ಬೆಂಗಳೂರು(ಫೆ.12): ಶಾಲಾ ಶುಲ್ಕ ಪಾವತಿಸದ ಕಾರಣ ಪ್ರಾಂಶುಪಾಲರಿಂದ ಬಹಿರಂಗವಾಗಿ ಅವಮಾನಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ನಗರದ ವಿದ್ಯಾರ್ಥಿಯ ಮನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಗುರುವಾರ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

ನಗರದ ಎಚ್‌ಎಸ್‌ಆರ್‌ ಲೇಔಟ್‌ನ ಸೋಮಸುಂದರ ಪಾಳ್ಯದ ರವೀಂದ್ರ ಭಾರತಿ ಗ್ಲೋಬಲ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಾಲಾ ಶುಲ್ಕ ಪಾವತಿಸಿಲ್ಲವೆಂಬ ಕಾರಣಕ್ಕೆ ಶಾಲೆಯ ಪ್ರಾಚಾರ್ಯರು ಎಲ್ಲ ವಿದ್ಯಾರ್ಥಿಗಳ ಮುಂದೆ ನಿಂದಿಸಿ ಅವಮಾನಿಸಿ ಶಾಲಾ ಮಟ್ಟದ ಪರೀಕ್ಷೆಗೆ ನಿರಾಕರಣೆ ಮಾಡಿದ್ದರು. ಸಹಪಾಠಿಗಳ ಮುಂದೆ ಆದ ಅವಮಾನದಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಮುಂದಾಗಿದ್ದ. ಈ ವಿಷಯ ತಿಳಿದ ಸಚಿವರು, ವಿದ್ಯಾರ್ಥಿ ಮತ್ತು ಆತನ ಪೋಷಕರಿಗೆ ಧೈರ್ಯ ತುಂಬಿದ್ದಾರೆ.

ಏ.1ಕ್ಕೇ ಈ ಶಾಲೆ ಶೈಕ್ಷಣಿಕ ವರ್ಷ ಆರಂಭಕ್ಕೆ ಸುತ್ತೋಲೆ

‘ನೀನು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇಷ್ಟುದಿನ ಕಷ್ಟದಲ್ಲಿ ಸಂಪಾದನೆ ಮಾಡಿ ಬೆಳೆಸಿ, ನಿನ್ನ ಮೇಲೆ ಅಪಾರ ವಿಶ್ವಾಸವಿಟ್ಟುಕೊಂಡಿರುವ ತಂದೆ ತಾಯಿ, ತಂಗಿಗೆ ಯಾರು ಗತಿ. ಅವರ ಕಥೆ ಏನಾಗುತಿತ್ತು ಎಂಬುದನ್ನು ನೀನು ಯೋಚಿಸಿದ್ದೀಯಾ?, ಆತ್ಮಹತ್ಯೆಗೆ ಯಾವತ್ತೂ ಪ್ರಯತ್ನಿಸಬಾರದು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಡೆಯಬೇಕು. ನಿನ್ನ ತಂದೆ ತಾಯಿಗಳಿಗೆ ನೀನೇ ಧೈರ್ಯ ಹೇಳಬೇಕು’ ಎಂದು ಸಚಿವರು ಕಿವಿಮಾತು ಹೇಳಿದರು.

ಶಾಲೆಗೆ ನೋಟಿಸ್‌

ವಿದ್ಯಾರ್ಥಿಗಳನ್ನು ನಿಂದಿಸಿ, ಅಪಮಾನ ಮಾಡಿ ದುರ್ನಡತೆಯ ಪ್ರದರ್ಶಿಸಿದ ಶಾಲೆಗೆ ನೋಟಿಸ್‌ ನೀಡಲಾಗಿದೆ. ಕೂಡಲೇ ಸಮಜಾಯಿಸಿ ನೀಡದಿದ್ದರೆ, ವಿದ್ಯಾರ್ಥಿಯ ಆತ್ಮಹತ್ಯೆ ಯತ್ನಕ್ಕೆ ಶಾಲೆಯೇ ನೇರ ಹೊಣೆಯಾಗಿರುವುದರಿಂದ ಅಮಾನವೀಯತೆ ಮತ್ತು ಕ್ರೂರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶಾಲೆಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುತ್ತದೆ ಮತ್ತು ಶಾಲೆಯ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆಯಲಾಗುತ್ತದೆ ಎಂದು ಸೂಚಿಸಿ ಶಾಲೆಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.