ನ.30 ಅರ್ಜಿ ಸಲ್ಲಿಕೆಗೆ ಕಡೇ ದಿನ| ಜ.24ರಂದು ಪರೀಕ್ಷೆ| ಕೇಂದ್ರ ಮಾನವ ಸಂಪನ್ಮೂಲ ಇಲಾಖೆ (ಎಂಎಚ್‌ಆರ್‌ಡಿ) ರಾಜ್ಯ ಮತ್ತು ರಾಷ್ಟ್ರಮಟ್ಟ ಎರಡು ಹಂತದಲ್ಲಿ ಪ್ರತಿ ವರ್ಷ ಪರೀಕ್ಷೆ| ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಎನ್‌ಟಿಎಸ್‌-ಇ ವಿದ್ಯಾರ್ಥಿ ವೇತನಕ್ಕೆ ಅರ್ಹ| 

ಬೆಂಗಳೂರು(ನ.27): ಎಸ್ಸೆಸ್ಸೆಲ್ಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಎನ್‌ಸಿಇಆರ್‌ಟಿ ಮಾರ್ಗದರ್ಶನದಲ್ಲಿ ನಡೆಯುವ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಗೆ (ಎನ್‌ಟಿಎಸ್‌-ಇ) ರಾಜ್ಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಮನವಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ (ಎಂಎಚ್‌ಆರ್‌ಡಿ) ರಾಜ್ಯ ಮತ್ತು ರಾಷ್ಟ್ರಮಟ್ಟ ಎರಡು ಹಂತದಲ್ಲಿ ಪ್ರತಿ ವರ್ಷ ಪರೀಕ್ಷೆ ನಡೆಯುತ್ತದೆ. ಪ್ರಸ್ತುತ ರಾಜ್ಯಮಟ್ಟದ ಎನ್‌ಟಿಎಸ್‌-ಇ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು ನ.30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜ.24ರಂದು ಪರೀಕ್ಷೆ ನಡೆಯಲಿದೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ, ಸ್ಥಳೀಯ ಸಂಸ್ಥೆಗಳ ಹಾಗೆಯೇ ದೂರಶಿಕ್ಷಣದಲ್ಲಿ ಅಭ್ಯಸಿಸುತ್ತಿರುವ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಹರು. ವಿದ್ಯಾರ್ಥಿಗಳು ಕೆಎಸ್‌ಇಇಬಿ ವೆಬ್‌ಸೈಟ್‌ (www.kseeb.kar.nic.in) ಮೂಲಕ ಲಾಗಿನ್‌ ಆಗಿ ಅರ್ಜಿ ಸಲ್ಲಿಸಬಹುದು. ಅಥವಾ ಹೆಚ್ಚಿನ ವಿವರಗಳಿಗೆ ತಮ್ಮ ಶಾಲಾ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಕನ್ನಡದಲ್ಲು ಇನ್ನು ಎಂಜಿನಿಯರಿಂಗ್: ಐಐಟಿ, ಎನ್‌ಐಟಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ!

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ (ಕೆಎಸ್‌ಇಇಬಿ) ಕರ್ನಾಟಕ ಶಾಲಾ ಗುಣಮಟ್ಟಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕ್ಯುಎಸ್‌ಕ್ಯುಎಎಸಿ) ವತಿಯಿಂದ ನಡೆಯುವ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಅರ್ಹರಾದವರಿಗೆ ರಾಷ್ಟ್ರಮಟ್ಟದಲ್ಲಿ ಎರಡನೇ ಹಂತದ ಪರೀಕ್ಷೆ ನಡೆಯಲಿದ್ದು ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಎನ್‌ಟಿಎಸ್‌-ಇ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗುತ್ತಾರೆ. ಅರ್ಹರಾದವರಿಗೆ ಪಿಯು ವಿದ್ಯಾಭ್ಯಾಸಕ್ಕೆ ಮಾಸಿಕ 1200 ರು. ಮತ್ತು ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ಮಾಸಿಕ 2000 ರು. ಮತ್ತು ಯುಜಿಸಿ ನಿಯಮಾನುಸಾರ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ 080-23341615 ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.