ಮುಂದಿನ ವರ್ಷ ಪಠ್ಯ ಸಂಪೂರ್ಣ ಬದಲು: ಸಚಿವ ಮಧು ಬಂಗಾರಪ್ಪ
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಪುಸ್ತಕ ಸಂಪೂರ್ಣ ಪರಿಷ್ಕರಿಸಲಾಗುವುದು. ಪಠ್ಯದಲ್ಲಿನ ಆಕ್ಷೇಪಾರ್ಹ ಪದಗಳು, ವಾಕ್ಯಗಳನ್ನೂ ಬದಲಿಸಲಾಗುತ್ತದೆ. ಆ ಮೂಲಕ ಮಕ್ಕಳಿಗೆ ಜಾತೀಯತೆಯಿಲ್ಲದ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರು (ಜು.29): ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಪುಸ್ತಕ ಸಂಪೂರ್ಣ ಪರಿಷ್ಕರಿಸಲಾಗುವುದು. ಪಠ್ಯದಲ್ಲಿನ ಆಕ್ಷೇಪಾರ್ಹ ಪದಗಳು, ವಾಕ್ಯಗಳನ್ನೂ ಬದಲಿಸಲಾಗುತ್ತದೆ. ಆ ಮೂಲಕ ಮಕ್ಕಳಿಗೆ ಜಾತೀಯತೆಯಿಲ್ಲದ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ಗಾಂಧಿ ಭವನದಲ್ಲಿ ಶುಕ್ರವಾರ ಕರ್ನಾಟಕಕ್ಕೆ ಜನಪರ ಶಿಕ್ಷಣ ನೀತಿ ರೂಪಿಸಲು ಆಯೋಜಿಸಲಾಗಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಹಿಂದಿನ ಸರ್ಕಾರ ಪಠ್ಯ ಪುಸ್ತಕದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ಹೊಸದಾಗಿ ಪದಗಳು, ವಾಕ್ಯ, ಪ್ಯಾರಾ ಹೀಗೆ ಸಾಕಷ್ಟುಅಂಶಗಳನ್ನು ಸೇರಿಸಿದ್ದಾರೆ. ತಮಗೆ ಬೇಕಾದಂತೆ ಪಠ್ಯವನ್ನು ಸಿದ್ಧಪಡಿಸಿ ಮಕ್ಕಳಿಗೆ ನೀಡಿದ್ದಾರೆ. ಹೀಗೆ ಆಕ್ಷೇಪಾರ್ಹ ಅಂಶಗಳನ್ನು ಗುರುತಿಸಲಾಗಿದೆ. ಆದರೆ, ನಾನು ಸಚಿವನಾಗುವುದಕ್ಕೂ ಮುನ್ನವೇ ಈ ಬಾರಿಯ ಶೈಕ್ಷಣಿಕ ವರ್ಷ ಆರಂಭವಾಗಿ ಮಕ್ಕಳಿಗೆ ಪಠ್ಯಪುಸ್ತಕ ತಲುಪಿತ್ತು. ಹೀಗಾಗಿ ಈ ವರ್ಷ ಪಠ್ಯ ಪುಸ್ತಕ ಸಂಪೂರ್ಣ ಬದಲಾವಣೆ ಸಾಧ್ಯವಾಗದೆ, ಕೇವಲ ಒಂದು ಪಾಠವನ್ನು ಮಾತ್ರ ಬದಲಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೂ ಮುನ್ನ ತಜ್ಞ ಸಮಿತಿ ನೇಮಿಸಿ ಪಠ್ಯಪುಸ್ತಕದಲ್ಲಿನ ಆಕ್ಷೇಪಾರ್ಹ ಅಂಶಗಳನ್ನೆಲ್ಲ ತೆಗೆದು ಹಾಕಲಾಗುವುದು’ ಎಂದರು.
ಕಾಂಗ್ರೆಸ್ ಶಾಸಕರು, ಸಚಿವರ ಮಧ್ಯೆ ಸಮನ್ವಯತೆಯೇ ಇಲ್ಲ: ಬೊಮ್ಮಾಯಿ
ಉತ್ತಮ ಶಿಕ್ಷಣ ನೀತಿ: ರಾಜ್ಯದ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ರೀತಿಯ ಶಿಕ್ಷಣ ನೀತಿ ರೂಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಸೂಚನೆ ನೀಡಿದ್ದಾರೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೂ ಅದನ್ನು ತಿಳಿಸಲಾಗಿತ್ತು. ಅದರಂತೆ ಈಗ ಮಕ್ಕಳ ಭವಿಷ್ಯ ರೂಪಿಸುವ, ಧರ್ಮ, ಜಾತಿಯ ಹಂಗಿಲ್ಲದ ಉತ್ತಮ ಶಿಕ್ಷಣ ನೀಡುವ ನೀತಿ ರೂಪಿಸಲಾಗುತ್ತಿದೆ. ಅದಕ್ಕಾಗಿ ಶಿಕ್ಷಣ ತಜ್ಞರು ಸೇರಿದಂತೆ ಮತ್ತಿತರರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಮಾತನಾಡಿ, ಹೊಸ ಶಿಕ್ಷಣ ನೀತಿ ಮೂಲಕ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸಲಾಗಿತ್ತು.
ಕಳೆದೆರಡು ವರ್ಷಗಳಿಂದ ರಾಜ್ಯದ ಉನ್ನತ ಶಿಕ್ಷಣದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಆದರೆ, ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಸರ್ಕಾರ ಒದಗಿಸಿಲ್ಲ. ಈಗ ರಾಜ್ಯಕ್ಕೆ ಹೊಸ ಶಿಕ್ಷಣ ನೀತಿ ಜಾರಿಗೆ ತಂದು ವ್ಯವಸ್ಥೆಯನ್ನು ಬದಲಿಸಬೇಕಿದೆ ಎಂದು ಹೇಳಿದರು. ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಎ.ಮುರಿಗೆಪ್ಪ, ಕರ್ನಾಟಕ ಪ್ರಾದೇಶಿಕ ಶಿಕ್ಷಣ ಆಯೋಗದ ಕಾರ್ಯದರ್ಶಿ ಡಾ. ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ಶಿಕ್ಷಣ ತಜ್ಞರಾದ ಡಾ. ಮೈಕಲ್ ವಿಲಿಯಮ್ಸ್, ಡಾ. ಮೈಕಲ್ ವಿಲಿಯಮ್ಸ್, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಇತರರಿದ್ದರು.
ಭವಿಷ್ಯಕ್ಕೆ ನೆರವಾಗುವ ನೀತಿ ರೂಪಿಸಲು ಸಲಹೆ: ಶೈಕ್ಷಣಿಕ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ಶಿಕ್ಷಣ ತಜ್ಞರು, ರಾಜ್ಯ ಸರ್ಕಾರ ರೂಪಿಸಲು ಹೊರಟಿರುವ ಹೊಸ ಶಿಕ್ಷಣ ನೀತಿಯಲ್ಲಿ ಸಮಾನತೆ, ವೈಜ್ಞಾನಿಕ, ಜನತಾಂತ್ರಿಕ, ಧರ್ಮನಿರಪೇಕ್ಷ ಶಿಕ್ಷಣ ನೀಡುವುದಕ್ಕೆ ಒತ್ತು ನೀಡಬೇಕು. ಮಕ್ಕಳ ಭವಿಷ್ಯ ರೂಪಿಸುವಂತಹ ಶಿಕ್ಷಣ ಪದ್ಧತಿ ಜಾರಿಯಾಗಬೇಕು. ಮಾತೃ ಭಾಷೆಯ ಶಿಕ್ಷಣದ ಜತೆಗೆ ಇತರ ಭಾಷೆಗಳಲ್ಲೂ ಮಕ್ಕಳು ಪರಿಣಿತಿ ಹೊಂದುವಂತೆ ಮಾಡಬೇಕು. ಮೌಲ್ಯಾಧಾರಿತ, ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಮುಂಬರುವ ದಿನಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಮಲ್ಲಿಕಾರ್ಜುನ ಖರ್ಗೆ
ಶೂದ್ರರನ್ನು ಶಿಕ್ಷಣ ವಂಚಿತರನ್ನಾಗಿಸಬೇಕು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ ರಚಿಸಿದೆ. ಅದರಲ್ಲಿ ಹಿಂದುಳಿದ ಸಮುದಾಯಗಳಿಗೆ ಮಾರಕವಾಗುವಂತಹ ಅನೇಕ ಅಂಶಗಳಿವೆ. ಶಿಕ್ಷಣದಲ್ಲಿ ಹಳದಿ ಕಣ್ಣುಗಳು ಇರದಂತೆ ಮಾಡಲು, ಕೋಮುಸೌಹಾರ್ದತೆಯನ್ನು ಮಕ್ಕಳಿಗೆ ತಿಳಿಸುವಂತಹ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ರೂಪಿಸಲಿದೆ. ವೈಜ್ಞಾನಿಕ, ವೈಚಾರಿಕತೆಯ ಶಿಕ್ಷಣ ನೀಡಲು ಒತ್ತು ನೀಡಲಾಗುವುದು.
-ಡಾ. ಎಚ್.ಸಿ.ಮಹದೇವಪ್ಪ, ಸಮಾಜಕಲ್ಯಾಣ ಸಚಿವ