ನೀಟ್ ಪರೀಕ್ಷಾ ಹಗರಣದ ಕಿಂಗ್‌ಪಿನ್ ಅಂದರ್: ಸಾಲ್ವರ್ ಗ್ಯಾಂಗ್ ಹೆಸರಿನಲ್ಲಿ ಅನ್ಸರ್ ಲೀಕ್ ಮಾಡ್ತಿದ್ದ ಆರೋಪಿ
ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೋರಿ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರೆ ಈ ಪ್ರಕರಣ ಮಾಸ್ಟರ್ ಮೈಂಡ್ ರವಿ ಅತ್ರಿಯನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಬಂಧಿಸಿದೆ.
ನವದೆಹಲಿ: ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೋರಿ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರೆ ಈ ಪ್ರಕರಣ ಮಾಸ್ಟರ್ ಮೈಂಡ್ ರವಿ ಅತ್ರಿಯನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಬಂಧಿಸಿದೆ. 2024ರ ನೀಟ್ ಯುಜಿ ಪರೀಕ್ಷೆಯಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷ ಬರೆದ ಒಟ್ಟು 67 ವಿದ್ಯಾರ್ಥಿಗಳು 720 ಅಂಕ ಗಳಿಸಿದ ನಂತರ ಈ ಪರೀಕ್ಷೆಯಲ್ಲಿ ಅಕ್ರಮದ ವಾಸನೆ ಬಡಿದಿತ್ತು.
ಏನಿದು ವಿವಾದ?:
ನೀಟ್-ಯುಜಿ 2024, ಮೇ 5ರಂದು ನಡೆದಿತ್ತು ಮತ್ತು ಫಲಿತಾಂಶಗಳನ್ನು ಜೂನ್ 4ರಂದು ಘೋಷಿಸಲಾಗಿತ್ತು. ಜೂನ್ 14ರಂದು ಫಲಿತಾಂಶ ಘೋಷಣೆ ನಿರೀಕ್ಷೆ ಇದ್ದರೂ 10 ದಿನ ಮುಂಚಿತವಾಗೇ, ಅದೂ ಲೋಕಸಭಾ ಚುನಾವಣೆ ಫಲಿತಾಂಶದ ದಿನ ಫಲಿತಾಂಶವನ್ನು ಎನ್‌ಟಿಎ ಪ್ರಕಟಿಸಿ ನಾನಾ ಸಂದೇಹಗಳಿಗೆ ನಾಂದಿ ಹಾಡಿತ್ತು. ಇದೇ ವೇಳೆ, ಹಿಂದೆಂದೂ ಕಂಡು ಕೇಳರಿಯದ ರೀತಿ 67 ವಿದ್ಯಾರ್ಥಿಗಳಿಗೆ 720ಕ್ಕೆ 720 ಅಂಕ ಬಂದಿತ್ತು. ನೀಟ್‌ನಲ್ಲಿ ಪ್ರತಿ ಪ್ರಶ್ನೆ 4 ಅಂಕದ್ದಾದರೂ ಕೆಲವು ವಿದ್ಯಾರ್ಥಿಗಳಿಗೆ 718-719 ಅಂಕ ಬಂದಿರುವುದು ಸಂದೇಹಗಳಿಗೆ ಇಂಬು ನೀಡಿತ್ತು. ಇನ್ನು ಉತ್ತರ ಭಾರತದ 6 ಆಯ್ದ ಕೇಂದ್ರಗಳ 1500 ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡಿಕೆಯಲ್ಲಿ ವಿಳಂಬವಾಗಿದೆ ಎಂಬ ಕಾರಣ ನೀಡಿ 45 ಗ್ರೇಸ್ ಅಂಕ ನೀಡಲಾಗಿತ್ತು. ಇದು ವಿದ್ಯಾರ್ಥಿಗಳ ಅನುಮಾನಕ್ಕೆ ಕಾರಣವಾಗಿದ್ದಲ್ಲದೇ ದೇಶಾದ್ಯಂತ ಪ್ರತಿಭಟನೆಗೆ ವಿದ್ಯಾರ್ಥಿಗಳು ಮುಂದಾಗಿದ್ದರು. ಈ ಮಧ್ಯೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ವಿಚಾರವನ್ನು ಕೆಟ್ಟದಾಗಿ ನಿರ್ವಹಿಸಿದ್ದಕ್ಕಾಗಿ ಎನ್‌ಟಿಎ ಮೇಲೆ ಚಾಟಿ ಬೀಸಿತ್ತು..
ಹೀಗಿರುವಾಗ ಇಂದು ವಿಶೇಷ ತನಿಖಾ ತಂಡದಿಂದ ಬಂಧನಕ್ಕೊಳಗಾಗಿರುವ ರವಿ ಅತ್ರಿ ಈ ಹಿಂದೆಯೂ ವಿವಿಧ ರಾಜ್ಯಗಳಲ್ಲಿ ನಡೆದ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ. ಸಾಲ್ವರ್ ಗ್ಯಾಂಗ್ ಎಂಬ ಹೆಸರಿನಲ್ಲಿ ಈತ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಬರೆದಿದ್ದ ಪ್ರಶ್ನೆ ಪತ್ರಿಕೆಗಳನ್ನು ಅಪ್ಲೋಡ್ ಮಾಡುತ್ತಿದ್ದ. 2012ರಲ್ಲಿಯೂ ಕೂಡ ವೈದ್ಯಕೀಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಈತನನ್ನು ಬಂಧಿಸಿದ್ದರು. ಆರಂಭದಲ್ಲಿ ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸಹಚರರು ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿದ ಬಿಹಾರ ಪೊಲೀಸರು ರಾಜ್ಯದ ಗಡಿ ದಾಟಿ ತಮ್ಮ ತನಿಖೆಯನ್ನು ವಿಸ್ತರಿಸಿದರು. ಹೀಗಾಗಿ ಪ್ರಮುಖ ಆರೋಪಿ ರವಿ ಅತ್ರಿಯನ್ನು ಇಂದು ಉತ್ತರ ಪ್ರದೇಶ ಎಸ್‌ಟಿಎಫ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ನಾಳೆ 1,563 ವಿದ್ಯಾರ್ಥಿಗಳಿಗೆ NEET ಮರು ಪರೀಕ್ಷೆ
2007 ರಲ್ಲಿ, ಅತ್ರಿ ಅವರ ಕುಟುಂಬವು ಆತನನ್ನು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ಮಾಡುವುದಕ್ಕಾಗಿ ರಾಜಸ್ಥಾನದ ಕೋಟಾಗೆ ಕಳುಹಿಸಿತು. ಆದರೆ 2012ರಲ್ಲಿ ಪರೀಕ್ಷೆ ತೇರ್ಗಡೆಯಾದ ಆತ ಪಿಜಿಐ ರೋಹ್ಟಕ್‌ನಲ್ಲಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದಿದ್ದ. ಆದರೆ ನಾಲ್ಕನೇ ವರ್ಷದಲ್ಲಿ ಆತ ಪರೀಕ್ಷೆಗೆ ಹಾಜರಾಗಲಿಲ್ಲ. ಅಷ್ಟರಲ್ಲಾಗಲೇ ಆತ ಪರೀಕ್ಷಾ ಮಾಫಿಯಾದ ಸಂಪರ್ಕಕ್ಕೆ ಬಂದಿದ್ದ ಹಾಗೂ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಇತರ ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ಈ ದಂಧೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಪರೀಕ್ಷೆ ಪಾಸ್‌ಗಾಗಿ ಲಂಚ: ನೀಟ್ ಹಗರಣದಲ್ಲಿ ಕನ್ನಡಿಗರೂ ಭಾಗಿ!