Asianet Suvarna News Asianet Suvarna News

ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಈ ವರ್ಷ ದಾಖಲಾಗುವ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್

* ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ವಿಧ್ಯುಕ್ತ ಜಾರಿ
* ದೇಶದಲ್ಲೇ ಎಲ್ಲರಿಗಿಂತ ಮೊದಲೇ ಕರ್ನಾಟಕದ ದಾಪುಗಾಲು 
* ವರ್ಚುಯಲ್ ಸಭೆಯಲ್ಲಿ ಹಸಿರು ನಿಶಾನೆ ತೋರಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
* ಈ ವರ್ಷ ದಾಖಲಾಗುವ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿ

National Education Policy 2020 launched in Karnataka On August 23 rbj
Author
Bengaluru, First Published Aug 23, 2021, 5:17 PM IST

ಬೆಂಗಳೂರು, (ಆ.23): ಇಡೀ ದೇಶದಲ್ಲಿಯೇ ಎಲ್ಲ ರಾಜ್ಯಗಳಿಗಿಂತ ಮೊದಲು ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು  ಇಂದು (ಆ.23) ವಿಧ್ಯುಕ್ತವಾಗಿ ಜಾರಿಗೆ ತರಲಾಯಿತು. ಇದರೊಂದಿಗೆ ದೇಶದಲ್ಲೇ ಎಲ್ಲರಿಗಿಂತ ಮೊದಲು ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆ ಇರಿಸಿದಂತಾಗಿದೆ. 

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನವದೆಹಲಿಯಿಂದಲೇ ವರ್ಚುಯಲ್ ವೇದಿಕೆ ಮೂಲಕ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಹಸಿರು ನಿಶಾನೆ ತೋರಿಸಿದರಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಇಂದಿನಿಂದ ಹೊಸ ಮನ್ವಂತರ ಆರಂಭವಾಗಿದೆ ಎಂದು ಘೋಷಿಸಿದರು. 

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ದಿನವೇ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಘೋಷಿಸಿದ ಸಿಎಂ

ಇದೇ ವೇದಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕಲಿಕೆಗೆ ಉನ್ನತ ಶಿಕ್ಷಣ ವಿಭಾಗದಲ್ಲಿ ಇಂದಿನಿಂದಲೇ ವಿದ್ಯಾರ್ಥಿಗಳ ದಾಖಲಾತಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಬಾರಿ ಮೊದಲ ವರ್ಷದ ಪದವಿಗೆ ದಾಖಲಾಗುವ ಎಲ್ಲ ವಿದ್ಯಾರ್ಥಿಗಳಿಗೂ ಸರಕಾರವೇ ಉಚಿತವಾಗಿ ಟ್ಯಾಬ್ಲೆಟ್ ಪಿಸಿಗಳನ್ನು ನೀಡಲಿದೆ ಎಂದು ಘೋಷಣೆ ಮಾಡಿದರು. 

ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ನೀಡುವ ವಿಚಾರವಾಗಿ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥನಾರಾಯಣ ಅವರು ನನಗೆ ಸಲಹೆ ನೀಡಿದ್ದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅವುಗಳ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಹೀಗಾಗಿ ಈ ಬಾರಿ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ಆದಷ್ಟು ಬೇಗ ನೀಡಲಾಗುವುದು ಎಂದು ಸಿಎಂ ಹೇಳಿದರು. 

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಎರಡು ವರ್ಷ ಮಾತೃಭಾಷೆ ಕಡ್ಡಾಯವಾಗಿ ಕಲಿಯಬೇಕು

ಅಲ್ಲದೆ, ರಾಜ್ಯದ ಡಿಜಿಟಲ್ ನೀತಿ ಹಾಗೂ ಸಂಶೋಧನೆ- ಅಭಿವೃದ್ಧಿ ನೀತಿಯನ್ನೂ ಈ ವರ್ಷದಿಂದಲೇ ಜಾರಿ ಮಾಡಲಾಗುವುದು ಎಂದು ಘೋಷಣೆ ಮಾಡಿದರು. 

ರಾಜ್ಯದ ಗುಣಗಾನ ಮಾಡಿದ ಪ್ರಧಾನ್: 
National Education Policy 2020 launched in Karnataka On August 23 rbj

ನಮ್ಮ ದೇಶದ ಎಲ್ಲ ರಾಜ್ಯಗಳ ಪೈಕಿ ಎಲ್ಲರಿಗಿಂತ ಮೊದಲೇ ಕರ್ನಾಟಕ ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದಿದ್ದು, ಇದು ರಾಜ್ಯದ ದಿಕ್ಕನ್ನೇ ಬದಲಿಸುತ್ತದೆ ಎಂದು ಹೇಳಿದರು. 

ಕರ್ನಾಟಕದಲ್ಲಿ ಇಂದಿನಿಂದ ಹೊಸ ಮನ್ವಂತರ ಆರಂಭವಾಗಿದ್ದು, ಇಡೀ ದೇಶದಲ್ಲೇ ಕರ್ನಾಟಕವು ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ದಾಪುಗಾಲು ಇಟ್ಟಿದೆ. ಇಡೀ ದೇಶವನ್ನೇ ನವ ದಿಕ್ಕಿನತ್ತ ಚಲಿಸುವಂತೆ ಮಾಡಬಲ್ಲ ಶಿಕ್ಷಣ ನೀತಿಯು, ಬಹ ಶಿಸ್ತಿಯ ಹಾಗೂ ಬಹು ಆಯ್ಕೆಯ ಕಲಿಕೆಗೆ ಉತ್ತೇಜನ ನೀಡಲಿದ್ದು, ವಿದ್ಯಾರ್ಥಿಗಳು ತಮಗಿಷ್ಟವಾದ ವಿಷಯವನ್ನು ಮುಕ್ತವಾಗಿ ಅಧ್ಯಯನ ಮಾಡಬಹುದಾಗಿದೆ ಎಂದು ಪ್ರಧಾನ್ ಹೇಳಿದರು. 

ಇಂದಿನಿಂದ ವಿದ್ಯಾರ್ಥಿಗಳ ದಾಖಲಾತಿ: 
National Education Policy 2020 launched in Karnataka On August 23 rbj

ಶಿಕ್ಷಣ ನೀತಿ ಜಾರಿಗೆ ಬಂದ ಬೆನ್ನಲ್ಲೇ ಉನ್ನತ ಶಿಕ್ಷಣಕ್ಕೆ ನೂತನ ವಿದ್ಯಾರ್ಥಿಗಳನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ದಾಖಲು ಮಾಡಿಕೊಳ್ಳುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ವೇದಿಕೆಯಲ್ಲೇ ಚಾಲನೆ ನೀಡಿದರು. ಇದರನ್ವಯ ಅಕ್ಟೋಬರ್ 1ರಿಂದ ಪದವಿ ಮೊದಲ ವರ್ಷದ ತರಗತಿಗಳು ಆರಂಭವಾಗಲಿವೆ ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಶಿಕ್ಷಣ ನೀತಿಯನ್ನು ಎಲ್ಲರಿಗಿಂತ ಮೊದಲೇ ಜಾರಿ ಮಾಡುತ್ತಿರುವ ನಮ್ಮ ರಾಜ್ಯವೂ, ಮುಂಬರುವ ದಿನಗಳಲ್ಲಿ ಡಿಜಿಟಲ್ ಕಲಿಕೆಯನ್ನು ಉತ್ತೇಜಿಸಲು, ಅಂತರ್ಜಾಲದಿಂದ ಪ್ರತಿ ಹಳ್ಳಿಯನ್ನು ಬೆಸೆಯಲು ಕಟಿಬದ್ಧವಾಗಿದ್ದು, ಇದಕ್ಕಾಗಿ ʼಹೊಸ ಡಿಜಿಟಲ್ ಪಾಲಸಿʼ ಜಾರಿಗೆ ತರುವುದಾಗಿ ಘೋಷಣೆ ಮಾಡಿದರು. 

ಮೊದಲಿನಿಂದಲೂ ಕರ್ನಾಟಕವು ಶೈಕ್ಷಣಿಕವಾಗಿ ಅದರಲ್ಲೂ ವೈಜ್ಞಾನಿಕ ಅಧ್ಯಯನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಹೀಗಾಗಿ ನೂತನ ʼಸಂಶೋಧನೆ ಮತ್ತು ಅಭಿವೃದ್ಧಿ ನೀತಿʼಯನ್ನು ಜಾರಿಗೆ ತರಲಾಗುವುದು. ಈ ಮೂಲಕ ವೈಜ್ಞಾನಿಕ ಸಂಶೋಧನೆ, ಅಭಿವೃದ್ಧಿಗೆ ಅತಿ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. 

ನಿರ್ವಹಣಾ ವ್ಯವಸ್ಥೆಗೂ ಚಾಲನೆ: 
National Education Policy 2020 launched in Karnataka On August 23 rbj

ರಾಜ್ಯ ಸರಕಾರದ ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆಯಾದ ʼಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆʼ ಎಂಬ ವಿದ್ಯಾರ್ಥಿಗಳ ದಾಖಲಾತಿ ವ್ಯವಸ್ಥೆಗೂ ಇದೇ ವೇಳೆ ಮುಖ್ಯಮಂತ್ರಿ ಚಾಲನೆ ನೀಡಿದರು. 

ಆದ್ಯತೆಯ ಮೇರೆಗೆ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಹಕಾರ, ಸಂಪನ್ಮೂಲವನ್ನು ಒದಗಿಸಲಾಗುವುದು. ಇವತ್ತಿನಿಂದಲೇ ರಾಜ್ಯದಲ್ಲಿ ಅಧಿಕೃತವಾಗಿ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಇದಕ್ಕೆ ಪೂರಕವಾಗಿ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲೂ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕವೇ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದರು ಸಿಎಂ. 

ಎನ್ಇಪಿ ವೆಬ್ ಮತ್ತು ಸಹಾಯವಾಣಿ 
ರಾಷ್ಟೀಯ ಶಿಕ್ಷಣ ನೀತಿಯ ಜಾರಿ ಸಂದರ್ಭದಲ್ಲಿ ಯಾವುದೇ ಗೊಂದಲ, ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ಶಿಕ್ಷಣ ನೀತಿಯ ವೆಬ್ಸೈಟ್ ಮತ್ತು ಸಹಾಯವಾಣಿಗೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡಿದರು. 080-24486666 ಸಂಖ್ಯೆಯನ್ನು ಎಲ್ಲರೂ ಸಂಪರ್ಕ ಮಾಡಬಹುದು. 

ಜಾಗತಿಕ ಮಟ್ಟಕ್ಕೆ ಉನ್ನತ ಶಿಕ್ಷಣ 
National Education Policy 2020 launched in Karnataka On August 23 rbj
ಇದೇ ಕಾರ್ಯಕ್ರಮದಲ್ಲಿ ಹೊಸ ಶಿಕ್ಷಣ ನೀತಿಯಡಿ ಉನ್ನತ ಶೀಕ್ಷಣವನ್ನು ಜಾಗತೀಕರಣಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಮಾಂಟಿಗೋಮೆರಿ ಕಮ್ಯುನಿಟಿ ಕಾಲೇಜಿನ ಜತೆ ಕಾಲೇಜು ಶಿಕ್ಷಣ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅನಾವರಣಗೊಳಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು, ಶಿಕ್ಷಣ ನೀತಿ ಜಾರಿಯ ಬಗ್ಗೆ ಈವರೆಗೆ ರಾಜ್ಯ ಸರಕಾರ ಕೈಗೊಂಡ ಎಲ್ಲ ಕ್ರಮಗಳನ್ನು ಪಟ್ಟಿ ಮಾಡಿದರಲ್ಲದೆ, ಹೊಸ ಶಿಕ್ಷಣ ನೀತಿಯು ರಾಜ್ಯಕ್ಕೆ ಅತ್ಯಗತ್ಯವಾಗಿತ್ತು. ರಾಜ್ಯದ ಸಮಗ್ರ ವಿಕಾಸಕ್ಕೆ ಇದು ಮುಂದಿನ ದಿನಗಳಲ್ಲಿ ದೊಡ್ಡ ಕಾಣಿಕೆ ನೀಡಲಿದೆ ಎಂದರು. 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಕೂಡ ಮಾತನಾಡಿದರು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಇಲಾಖೆಯ ಆಯುಕ್ತ ಪ್ರದೀಪ್ ಶಿಕ್ಷಣ ನೀತಿಯ ಪ್ರಾತ್ಯಕ್ಷಿಕೆ ನೀಡಿದರು. ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲ ಜೋಶಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ನೀತಿ ನಿರೂಪಕರಿಗೆ ಗೌರವ
National Education Policy 2020 launched in Karnataka On August 23 rbj

ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಅಧ್ಯಕ್ಷರಾಗಿದ್ದ ಇಸ್ರೋ ಸಂಸ್ಥೆಯ ವಿಶ್ರಾಂತ ಅಧ್ಯಕ್ಷ ಡಾ.ಕಸ್ತೂರಿ ರಂಗನ್, ಶಿಕ್ಷಣ ತಜ್ಞರಾದ ಪ್ರೊ.ಎಂ.ಕೆ.ಶ್ರೀಧರ್, ಪ್ರೊ.ಟಿ.ವಿ.ಕಟ್ಟೀಮನಿ ಹಾಗೂ ಅನುರಾಗ್ ಬೇಹರ್ ಅವರನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದೇ ವೇಳೆ ಸನ್ಮಾನಿಸಿ ಗೌರವಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರಿ ರಂಗನ್ ಅವರು; ಕರ್ನಾಟಕ ಸರಕಾರವು ಅತಿದೊಡ್ಡ, ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ಶಿಕ್ಷಣ ನೀತಿಯೂ ಪ್ರತಿಯೊಂದು ಹಂತದಲ್ಲೂ ಸಮಾಜವನ್ನು ಜ್ಞಾನದ ಮೂಲಕ ಬದಲಾವಣೆ ಮಾಡುತ್ತಾ ಹೋಗುತ್ತದೆ ಎಂದರು. 

ಶಿಕ್ಷಣ ನೀತಿಯ ಕರಡು ಸಿಕ್ಕಿದ ಕೂಡಲೇ ರಾಜ್ಯ ಸರಕಾರ ಕಾರ್ಯಪಡೆಯನ್ನು ರಚನೆ ಮಾಡಿತು. ಕೇಂದ್ರ ಸರಕಾರ ನೀತಿಯನ್ನು ಘೋಷಣೆ ಮಾಡಿದ ನಂತರ ನಾನು ಬೆಂಗಳೂರಿಗೆ ವಾಪಸ್ ಬಂದೆ. ಆ ಕೂಡಲೇ ನಮ್ಮ ಮನೆಗೆ ಬಂದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಡಾ.ಅಶ್ವತ್ಥನಾರಾಯಣ ಅವರು, ಆದಾಗ್ಗೆ ಕೈಗೊಂಡಿದ್ದ ಕ್ರಮಗಳ ಬಗ್ಗೆ ವಿವರಿಸಿದರು. ಅವರಿಬ್ಬರೂ ನಮಗಿಂತ ವೇಗವಾಗಿದ್ದರು. ನನಗೆ ಬಹಳ ಆಶ್ಚರ್ಯವಾಯಿತು. ಅಂದು ನಡೆದ ಚರ್ಚೆಯಂತೆ ಇಂದು ಶಿಕ್ಷಣ ನೀತಿ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬರುತ್ತಿದೆ ಎಂದು ಕಸ್ತೂರಿ ರಂಗನ್ ಹೇಳಿದರು.

ಇವತ್ತು ನನಗೆ ಅತಿ ಹೆಚ್ಚು ಸಂತಸದ ದಿನ. ಸಚಿವ ಅಶ್ವತ್ಥನಾರಾಯಣ ಅವರು ಹೇಳಿದಂತೆ‌ ಮಾಡಿ ತೋರಿಸಿದರು. ಸಣ್ಣ ಪುಟ್ಟ ದೋಷಗಳು ಬರಬಹುದು. ಆದರೆ ಎದೆಗುಂದದೆ ಕೆಲಸ‌ ಮಾಡಿ. ಈ ವಿಷಯದಲ್ಲಿ ಅಶ್ವತ್ಥನಾರಾಯಣ  ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

Follow Us:
Download App:
  • android
  • ios