ನೀಟ್ ಪರೀಕ್ಷೆಯಿಂದ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ನುಚ್ಚು ನೂರಾಗುತ್ತಿದೆ: ಹೆಚ್‌ಡಿಕೆ ಆರೋಪ
ನೀಟ್ ಪರೀಕ್ಷೆ ಬಡವರು, ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ನುಚ್ಚು ನೂರಾಗುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರು(ಮಾ.3): ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ (ನೀಟ್) ಬಡವರು, ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ನುಚ್ಚು ನೂರಾಗುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಉಕ್ರೇನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣಕ್ಕೆ ತಗಲುವ ವೆಚ್ಚದ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೀಡಿರುವ ಹೇಳಿಕೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ (ನೀಟ್) ಬಡವರು, ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ನೀಟ್ ಬಂದ ಬಳಿಕ ಟ್ಯೂಷನ್ ದಂಧೆ ಮಿತಿ ಮೀರಿದೆ. ಕೇಂದ್ರ ಸರ್ಕಾರವೇ ಅದಕ್ಕೆ ಪ್ರೋತ್ಸಾಹ ನೀಡುತ್ತಿರುವಂತಿದೆ. ಕೇಂದ್ರ ಸಚಿವರ ಹೇಳಿಕೆಯು ಅನೇಕ ಗುಮಾನಿಗಳಿಗೆ ಕಾರಣವಾಗಿದೆ’ ಎಂದು ಹೇಳಿದ್ದಾರೆ.
ನೀಟ್ ಮೂಲಕ ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮೀಸಲಿಡಲಾಗಿದೆ. ಬಡವರು, ಮಧ್ಯಮ ವರ್ಗದವರು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಅವರಂತಹ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶೇಕಡ 97ರಷ್ಟು ಅಂಕ ಗಳಿಸಿದ್ದರೂ ನೀಟ್‌ನಲ್ಲಿ ಅವರಿಗೆ ಸೀಟು ಸಿಗುತ್ತಿಲ್ಲ. ಈ ಅನ್ಯಾಯಕ್ಕೆ ಅಂತ್ಯ ಹಾಡಬೇಕಿದೆ ಎಂದು ಹೇಳಿದ್ದಾರೆ.
ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಬಂದ ಶೇ. 90ರಷ್ಟು ಮಂದಿ ನೀಟ್ ಪಾಸಾಗುವುದಿಲ್ಲ: ಪ್ರಹ್ಲಾದ ಜೋಶಿ
‘ಭಾರತದಲ್ಲಿ ನಿರಾಕರಿಸಲಾದ ಅವಕಾಶ ಹುಡುಕಿಕೊಂಡು ನವೀನ್ ಉಕ್ರೇನ್ ಗೆ ಹೋಗಿದ್ದರು. ಆದರೆ ಅಲ್ಲಿ ರಷ್ಯಾ ದಾಳಿಗೆ ಬಲಿಯಾಗಿದ್ದಾರೆ. ನೀಟ್‌ನಿಂದಾಗಿಯೇ ನವೀನ್ ಸಾವು ಸಂಭವಿಸಿದೆ. ಅಲ್ಲಿ ಕಲಿತು ಇನ್ನೊಬ್ಬರ ಜೀವ ಉಳಿಸುವ ಹಂಬಲದೊಂದಿಗೆ ತೆರಳಿದ್ದ ನವೀನ್ ಜೀವ ಕಳೆದುಕೊಂಡಿರುವುದು ‘ವಿಶ್ವ ಗುರು’ ಆಗಬೇಕೆಂಬ ಭಾರತದ ‘ಆತ್ಮಸಾಕ್ಷಿ’ಗೆ ಪ್ರಶ್ನೆಯಾಗಿದೆ. ಇದು ಭಾರತದ ಶೈಕ್ಷಣಿಕ ಅರಾಜಕತೆಗೆ ಸಾಕ್ಷಿ. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಬೊಬ್ಬೆ ಹೊಡೆಯುತ್ತಿರುವ ಕೇಂದ್ರ ಸರ್ಕಾರವು ಶಿಕ್ಷಣದ ವ್ಯಾಪಾರೀಕರಣದ ಕುರಿತು ಶುದ್ಧ ಅಂತಃಕರಣದಿಂದ ಆಲೋಚಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.