ಶಾಲೆ ಮಕ್ಕಳಿಗೆ ಮೊಟ್ಟೆ ಮುಖ್ಯ ಶಿಕ್ಷಕರ ಕಿಸೆಗೆ ಭಾರ..!
ಮೊಟ್ಟೆ ಬೆಲೆ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಇದಕ್ಕೆ ಅನುಗುಣವಾಗಿ ಅನುದಾನ ಹೆಚ್ಚಿಸಬೇಕೆಂದು ರಾಜ್ಯದ ವಿವಿಧ ಶಾಲೆಗಳ ಶಾಲಾಭಿವೃದ್ಧಿ ಸಮಿತಿಗಳಿಂದ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಣ ಇಲಾಖೆಗೆ ಮನವಿಯನ್ನೂ ಸಲ್ಲಿಸಲಾಗಿದೆ. ಆದರೆ, ಇಲಾಖೆಯು ಈ ಬಗ್ಗೆ ಇದುವರೆಗೆ ಗಮನವನ್ನೇ ಹರಿಸಿಲ್ಲ ಎನ್ನುತ್ತಾರೆ ವಿವಿಧ ಶಾಲಾ ಎಸ್‌ಡಿಎಂಸಿ ಸದಸ್ಯರು.
ಲಿಂಗರಾಜು ಕೋರಾ
ಬೆಂಗಳೂರು(ನ.25): ಸರ್ಕಾರಿ, ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸಲು ಸರ್ಕಾರ ನೀಡುತ್ತಿರುವ ಹಣ ಸಾಲುತ್ತಿಲ್ಲ. ಇದರಿಂದ ನಮ್ಮ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದು ಶಿಕ್ಷಕರ ವಲಯದಿಂದ ಆರೋಪ ಕೇಳಿ ಬಂದಿದೆ.
8ನೇ ತರಗತಿ ವರೆಗಿನ ಮಕ್ಕಳಿಗೆ ಇದ್ದ ವಾರದಲ್ಲಿ 1 ದಿನ ಮೊಟ್ಟೆ ನೀಡುವ ಯೋಜನೆಯನ್ನು ಸರ್ಕಾರದ ಕಳೆದ ಮಾರ್ಚ್‌ನಿಂದ 9 ಮತ್ತು 10ನೇ ತರಗತಿ ಮಕ್ಕಳಿಗೂ ವಿಸ್ತರಿಸಿ ವಾರದಲ್ಲಿ ಎರಡು ದಿನ ಮೊಟ್ಟೆ ನೀಡುತ್ತಾ ಬರುತ್ತಿದೆ. ಇದಕ್ಕೆ ವಾರ್ಷಿಕ 60 ಲಕ್ಷ ಮಕ್ಕಳಿಗೆ 300 ಕೋಟಿ ರು. ವೆಚ್ಚದ ಅಂದಾಜು ಮಾಡಲಾಗಿತ್ತು.
ಬ್ರಾಹ್ಮಣ ವಿದ್ಯಾರ್ಥಿನಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಶಿಕ್ಷಕ!
ಸರ್ಕಾರ ಒಂದು ಮೊಟ್ಟೆಗೆ 6 ರು. ನಂತೆ ಶಾಲೆಗಳಿಗೆ ಅನುದಾನ ನೀಡುತ್ತಿದ್ದರೂ ಇದರಲ್ಲಿ 30 ಪೈಸೆ ಮೊಟ್ಟೆ ಬೇಯಿಸುವ ಹಾಗೂ ಸುಲಿಯುವ ವೆಚ್ಚಕ್ಕೆ, 20 ಪೈಸೆ ಸಾರಿಗೆ ವೆಚ್ಚಕ್ಕೆ ಕಡಿತವಾಗಲಿದೆ. 5.50 ಪೈಸೆ ಮಾತ್ರ ಮೊಟ್ಟೆ ಖರೀದಿಗೆ ಉಳಿಯುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ಕನಿಷ್ಠ 6 ರು.ನಿಂದ ಗರಿಷ್ಠ 6.50 ರು. ಬೀಳುತ್ತಿದೆ. ಒಂದು ವಾರ ಇದ್ದ ದರ ಮತ್ತೊಂದು ವಾರಕ್ಕೆ ಇರುವುದಿಲ್ಲ. ಇದರಿಂದ ಪ್ರತಿ ಮೊಟ್ಟೆ 50 ಪೈಸೆಯಿಂದ 1 ರು. ವರೆಗೆ ಹೆಚ್ಚುವರಿ ಹೊರೆಯಾಗುತ್ತಿದ್ದು, ಇದನ್ನು ನಮ್ಮ ವೇತನದಲ್ಲಿ ಭರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಶೇ.80ಕ್ಕಿಂತ ಹೆಚ್ಚು ಮಕ್ಕಳು ಮೊಟ್ಟೆ ಸೇವಿಸುತ್ತಾರೆ. ಜೊತೆಗೆ ತಂದ ಮೊಟ್ಟೆಯಲ್ಲಿ ಕೆಲವು ಒಡೆದುಹೋದರೆ ಅವುಗಳ ವೆಚ್ಚವೂ ನಮ್ಮ ಮೇಲೇ ಬೀಳುತ್ತಿದೆ ಎನ್ನುವುದು ಶಾಲಾ ಮುಖ್ಯಶಿಕ್ಷಕರ ದೂರಾಗಿದೆ.
ಈ ಮಧ್ಯೆ, ಮೊಟ್ಟೆ ಬೆಲೆ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಇದಕ್ಕೆ ಅನುಗುಣವಾಗಿ ಅನುದಾನ ಹೆಚ್ಚಿಸಬೇಕೆಂದು ರಾಜ್ಯದ ವಿವಿಧ ಶಾಲೆಗಳ ಶಾಲಾಭಿವೃದ್ಧಿ ಸಮಿತಿಗಳಿಂದ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಣ ಇಲಾಖೆಗೆ ಮನವಿಯನ್ನೂ ಸಲ್ಲಿಸಲಾಗಿದೆ. ಆದರೆ, ಇಲಾಖೆಯು ಈ ಬಗ್ಗೆ ಇದುವರೆಗೆ ಗಮನವನ್ನೇ ಹರಿಸಿಲ್ಲ ಎನ್ನುತ್ತಾರೆ ವಿವಿಧ ಶಾಲಾ ಎಸ್‌ಡಿಎಂಸಿ ಸದಸ್ಯರು.
ಇನ್ನು ಮಾರುಕಟ್ಟೆಯಲ್ಲಿ ಮೊಟ್ಟೆ ದರ ಪರಿಶೀಲಿಸಿದಾಗ ಒಂದು ಕ್ರೇಟ್ ಮೊಟ್ಟೆ (30 ಮೊಟ್ಟೆ) ಬೆಲೆ 185 ರು. ಇದೆ. ನಾವು ಶಾಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದರೆ ಇದನ್ನು 180 ರು. ನೀಡುತ್ತಿದ್ದೇವೆ. ಆದರೆ, ಸಾಗಣೆ ವೆಚ್ಚ ಶಾಲೆಯವರೇ ಭರಿಸಬೇಕು. ಈ ಬೆಲೆಗೆ ನಾವು ಶಾಲೆಗೆ ತಲುಪಿಸಲು ಆಗುವುದಿಲ್ಲ ಎನ್ನುತ್ತಾರೆ ಯಶವಂತಪುರದ ಮೊಟ್ಟೆ ವ್ಯಾಪಾರಿ ಮೈಲಾರಪ್ಪ. ಅಲ್ಲಿಗೆ ಒಂದು ಮೊಟ್ಟೆಗೆ 6 ರು. ಬಿದ್ದಂತಾಯಿತು. ಇದು ಬೆಂಗಳೂರಿನದ್ದಾದರೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾಗಣೆ ವಚ್ಚದ ಮೇಲೆ ಮೊಟ್ಟೆ ಬೆಲೆ 6.50 ರು.ವರೆಗೆ ಇದೆ ಎನ್ನುತ್ತಾರೆ ಮೈಸೂರು ರಸ್ತೆಯ ಶಾಲಾ ಮುಖ್ಯ ಶಿಕ್ಷಕರೊಬ್ಬರು. ಹಾಗಾಗಿ ಸರ್ಕಾರ ಈಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆಗೆ ನೀಡುವ ಅನುದಾನ ಹೆಚ್ಚಿಸಬೇಕೆಂಬುದು ಮುಖ್ಯ ಶಿಕ್ಷಕರ ಆಗ್ರಹವಾಗಿದೆ.
ಶಾಲಾ ಮಕ್ಕಳಿಗೆ ಮೊಟ್ಟೆಯ ಜತೆ ವಿಶೇಷ ಪೌಷ್ಠಿಕ ಆಹಾರ: ಸಚಿವ ಮಧು ಬಂಗಾರಪ್ಪ
ಅಧಿಕಾರಿಗಳು ಹೇಳೋದೇನು:
ಸದ್ಯ 2023ನೇ ಸಾಲಿಗೆ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ನಿಗದಿಪಡಿಸಿರುವ ದರದಂತೆ ಜಿಲ್ಲಾ ಪಂಚಾಯಿತಿಗಳ ಮೂಲಕ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಶಾಲೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾಗೂ ಒಬ್ಬನೇ ವ್ಯಾಪಾರಿ ಮೂಲಕ ಮೊಟ್ಟೆ ಖರೀದಿಸಿದರೆ ಕಡಿಮೆ ದರದಲ್ಲಿ ಮೊಟ್ಟೆ ಖರೀದಿಸಬಹುದಾಗಿದೆ. ಸರ್ಕಾರ ನೀಡುತ್ತಿರುವ ಮೊತ್ತ ಸಾಲುವುದಿಲ್ಲ ಎನ್ನುವುದು ಸರಿಯಲ್ಲ. ಒಂದು ವೇಳೆ ಹಣ ಸಾಲುತ್ತಿಲ್ಲ ಎಂದು ಮನವಿ ಕೊಟ್ಟರೆ ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎನ್ನುತ್ತಾರೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು.
ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ಖರೀದಿ ಮಾಡಲು ಕೊಡುತ್ತಿರುವ ಹಣಕ್ಕೂ ಮಾರುಕಟ್ಟೆ ದರಕ್ಕೂ ಪ್ರತಿ ಮೊಟ್ಟೆಗೆ ಕನಿಷ್ಠ 80 ಪೈಸೆಗೂ ಹೆಚ್ಚು ವ್ಯತ್ಯಾಸವಾಗುತ್ತಿದೆ. ಇದನ್ನು ಹೇಗೆ ಹೊಂದಾಣಿಕೆ ಮಾಡಬೇಕೆಂಬುದು ತಿಳಿಯದೆ ಮುಖ್ಯ ಶಿಕ್ಷಕರೇ ತಮ್ಮ ಜೇಬಿಂದ ಹಣ ಹಾಕುವಂತಾಗಿದೆ. ಹಣ ಸಾಲುತ್ತಿಲ್ಲ ಎಂದು ಮೊಟ್ಟೆ ಕೊಡದಿದ್ದರೆ ಮಕ್ಕಳು, ಪೋಷಕರ ಆಕ್ರೋಶಕ್ಕೆ ತುತ್ತಾಗಬೇಕು. ಹಾಗಾಗಿ ಸರ್ಕಾರ ಕೂಡಲೇ ಮೊಟ್ಟೆಗೆ ನೀಡುವ ಹಣ ಪರಿಷ್ಕರಿಸಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಯಪ್ಪ ತಿಳಿಸಿದ್ದಾರೆ.