ಪಿಯು ಪರೀಕ್ಷೆಯಲ್ಲಿ ಈ ಬಾರಿ ಎಲ್ಲರೂ ಪಾಸ್?: ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಿಷ್ಟು
* ಕನಿಷ್ಠ ಅಂಕ ಪಡೆಯದಿದ್ದರೆ ಉತ್ತೀರ್ಣರಾಗಲ್ಲ
* ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಬಿ.ಸಿ.ನಾಗೇಶ್
* ಈ ಬಾರಿ ಪರೀಕ್ಷೆಗೆ ನೋಂದಾಯಿಸಿಕೊಂಡ 18 ಸಾವಿರ ವಿದ್ಯಾರ್ಥಿಗಳು
ಬೆಂಗಳೂರು(ಆ.20): ಪ್ರಸ್ತುತ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಲ್ಲರನ್ನೂ ಪಾಸ್ ಮಾಡುವ ನಿಯಮ ಇರುವುದಿಲ್ಲ. ವಿದ್ಯಾರ್ಥಿ ಪರೀಕ್ಷೆಯನ್ನು ಹೇಗೆ ಎದುರಿಸಿದ್ದಾನೆ ಎಂಬುದರ ಆಧಾರದ ಮೇಲೆ ಉತ್ತೀರ್ಣ, ಅನುತ್ತೀರ್ಣ ಎರಡೂ ಇರುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಗುರುವಾರ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ, ಸುರಕ್ಷಾ ಕ್ರಮಗಳನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಪರೀಕ್ಷೆಗೆ 18 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ಬರೆದ ಎಲ್ಲರನ್ನೂ ಉತ್ತೀರ್ಣಗೊಳಿಸುವ ನಿಯಮ ಇಲ್ಲ. ಉತ್ತೀರ್ಣಕ್ಕೆ ಕನಿಷ್ಠ ಅಂಕಗಳನ್ನು ಪಡೆಯಲೇಬೇಕು. ಇಲ್ಲದಿದ್ದಲ್ಲಿ ಅನುತ್ತಿರ್ಣರಾಗುತ್ತಾರೆ ಎಂದು ತಿಳಿಸಿದ್ದಾರೆ.
1ರಿಂದ 8ನೇ ತರಗತಿ ಪ್ರಾರಂಭದ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ
ಮೊದಲ ದಿನದ ಗಣಿತ ವಿಷಯದ ಪರೀಕ್ಷೆಗೆ ಪುನರಾರ್ತಿತ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಹಿಂದೆ ನೀಡಿದ ಫಲಿತಾಂಶ ರದ್ದುಪಡಿಸಿಕೊಂಡು ಹೊಸದಾಗಿ ಪರೀಕ್ಷೆ ಬರೆಯುತ್ತಿದ್ದಾರೆ.
ಬೆಂಗಳೂರಿನ ವಾಣಿವಿಲಾಸ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸುರಕ್ಷಾ ಕ್ರಮಗಳನ್ನು ಪರಿಶೀಲನೆ ನಡೆಸಿದರು.