CET ರಿಸಲ್ಟ್ ಬಂದು ಒಂದು ತಿಂಗಳಾದ್ರೂ ಕೌನ್ಸೆಲಿಂಗ್ ಇಲ್ಲ..!
* 1 ತಿಂಗಳಾದರೂ ವೇಳಾಪಟ್ಟಿ ಪ್ರಕಟ ಇಲ್ಲ
* ಸರ್ಕಾರಿ ಸೀಟು ಭರ್ತಿಯಾಗದೆ ಖಾಸಗಿ ಕಾಲೇಜು ಕೌನ್ಸೆಲಿಂಗ್ ಕಷ್ಟ
* ನವೆಂಬರ್ ಮೊದಲ ವಾರದಿಂದ ಕೌನ್ಸೆಲಿಂಗ್ ಆರಂಭಿಸಲು ದಿನಾಂಕ ನಿಗದಿ
ಬೆಂಗಳೂರು(ಅ.21): ಎಂಜಿನಿಯರಿಂಗ್(Engineering) ಸೇರಿದಂತೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸಿದ್ದ 2021ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET) ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇನ್ನೂ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿಲ್ಲ.
ಇದರಿಂದ ಖಾಸಗಿ ವೈದ್ಯಕೀಯ(Medical), ದಂತ ವೈದ್ಯಕೀಯ(Dental Medicine) ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ (COMED-K) ಮತ್ತು ಇತರೆ ಖಾಸಗಿ ವಿಶ್ವವಿದ್ಯಾನಿಲಯಗಳು(Private Universities) ತಮ್ಮ ವ್ಯಾಪ್ತಿಯ ಕಾಲೇಜಿನ(College) ಸೀಟುಗಳ ಭರ್ತಿಗೆ ಕೌನ್ಸೆಲಿಂಗ್(Counseling) ನಡೆಸುವ ಪ್ರಕ್ರಿಯೆಯನ್ನು ತಡ ಮಾಡುವಂತಾಗಿದೆ. ಕೆಸಿಇಟಿಗೂ ಮೊದಲೇ ತಮ್ಮ ಕಾಲೇಜು ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಿದರೆ ನಂತರ ಕೆಸಿಇಟಿ ಸೀಟು ಸಿಕ್ಕವರು ತಮ್ಮ ಕಾಲೇಜು ತೊರೆಯುತ್ತಾರೆ. ಮತ್ತೊಂದೆಡೆ ಕೌನ್ಸೆಲಿಂಗ್ ವಿಳಂಬದಿಂದ ತಮ್ಮ ಸೀಟುಗಳಿಗೆ ಪ್ರವೇಶ ಪಡೆಯಲು ಕಾಯುತ್ತಿರುವ ವಿದ್ಯಾರ್ಥಿಗಳು(Students) ಬೇರೆ ರಾಜ್ಯಕ್ಕೆ ವಲಸೆ ಹೋಗುವ ಆತಂಕವೂ ಎದುರಾಗಿದೆ ಎನ್ನುತ್ತಾರೆ ಖಾಸಗಿ ಕಾಲೇಜುಗಳ ಮುಖ್ಯಸ್ಥರು.
ಕರ್ನಾಟಕ ಸಿಇಟಿ ರಿಸಲ್ಟ್ ಪ್ರಕಟ: ಇಲ್ಲಿದೆ Rank ವಿಜೇತ ವಿದ್ಯಾರ್ಥಿಗಳ ಪಟ್ಟಿ
ಕೆಇಎ ವೇಳಾಪಟ್ಟಿಯ ಪ್ರಕಾರ, ಅ.28ರಂದು ದಾಖಲೆ ಪರಿಶೀಲನೆ(Document Verification) ಪೂರ್ಣಗೊಳ್ಳಬೇಕಿದೆ. ಆದರೆ, ಉನ್ನತ ಶಿಕ್ಷಣ ಇಲಾಖೆಯ(Department of Higher Education) ಮೂಲಗಳ ಪ್ರಕಾರ, ಸಮಯದ ಅಭಾವದಿಂದ ಈ ದಿನಾಂಕ ವಿಸ್ತರಿಸುವ ಸಾಧ್ಯತೆ ಇದೆ. ಈ ಮಧ್ಯೆ, ಕಾಮೆಡ್-ಕೆ ತನ್ನ ಸೀಟುಗಳ ಭರ್ತಿಗೆ ನವೆಂಬರ್ 18ರಿಂದ ಅರ್ಹ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭಿಸಲು ಯೋಜಿಸಿದ್ದು, ಕೆಇಎ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟವಾಗಲಿ ಎಂದು ಕಾಯುತ್ತಿದೆ. ನಾವು ಕೆಇಎಗೂ ಮುಂಚಿತವಾಗಿ ಕೌನ್ಸೆಲಿಂಗ್ ನಡೆಸಿದರೆ, ನಂತರ ಸಿಇಟಿ ಕೌನ್ಸೆಲಿಂಗ್‌ನಲ್ಲಿ ಸೀಟು ದೊರೆತವರು ಹಾಗೂ ಶುಲ್ಕದ ಕಾರಣದಿಂದ ವಿದ್ಯಾರ್ಥಿಗಳು ಕಾಮೆಡ್-ಕೆ ಸೀಟುಗಳನ್ನು ತ್ಯಜಿಸುವ ಸಾಧ್ಯತೆಗಳಿವೆ. ಈ ಕಾರಣದಿಂದಲೇ ನಾವು ಕೆಸಿಇಟಿಯ ಮೊದಲ ಸುತ್ತಿನ ಸೀಟು ಹಂಚಿಕೆಗೆ ಕಾಯುತ್ತಿದ್ದೇವೆ. ನಂತರ ನಮ್ಮ ಕೌನ್ಸೆಲಿಂಗ್ ದಿನಾಂಕ ಪ್ರಕಟಿಸುತ್ತೇವೆ ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಕುಮಾರ್ ತಿಳಿಸಿದ್ದಾರೆ.
ಪಿಇಎಸ್ ವಿಶ್ವವಿದ್ಯಾಲಯದ(PES University) ಕುಲಾಧಿಪತಿ ಪ್ರೊ.ಎಂ.ಆರ್. ದೊರೆಸ್ವಾಮಿ ಅವರು ಕೂಡ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಕೆಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ. ಕೆಸಿಇಟಿ ಕೌನ್ಸೆಲಿಂಗ್ ತಡಮಾಡಿದರೆ ಸರ್ಕಾರಿ, ಖಾಸಗಿ ಎಲ್ಲ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಹಾಗೂ ಇಡೀ ವರ್ಷದ ಶೈಕ್ಷಣಿಕ ಚುಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಇತ್ತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಕೂಡ ಕೆಸಿಇಟಿ ಕೌನ್ಸೆಲಿಂಗ್ ಬೇಗ ಆರಂಭಿಸಲು ಕೆಇಎ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ನವೆಂಬರ್ ಮೊದಲ ವಾರ ಶುರು
ಕೋವಿಡ್‌ನಿಂದ(Covid19) ಈ ಬಾರಿ ಸಿಇಟಿ ಪರೀಕ್ಷೆ ವಿಳಂಬವಾಯಿತು. ಆದರೂ. ಆ.28 ಮತ್ತು 29ರಂದು ನಡೆದ ಪರೀಕ್ಷಾ ಫಲಿತಾಂಶವನ್ನು(Result) ಕೇವಲ ಇಪ್ಪತ್ತೇ ದಿನದಲ್ಲಿ ನೀಡಿದ್ದೇವೆ. ನಂತರದ ಒಂದು ತಿಂಗಳಲ್ಲಿ ದಾಖಲೆ ಪರಿಶೀಲನೆ ಮುಗಿಸುತ್ತಿದ್ದೇವೆ. ನವೆಂಬರ್ ಮೊದಲ ವಾರದಿಂದ ಕೌನ್ಸೆಲಿಂಗ್ ಆರಂಭಿಸಲು ದಿನಾಂಕ ನಿಗದಿಯಾಗಿದೆ. ಶೀಘ್ರ ಪ್ರಕಟಿಸುತ್ತೇವೆ. ಕೆಇಎ ಪರೀಕ್ಷೆ, ದಾಖಲೆ ಪರಿಶೀಲನೆ, ಕೌನ್ಸೆಲಿಂಗ್ ಎಲ್ಲೂ ವಿಳಂಬ ಮಾಡುತ್ತಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್. ತಿಳಿಸಿದ್ದಾರೆ.