₹300 ಕೋಟಿ ಗಳಿಕೆಗೆ ಸ್ಕೆಚ್‌ ಹಾಕಿದ್ದ ನೀಟ್‌ ದಂಧೆಕೋರರು..!

ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯಲ್ಲಿ 24 ವರ್ಷಗಳಿಂದ ತೊಡಗಿಸಿಕೊಂಡಿರುವ ಆರೋಪಿ ಬಿಜೇಂದರ್‌ ಗುಪ್ತಾ ಎಂಬಾತ ಮಾರ್ಚ್‌ನಲ್ಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗುವ ಬಗ್ಗೆ ಟೀವಿ ಸ್ಟಿಂಗ್‌ ಆಪರೇಶನ್‌ ಒಂದರಲ್ಲಿ ಹೇಳಿದ್ದ. ಆ ವಿಡಿಯೋಗಳು ಈಗ ವೈರಲ್‌ ಆಗಿವೆ.

NEET Scam Accused who Planned Profit of 300 Crore grg

ನವದೆಹಲಿ(ಜೂ.26):  ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಮೇನಲ್ಲಿ ನಡೆಸಲಾದ ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಲಿದೆ ಎಂದು ಮಾರ್ಚ್‌ನಲ್ಲೇ ವ್ಯಕ್ತಿಯೊಬ್ಬ ಭವಿಷ್ಯ ನುಡಿದಿದ್ದ ಹಾಗೂ 300 ಕೋಟಿ ರು.ಗೆ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಸ್ಕೆಚ್  ಹಾಕಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯಲ್ಲಿ 24 ವರ್ಷಗಳಿಂದ ತೊಡಗಿಸಿಕೊಂಡಿರುವ ಆರೋಪಿ ಬಿಜೇಂದರ್‌ ಗುಪ್ತಾ ಎಂಬಾತ ಮಾರ್ಚ್‌ನಲ್ಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗುವ ಬಗ್ಗೆ ಟೀವಿ ಸ್ಟಿಂಗ್‌ ಆಪರೇಶನ್‌ ಒಂದರಲ್ಲಿ ಹೇಳಿದ್ದ. ಆ ವಿಡಿಯೋಗಳು ಈಗ ವೈರಲ್‌ ಆಗಿವೆ.

ಪರೀಕ್ಷೆ ಹಿಂದಿನ ದಿನವೇ NEET 2024 ಪ್ರಶ್ನೆಪತ್ರಿಕೆ ಸೋರಿಕೆ!

ಈತ 2023ರ ಒಡಿಶಾ ನೇಮಕಾತಿ ಆಯೋಗ, ಬಿಹಾರ ಲೋಕಸೇವಾ ಆಯೋಗ ಹಾಗೂ ಮಧ್ಯಪ್ರದೇಶ ಲೋಕಸೇವಾ ಆಯೋಗದ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಗಳಲ್ಲಿ ಭಾಗಿಯಾಗಿದ್ದಾನೆ. 24 ವರ್ಷಗಳಿಂದ ಪ್ರಶ್ನೆಪತ್ರಿಕೆ ಸೋರಿಕೆಯನ್ನೇ ಕಸುಬು ಮಾಡಿಕೊಂಡಿದ್ದಾನೆ.

ಆಂಗ್ಲ ವಾಹಿನಿಯೊಂದು ರಹಸ್ಯ ಕಾರ್ಯಾಚರಣೆ ನಡೆಸಿ ಬಿಜೇಂದರ್‌ನನ್ನು ಮಾತಿಗೆ ಎಳೆದಿತ್ತು. ಆ ವೇಳೆ ಆತ, 700 ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿತ್ತು. ದಂಧೆಕೋರರ ಗುರಿ 200ರಿಂದ 300 ಕೋಟಿ ರು. ಆಗಿತ್ತು ಎಂದು ಹೇಳಿದ್ದಾನೆ. ಅಲ್ಲದೆ ಪ್ರಶ್ನೆಪತ್ರಿಕೆಗಳನ್ನು ಸಾಗಿಸುವ ವೇಳೆಯೇ ಅವನ್ನು ಸೋರಿಕೆ ಮಾಡಲಾಗುತ್ತದೆ ಎಂದಿದ್ದಾನೆ.

ನೀಟ್‌ ಅಕ್ರಮ ಆರೋಪಿಯಾಗಿರುವ ಸಂಜೀವ್‌ ಮುಖಿಯಾ (ಈಗ ನಾಪತ್ತೆಯಾಗಿದ್ದಾನೆ) ಹಾಗೂ ಬಂಧಿತ ವಿಶಾಲ್‌ ಚೌರಾಸಿಯಾ ತನಗೆ ಗೊತ್ತು ಎಂದು ಬಿಜೇಂದರ್‌ ಹೇಳಿಕೊಂಡಿದ್ದಾನೆ.

Latest Videos
Follow Us:
Download App:
  • android
  • ios