಳ್ಳು ಇಂಧನ ಇಲಾಖೆ ಎಲ್ಲಾ ಎಸ್ಕಾಂಗಳಿಗೆ ಈಗಾಗಲೇ ಸೂಚನೆ ನೀಡಿದೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಬೇಸಿಗೆಯಲ್ಲಿ ಬೆಸ್ಕಾಂ ವಿದ್ಯುತ್ ಬೇಡಿಕೆ ವಿವರ:
ಮಾರ್ಚ್ ತಿಂಗಳಿಂದ ಮೇ ವರೆಗೆ ವಿದ್ಯುತ್ ಬೇಡಿಕೆ ಮತ್ತು ಬಳಕೆಯನ್ನು ಬೆಸ್ಕಾಂ ಈಗಾಗಲೇ ಅಂದಾಜಿಸಿದ್ದು, ಮಾರ್ಚ್ ತಿಂಗಳಲ್ಲಿ ದಿನದ ಗರಿಷ್ಠ ಬೇಡಿಕೆ 7600 ಮೆಗಾ ವ್ಯಾಟ್ ತಲಪುವ ಸಾಧ್ಯತೆ ಇದೆ. ಕಳೆದ 12 ದಿನಗಳಿಂದ ಸರಾಸರಿ ದಿನದ ವಿದ್ಯುತ್ ಬೇಡಿಕೆ 7400 ಮೆಗಾವ್ಯಾಟ್ ದಾಖಲಾಗಿದೆ. ಮಾಚ್‌ರ್ ತಿಂಗಳಲ್ಲಿ ದಿನದ ವಿದ್ಯುತ್ ಸರಾಸರಿ 132 ಮಿಲಿಯನ್ ಯೂನಿಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅದೇ ರೀತಿ ಏಪ್ರಿಲ… ತಿಂಗಳಲ್ಲಿ ದಿನ ವಿದ್ಯುತ್ ಬೇಡಿಕೆ 7650 ಮೆಗಾವ್ಯಾಟ್ ತಲುಪಲಿದ್ದು, ದಿನದ ವಿದ್ಯುತ್ ಬಳಕೆ ಸರಾಸರಿ 135 ಮಿಲಿಯನ್ ಯೂನಿಟ್ ಆಗಲಿದೆ. ಮೇ ತಿಂಗಳ ದಿನದ ವಿದ್ಯುತ್ ಬೇಡಿಕೆ 6800 ಮೆಗಾವ್ಯಾಟ್‌ಗೆ ಇಳಿಯಲಿದ್ದು, ದಿನದ ವಿದ್ಯುತ್ ಬಳಕೆ ಸರಾಸರಿ 124 ಮಿಲಿಯನ್ ಯುನಿಟ್ ಆಗಲಿದೆ ಎಂದು ತಿಳಿಸಿದ್ದಾರೆ.